ಇತ್ತೀಚೆಗೆ ಬಿಜೆಪಿಯ ಉತ್ತರ ಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಅವರು ಲೋಕಸಭೆಯಲ್ಲಿ 400 ಸೀಟು ಗಳಿಸಿದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದ್ದರು. ಅನಂತ್ ಕುಮಾರ್ ಹೆಗಡೆ ಅವರು ಈ ಹಿಂದೆಯೂ ಸಹ ಇದೇ ಹೇಳಿಕೆ ನೀಡಿ ಸಾಕಷ್ಟು ಟೀಕೆ ಎದುರಿಸಿದ್ದರು. ಈಗ ಕೆಲವು ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಬಿಜೆಪಿ ಲೋಕಸಭಾ ಅಭ್ಯರ್ಥಿ ಜ್ಯೋತಿ ಮಿರ್ಧಾ ಅವರು ನಾನೂರು ಸೀಟು ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ.
ಭಾರತೀಯ ಸಂವಿಧಾನವನ್ನು ಬದಲಾಯಿಸುವ ದೇಶದ್ರೋಹಿ ಹುನ್ನಾರಗಳನ್ನು ಕೆಲವು ರಾಜಕೀಯ ಪಕ್ಷಗಳು ಬೆಂಬಲಿಸುತ್ತಿದ್ದು ಇದು ಆ ಪಕ್ಷದ ರಾಜಕೀಯ ಮುಖಂಡರುಗಳ ಬಾಯಲ್ಲಿ ವ್ಯಕ್ತವಾಗುತ್ತಿದೆ ಎಂದು ಜನರು ಟೀಕಿಸುತ್ತಿದ್ದಾರೆ.
ಈಗ, “ಸಂವಿಧಾನದ ಮೂಲಕ ಕಾಂಗ್ರೆಸ್ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿತ್ತು ಆದರೆ ಅದನ್ನು ಘೋಷಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನವರು ಆರ್ಟಿಕಲ್ 25 ರ ಮೂಲಕ ಮತಾಂತರವನ್ನು ಕಾನೂನುಬದ್ಧಗೊಳಿಸಿದರು. ಆರ್ಟಿಕಲ್ 28 ರ ಮೂಲಕ ಹಿಂದೂಗಳು ಧಾರ್ಮಿಕ ಶಿಕ್ಷಣದಿಂದ ವಂಚಿತವಾಗುವಂತೆ ಮಾಡಿದರು. ಆರ್ಟಿಕಲ್ 28 ಪ್ರಕಾರ ಹಿಂದೂ ಧರ್ಮದ ಬಗ್ಗೆ ಬೋಧಿಸುವಂತಿಲ್ಲ, ಆದರೆ ಆರ್ಟಿಕಲ್ 30 ರ ಮೂಲಕ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಧಾರ್ಮಿಕ ಶಿಕ್ಷಣ ಪಡೆಯಲು ಅನುಮತಿಸಲಾಗಿದೆ.” ಎಂದು ಪ್ರತಿಪಾದಿಸಿದ ಸಂದೇಶವೊಂದು ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಸಂವಿಧಾನದ 25ನೇ ವಿಧಿಯು ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮ ಧರ್ಮದ ಆಚರಣೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ಇದು ಭಾರತದಲ್ಲಿನ ಎಲ್ಲಾ ವ್ಯಕ್ತಿಗಳು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಇತರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ: ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಸಮಾನವಾಗಿ ಅರ್ಹರಾಗಿರುತ್ತಾರೆ, ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಅಭ್ಯಾಸ ಮಾಡುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡಿದೆ.
28 ನೇ ವಿಧಿಯು ರಾಜ್ಯದ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡುವ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಸೂಚನೆಗಳನ್ನು ನೀಡಲಾಗುವುದಿಲ್ಲ. ಇದು ಸರ್ಕಾರದಿಂದ ಧನಸಹಾಯ ಪಡೆದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಜಾತ್ಯತೀತವಾಗಿ ಉಳಿಯುತ್ತದೆ ಮತ್ತು ಧಾರ್ಮಿಕ ಬೋಧನೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸುತ್ತದೆ.
ರಾಜ್ಯ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸದ ಶಿಕ್ಷಣ ಸಂಸ್ಥೆಗಳಲ್ಲಿ, ಧಾರ್ಮಿಕ ಶಿಕ್ಷಣವನ್ನು ಅನುಮತಿಸಲಾಗಿದೆ. ಆದಾಗ್ಯೂ, ಇದಕ್ಕೆ ಪೋಷಕರು ಅಥವಾ ಪೋಷಕರ ಒಪ್ಪಿಗೆ ಅಗತ್ಯವಿದೆ. ಈ ಸಂಸ್ಥೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಧಾರ್ಮಿಕ ಬೋಧನೆಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ರಾಜ್ಯದ ನಿಧಿಯಿಂದ ಸಂಪೂರ್ಣವಾಗಿ ನಿರ್ವಹಿಸಲ್ಪಡದ ಶಿಕ್ಷಣ ಸಂಸ್ಥೆಗಳಲ್ಲಿ, ನಿರ್ದಿಷ್ಟ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳು ಸಂಸ್ಥೆಯು ನಡೆಸುವ ಧಾರ್ಮಿಕ ಪೂಜೆ ಅಥವಾ ಧಾರ್ಮಿಕ ಸೂಚನೆಗೆ ಹಾಜರಾಗುವ ಹಕ್ಕನ್ನು ಹೊಂದಿರುತ್ತಾರೆ.
30 ನೇ ವಿಧಿಯು ಅಲ್ಪಸಂಖ್ಯಾತರಿಗೆ ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಈ ಹಕ್ಕನ್ನು ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಮತ್ತು ಅವರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಿತಾಸಕ್ತಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ. ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವಲ್ಲಿ ರಾಜ್ಯವು ಯಾವುದೇ ಶಿಕ್ಷಣ ಸಂಸ್ಥೆಯನ್ನು ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ಅಲ್ಪಸಂಖ್ಯಾತರ ನಿರ್ವಹಣೆಗೆ ಒಳಪಟ್ಟಿದೆ ಎಂಬ ಕಾರಣಕ್ಕೆ ತಾರತಮ್ಯ ಮಾಡಬಾರದು. ಎಂದು ತಿಳಿಸುತ್ತದೆ.
ನಮ್ಮ ಭಾರತೀಯ ಸಂವಿಧಾನದಲ್ಲಿ ಹಿಂದು ಧರ್ಮವನ್ನು ಭೋದಿಸುವಂತಿಲ್ಲ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಸಂವಿಧಾನದ 26ನೇ ವಿಧಿಯು (ಎ)ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು; (ಬಿ) ಧರ್ಮದ ವಿಷಯಗಳಲ್ಲಿ ತನ್ನದೇ ಆದ ವ್ಯವಹಾರಗಳನ್ನು ನಿರ್ವಹಿಸಲು; (ಸಿ) ಚಲಿಸಬಲ್ಲ ಮತ್ತು ಸ್ಥಿರ ಆಸ್ತಿಯನ್ನು ಹೊಂದಲು ಮತ್ತು ಸ್ವಾಧೀನಪಡಿಸಿಕೊಳ್ಳಲು; ಮತ್ತು (ಡಿ) ಕಾನೂನಿನ ಪ್ರಕಾರ ಅಂತಹ ಆಸ್ತಿಯನ್ನು ನಿರ್ವಹಿಸಲು. ಹಕ್ಕುಗಳನ್ನು ನೀಡಿದೆ.
ಆದ್ದರಿಂದ ಇಲ್ಲಿ ಸಂವಿಧಾನದ 25, 28 ಮತ್ತು 30 ರ ಕುರಿತು ಹಂಚಿಕೊಳ್ಳಲಾಗುತ್ತಿರುವ ವೈರಲ್ ಸಂದೇಶ ತಪ್ಪಾಗಿದ್ದು, ದುರುದ್ದೇಶದಿಂದ ತಪ್ಪಾಗಿ ಅರ್ಥೈಸಲಾಗುತ್ತಿದೆ. ಭಾರತೀಯರ ಧಾರ್ಮಿಕ ಸ್ವಾತಂತ್ರ್ಯವನ್ನು ಇಲ್ಲದಂತೆ ಮಾಡಲು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದನ್ನು ತಡೆಯುವ ಹುನ್ನಾರವಾಗಿದೆ. ಸಂವಿಧಾನದ ಅರಿವಿನ ಕೊರತೆಯು ಇಂತಹ ಸುಳ್ಳು ಪ್ರತಿಪಾಧನೆಗಳಿಗೆ ದಾರಿ ಮಾಡಿಕೊಡುತ್ತವೆ. ನಮ್ಮ ಸಂವಿಧಾನವನ್ನು ಅದರ ಕಾನೂನುಗಳ ಮಹತ್ವವನ್ನು ಇನ್ನಾದರೂ ಭಾರತೀಯರಾದ ನಾವೆಲ್ಲರೂ ಅರಿತುಕೊಂಡು ಅದರಂತೆ ಸಹಬಾಳ್ವೆಯನ್ನು ನಡೆಸಬೇಕಿದೆ.
ಇದನ್ನು ಓದಿ: Fact Check: ಮಂಗಳೂರಿನ ಇಫ್ತಾರ್ ಕೂಟದ ವಿಡಿಯೋವನ್ನು ಬಂಗಾಳದ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ
ವಿಡಿಯೋ ನೋಡಿ: ಮಣಿಪುರದಲ್ಲಿ ಬಿಜೆಪಿ ನಾಯಕರನ್ನು ಥಳಿಸಲಾಗಿದೆ ಎಂದು ಡಾರ್ಜಿಲಿಂಗ್‌ನ ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ | Manipur
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ