ಖ್ಯಾತ ಹೃದ್ರೋಗ ತಜ್ಞ ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಹಾಲಿ ಬೆಂಗಳೂರು ಗ್ರಾಮಂತರ ಲೋಕಸಭಾ ಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿಯ ಅಭ್ಯರ್ಥಿಯೂ ಆದ ಡಾ. ಸಿ.ಎನ್ ಮಂಜುನಾಥ್ ಅವರು ನೆನ್ನೆ (ಏಪ್ರಿಲ್ 4) ನಡೆದ ಪ್ರಚಾರದ ಸಭೆಯ ಭಾಷಣದಲ್ಲಿ,
“ಮತದಾನ ಮನೆಯ ಹೆಣ್ಣು ಮಗಳಿದಂತೆ ಅದು ಮಾರಾಟ ಆಗಬಾರದು ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ” ಎಂದು ಮತದಾರರಿಗೆ ತಿಳಿಸಿದ್ದಾರೆ. ಹಾಗಾದರೆ ನಿಜಕ್ಕೂ ಡಾ. ಬಿ. ಆರ್ ಅಂಬೇಡ್ಕರ್ ಅವರು ಮತದಾನ ನಿಮ್ಮ ಮನೆಯ ಮಗಳಿದ್ದಂತೆ ಎಂದು ಹೇಳಿದ್ದಾರೆಯೇ? ತಿಳಿಯೋಣ ಬನ್ನಿ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಡಾ. ಬಿ. ಆರ್ ಅಂಬೇಡ್ಕರ್ ಅವರು “ಅಂತಿಮವಾಗಿ, ಪ್ರಜಾಪ್ರಭುತ್ವ ಸರ್ಕಾರವು ಮತದಾನದ ಹಕ್ಕಿನಿಂದ ಬೇರ್ಪಡಿಸಲಾಗದು, ಮತ್ತು ಮತದಾನವು ರಾಜಕೀಯ ಶಿಕ್ಷಣದ ಮುನ್ನುಡಿಗಳಲ್ಲಿ ಒಂದಾಗಿದೆ ಎಂದು ಸಾಬೀತುಪಡಿಸುತ್ತದೆ.” ಎಂದಿದ್ದರು.ಗಣರಾಜ್ಯದ ದಿನದಂದು ತಮ್ಮ ಐತಿಹಾಸಿಕ ಭಾಷಣದಲ್ಲಿ “1950ರ ಜನವರಿ 26ರಂದು, ರಾಜಕೀಯದಲ್ಲಿ, ನಾವು ಸಮಾನತೆಯನ್ನು ಹೊಂದಿದ್ದೇವೆ, ಮತ್ತು ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ, ನಾವು ಅಸಮಾನತೆಯನ್ನು ಹೊಂದಿದ್ದೇವೆ. ರಾಜಕೀಯದಲ್ಲಿ, ನಾವು ಒಬ್ಬ ವ್ಯಕ್ತಿಗೆ, ಒಂದು ಮತ ಮತ್ತು ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ಗುರುತಿಸುತ್ತೇವೆ. ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಕಾರಣದಿಂದಾಗಿ, ಒಬ್ಬ ವ್ಯಕ್ತಿ ಒಂದು ಮೌಲ್ಯ ಎಂಬ ತತ್ವವನ್ನು ನಾವು ನಿರಾಕರಿಸುತ್ತಲೇ ಇರುತ್ತೇವೆ.” ಎಂದು ನಮ್ಮ ದೇಶದಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯು ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ಕಡೆಗಡಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಮುಂದುವರೆದು “ವಿರೋಧಾಭಾಸಗಳ ಈ ಜೀವನವನ್ನು ನಾವು ಎಷ್ಟು ಕಾಲ ಮುಂದುವರಿಸುತ್ತೇವೆ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ನಾವು ಎಷ್ಟು ಕಾಲ ಸಮಾನತೆಯನ್ನು ನಿರಾಕರಿಸುತ್ತಲೇ ಇರುತ್ತೇವೆ? ನಾವು ಅದನ್ನು ದೀರ್ಘಕಾಲದವರೆಗೆ ನಿರಾಕರಿಸುವುದನ್ನು ಮುಂದುವರಿಸಿದರೆ, ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುತ್ತೇವೆ. ನಾವು ಈ ವಿರೋಧಾಭಾಸವನ್ನು ಆದಷ್ಟು ಬೇಗ ತೆಗೆದುಹಾಕಬೇಕು, ಇಲ್ಲದಿದ್ದರೆ ಅಸಮಾನತೆಯಿಂದ ಬಳಲುತ್ತಿರುವವರು ಈ ಅಸೆಂಬ್ಲಿ ಕಷ್ಟಪಟ್ಟು ನಿರ್ಮಿಸಿದ ರಾಜಕೀಯ ಪ್ರಜಾಪ್ರಭುತ್ವದ ರಚನೆಯನ್ನು ಸ್ಫೋಟಿಸುತ್ತಾರೆ.” ಎಂದು ಎಚ್ಚರಿಕೆ ನೀಡಿದ್ದರು.
ಡಾ. ಅಂಬೇಡ್ಕರ್ ಅವರು ಮತವನ್ನು ಮಾರಿಕೊಳ್ಳದಂತೆ ಜನರನ್ನು ಎಚ್ಚರಿಸಿದ್ದರು ಆದರೆ ಅವರು ಎಲ್ಲಿಯೂ ಮತದಾನವು ಮನೆಯ ಹೆಣ್ಣಿದ್ದಂತೆ ಎಂದು ಹೇಳಿಲ್ಲ. ಆದ್ದರಿಂದ ಡಾ. ಸಿ. ಎನ್ ಮಂಜುನಾಥ್ ಅವರ ಹೇಳಿಕೆ ಸುಳ್ಳಾಗಿದೆ.
ಇದನ್ನು ಓದಿ: Fact Check: ರಾಹುಲ್ ಗಾಂಧಿ ವಿರುದ್ಧ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದು ಹಳೆಯ ವಿಡಿಯೋ
ವಿಡಿಯೋ ನೋಡಿ: ಮಣಿಪುರದಲ್ಲಿ ಬಿಜೆಪಿ ನಾಯಕರನ್ನು ಥಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ | Manipur
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ