Fact Check: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ್ರೋಹ ಜಾರಿಗೊಳಿಸುತ್ತೇವೆ ಎಂದಿಲ್ಲ

Congress

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ತಮ್ಮ ಎದುರಾಳಿ ಪಕ್ಷವನ್ನು ಮಣಿಸುವ ಸಲುವಾಗಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ಎದುರಿಸಲು ಚುನಾವಣಾ ಆಯೋಗ (EC) 17 ಮಾರ್ಚ್ 2024 ರಂದೇ “ಮಿಥ್ ವರ್ಸಸ್ ರಿಯಾಲಿಟಿ” ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯನ್ನು ಬಳಸುವುದು ಮತ್ತು ನಕಲಿ ಸುದ್ದಿಗಳ ವಿರುದ್ಧ ತ್ವರಿತ ಪ್ರತಿಕ್ರಿಯೆಗಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು ಸ್ಥಾಪಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಆದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಎಗ್ಗಿಲ್ಲದೆ ಹರಿದಾಡುತ್ತಿವೆ.

ಇಂದು, ” ಕಾಂಗ್ರೆಸ್ ಪ್ರಣಾಳಿಕೆ ಭಯಾನಕವಾಗಿದೆ. ನನ್ನ ಜೀವನದಲ್ಲಿ ಇಂತಹ ಅಪಾಯಕಾರಿ ಪ್ರಣಾಳಿಕೆಯನ್ನು ನೋಡಿಲ್ಲ. ಇದು ಪಿಎಫ್ಐನ ವಿಷನ್ 2047 ಡಾಕ್ಯುಮೆಂಟ್ ಇದ್ದಂತೆ. ತ್ರಿವಳಿ ತಲಾಖ್ ಅನ್ನು ಮರಳಿ ತರುತ್ತೇವೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ. ಲವ್ ಜಿಹಾದ್ ಬೆಂಬಲಿಸಿ ಶಾಲೆಯಲ್ಲಿ ಬುರ್ಖಾವನ್ನು ಬೆಂಬಲಿಸುತ್ತೇವೆ. ಬಹುಸಂಖ್ಯಾತವಾದವನ್ನು (ಹಿಂದೂ ಧರ್ಮ) ಕೊನೆಗೊಳಿಸುತ್ತೇವೆ.” ಎಂದು ಘೋಷಿಸಿಕೊಂಡಿದ್ದಾರೆ. ಎಂದು ಪ್ರತಿಪಾದಿಸಲಾಗುತ್ತಿದೆ. ಈ ಸುದ್ದಿಯನ್ನು ಸ್ಟಾರ್ ಬೋಯ್ ತರುಣ್ ಎಂಬ ಬಲಪಂಥೀಯ ಕಾರ್ಯಕರ್ತರೊಬ್ಬರು ಹರಿಬಿಟ್ಟಿದ್ದಾರೆ.

ಅನೇಕ ಜನ ಬಿಜೆಪಿ ಕಾರ್ಯಕರ್ತರು ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 5 ಏಪ್ರಿಲ್ 2024 ರಂದು ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ೧. ಸಂವಿಧಾನದ 15, 16, 25, 26, 28, 29 ಮತ್ತು 30 ನೇ ವಿಧಿಗಳ ಅಡಿಯಲ್ಲಿ ಒಬ್ಬರ ನಂಬಿಕೆಯನ್ನು ಆಚರಿಸುವ ಮೂಲಭೂತ ಹಕ್ಕು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳನ್ನು ನಾವು ಗೌರವಿಸುತ್ತೇವೆ ಮತ್ತು ಎತ್ತಿಹಿಡಿಯುತ್ತೇವೆ.

೨. ಸಂವಿಧಾನದ 15, 16, 29 ಮತ್ತು 30 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ನಾವು ಗೌರವಿಸುತ್ತೇವೆ ಮತ್ತು ಎತ್ತಿಹಿಡಿಯುತ್ತೇವೆ.

೩. ಶಿಕ್ಷಣ, ಉದ್ಯೋಗ, ವ್ಯವಹಾರ, ಸೇವೆಗಳು, ಕ್ರೀಡೆ, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಲು ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಸಹಾಯ ಮಾಡುತ್ತೇವೆ

೪. ನಾವು ವಿದೇಶದಲ್ಲಿ ಅಧ್ಯಯನಕ್ಕಾಗಿ ಮೌಲಾನಾ ಆಜಾದ್ ವಿದ್ಯಾರ್ಥಿವೇತನವನ್ನು ಪುನಃಸ್ಥಾಪಿಸುತ್ತೇವೆ ಮತ್ತು ವಿದ್ಯಾರ್ಥಿವೇತನದ ಸಂಖ್ಯೆಯನ್ನು ಹೆಚ್ಚಿಸುತ್ತೇವೆ.

೫. ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣವು ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅಗತ್ಯವಾದ ಹೆಜ್ಜೆಯಾಗಿದೆ. ಬ್ಯಾಂಕುಗಳು ಅಲ್ಪಸಂಖ್ಯಾತರಿಗೆ ಯಾವುದೇ ತಾರತಮ್ಯವಿಲ್ಲದೆ ಸಾಂಸ್ಥಿಕ ಸಾಲವನ್ನು ಒದಗಿಸುತ್ತವೆ ಎಂದು ನಾವು ಖಚಿತಪಡಿಸುತ್ತೇವೆ.

೬. ಅಲ್ಪಸಂಖ್ಯಾತರು ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ, ಲೋಕೋಪಯೋಗಿ ಒಪ್ಪಂದಗಳು, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾರತಮ್ಯವಿಲ್ಲದೆ ತಮ್ಮ ನ್ಯಾಯಯುತ ಪಾಲನ್ನು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ.

೭. ಪ್ರತಿಯೊಬ್ಬ ನಾಗರಿಕನಂತೆ, ಅಲ್ಪಸಂಖ್ಯಾತರಿಗೂ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನುಗಳ ಆಯ್ಕೆಯ ಸ್ವಾತಂತ್ರ್ಯವಿದೆ ಎಂದು ಕಾಂಗ್ರೆಸ್ ಖಚಿತಪಡಿಸುತ್ತದೆ.

೮. ನಾವು ವೈಯಕ್ತಿಕ ಕಾನೂನುಗಳ ಸುಧಾರಣೆಯನ್ನು ಪ್ರೋತ್ಸಾಹಿಸುತ್ತೇವೆ. ಅಂತಹ ಸುಧಾರಣೆಯನ್ನು ಸಂಬಂಧಪಟ್ಟ ಸಮುದಾಯಗಳ ಭಾಗವಹಿಸುವಿಕೆ ಮತ್ತು ಒಪ್ಪಿಗೆಯೊಂದಿಗೆ ಕೈಗೊಳ್ಳಬೇಕು.

೯. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಹೆಚ್ಚಿನ ಭಾಷೆಗಳನ್ನು ಸೇರಿಸುವ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಇದಿಷ್ಟು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ 9 ಅಂಶಗಳ ಗ್ಯಾರಂಟಿಗಳಾಗಿವೆ. ಆದ್ದರಿಂದ ಇಲ್ಲಿ ಎಲ್ಲಿಯೂ ತ್ರಿವಳಿ ತಲಾಖ್ ಮತ್ತೆ ತರುತ್ತೇವೆ ಎಂದಿಲ್ಲ, ಲವ್ ಜಿಹಾದ್ ಬೆಂಬಲಿಸುತ್ತೇವೆ ಎಂದಿಲ್ಲ ಮತ್ತು ಬಹುಸಂಖ್ಯಾತವಾದವನ್ನು ಕೊನೆಗೊಳಿಸುತ್ತೇವೆ ಎಂದಿಲ್ಲ. ಬದಲಾಗಿ ಬಹುಸಂಖ್ಯಾತ ವಾದವನ್ನು ಖತರಿಪಡಿಸುವ ಭಾರತೀಯ ಸಂವಿಧಾನದ ಕಾನೂನುಗಳನ್ನು ಖಾತರಿ ಪಡಿಸುತ್ತೇವೆ ಎಂದಿದ್ದಾರೆ. ಆದ್ದರಿಂದ ವೈರಲ್ ಸಂದೇಶ ತಪ್ಪಾಗಿದೆ.


ಇದನ್ನು ಓದಿ: Fact Check: ಹಿಂದೂ ಧರ್ಮ ಬೋಧಿಸದಂತೆ ಕಾಂಗ್ರೆಸ್ ತಡೆಹಿಡಿದಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check: ಡಾ. ಬಿ. ಆರ್ ಅಂಬೇಡ್ಕರ್ ಮತದಾನ ಮನೆಯ ಹೆಣ್ಣಿದ್ದಂತೆ ಎಂದು ಎಲ್ಲಿಯೂ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *