Fact Check: ಮುಸ್ಲಿಂ ವ್ಯಕ್ತಿ ಶಾಲಾ ಬಾಲಕಿಗೆ ಕಿರುಕುಳ ನೀಡಿದ ಘಟನೆ ಭಾರತದ್ದಲ್ಲ, ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ

ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ನಡೆದುಕೊಂಡು ಹೋಗುತ್ತಿರುವಾಗ ಆಕೆಯನ್ನು ಹಿಂಬಾಲಿಸಿ ಬಂದ ಮುಸ್ಲಿಂ ವ್ಯಕ್ತಿಯೊಬ್ಬ ಬಾಲಕಿಗೆ ದೈಹಿಕ ಕಿರುಕುಳ ನೀಡಲು ಮುಂದಾಗಿದ್ದ ನಂತರ ಆಕೆ ಚೀರಾಡಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇದರ ಸಿಸಿಟಿವಿ ದೃಶ್ಯಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಈಗ, “ಮುಸ್ಲಿಂ ವ್ಯಕ್ತಿಯೊಬ್ಬ ಶಾಲಾ ಬಾಲಕಿಗೆ ಕಿರುಕುಳ ನೀಡುತ್ತಿದ್ದಾಗ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು. ಭಾರತದಲ್ಲಿ ಇವರಿಂದ ಯಾರಿಗೂ ನೆಮ್ಮದಿಯಿಲ್ಲ, ಭಾರತ ಪಾಕಿಸ್ತಾನವಾಗಿ ಬದಲಾಗುತ್ತಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ ” ಎಂಬ ಸಂದೇಶದ ತಲೆಬರಹದೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಈ ಘಟನೆ ಭಾರತದಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಘಟನೆಯು ಬಾಂಗ್ಲಾದೇಶದ ದಿನಾಜ್‌ಪುರದಲ್ಲಿ ನಡೆದಿದೆ. ಬಾಂಗ್ಲಾ ನ್ಯೂಸ್ 24 ರ ಪ್ರಕಾರ, ದೌರ್ಜನ್ಯಕ್ಕೊಳಗಾದ ವಿಧ್ಯಾರ್ಥಿ 6 ನೇ ತರಗತಿಯಲ್ಲಿ ಓದುತ್ತಿದ್ದು. ಮಾರ್ಚ್ 17 ರಂದು ಶಾಲಾ ವಿದ್ಯಾರ್ಥಿನಿ ತನ್ನ ಸಹೋದರಿಯ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯ ನಂತರ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಬಾಂಗ್ಲಾದೇಶದ ಸಖಾವತ್‌ನ ಬಲುದಂಗ ಪ್ರದೇಶದ ಅರಿಫುಲ್ ಇಸ್ಲಾಂ ಮಿಂಟು ಎಂಬುವವರ ಪುತ್ರ ಎಂದು ವರದಿಯಾಗಿದೆ. ಆರೋಪಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಕುಟುಂಬದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಇಂಡಿಯಾ ಟುಡೇ  ದಿನಾಜ್‌ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶಾ ಇಫ್ತೆಕರ್ ಅಹ್ಮದ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದದ್ದು, ಮಾರ್ಚ್ 17 ರಂದು 12 ವರ್ಷದ ಹಿಂದೂ ಬಾಲಕಿ ಮೇಲೆ ಸಖಾವತ್ ಹೊಸೈನ್ ಎಂಬ ವ್ಯಕ್ತಿ ದೌರ್ಜನ್ಯ ನಡಸಿದ್ದಾನೆ ಎಂದು ಹೇಳಿದ್ದಾರೆ.

“ಸಂತ್ರಸ್ತೆಯ ತಂದೆಯಿಂದ ದೂರು ನೀಡಿದ ನಂತರ ದಿನಜ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಕಾಯಿದೆ, 2000 ಅಡಿಯಲ್ಲಿ ಪ್ರಕರಣ ದಾಖಲಿಸಿ, ಮಾರ್ಚ್ 18 ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಲ್ಲದೆ ಬಾಂಗ್ಲಾದೇಶ ಮೂಲದ ವರದಿಗಾರ ಶಾಹಿದುಲ್ ಹಸನ್ ಖೋಕನ್ ಕೂಡ ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ದೃಢಪಡಿಸಿದ್ದಾರೆ ಎಂದು ಇಂಡಿಯಾ ಟುಡೇ ಉಲ್ಲೇಖಿಸಿದೆ.

ಆದ್ದರಿಂದ ಯಾವುದೇ ಅಪರಾಧ ಪ್ರಕರಣಗಳನ್ನು ಜಾತಿ ಮತ್ತು ಧರ್ಮದ ಆಧಾರದಲ್ಲಿ ನೋಡದೆ ಅಪರಾದ ಪ್ರಕರಣವಾಗಷ್ಟೆ ನೋಡಬೇಕು. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಈ ಘಟನೆಯು ಭಾರತದಲ್ಲಿ ನಡೆದಿಲ್ಲ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ವೇಳೆ ಪಾಕಿಸ್ತಾನದ ಬಾವುಟ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *