ಕಾಂಗ್ರೆಸ್ ನ ಲೋಕಸಭಾ ಪ್ರಣಾಳಿಕೆ 2024 ಬಿಡುಗಡೆ ಆದ ದಿನಗಳಿಂದಲೂ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಕೆಲವರು ಸುಳ್ಳುಗಳನ್ನು ಹಬ್ಬಿಸುತ್ತಲೇ ಬರುತ್ತಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ “ತ್ರಿವಳಿ ತಲಾಖ್ ಅನ್ನು ಮರಳಿ ತರುತ್ತೇವೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ. ಲವ್ ಜಿಹಾದ್ ಬೆಂಬಲಿಸಿ ಶಾಲೆಯಲ್ಲಿ ಬುರ್ಖಾವನ್ನು ಬೆಂಬಲಿಸುತ್ತೇವೆ” ಎಂದು ಹೇಳಿದ್ದಾರೆ ಎಂದು ಸುದ್ದಿಯೊಂದನ್ನು ಹರಿಬಿಟ್ಟಿದ್ದರು. ನಂತರ ಇತ್ತೀಚೆಗೆ ರಾಜಸ್ತಾನದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ” ಕಾಂಗ್ರೆಸ್ ನಿಮ್ಮ ಬಳಿ ಇರುವ ಚಿನ್ನವನ್ನು, ಆಸ್ತಿಯನ್ನು ಲೆಕ್ಕ ಹಾಕಿ ಮುಸ್ಲಿಮರಿಗೆ ಹಂಚುತ್ತಾರೆ” ಎಂದು ದ್ವೇಷ ಭಾಷಣ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.
ಈಗ, “ಕಾಂಗ್ರೆಸ್ ಪ್ರಣಾಳಿಕೆಯೋ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆಯೋ? ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ. ಮುಸ್ಲಿಮರಿಗೆ ಸಂಪತ್ತು ವಿತರಣೆ. ಮುಸ್ಲಿಮರಿಗೆ ವಿಶೇಷ ಮೀಸಲಾತಿ. ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ. ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು. ಮುಸ್ಲಿಮರನ್ನು ನೇಮಿಸಿಕೊಳ್ಳಲು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಆದೇಶ.” ಎಂಬ ಸಂದೇಶವೊಂದನ್ನು ಕರ್ನಾಟಕದ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಫ್ಯಾಕ್ಟ್‌ಚೆಕ್: ಬಿಜೆಪಿ ಹಂಚಿಕೊಂಡಿರುವ ಅಂಶಗಳು ಕಾಂಗ್ರೆಸ್‌ನ ಅಧಿಕೃತ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಲ್ಲ. ಕಾಂಗ್ರೆಸ್ ತನ್ನ “ನ್ಯಾಯ ಪತ್ರ” ಪ್ರಣಾಳಿಕೆಯಲ್ಲಿ ಎಲ್ಲಿಯೂ ಮುಸ್ಲಿಂ ಸಮುದಾಯದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಲ್ಪಸಂಖ್ಯಾತರು ಎಂಬ ಅರ್ಥದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧರನ್ನು ಉಲ್ಲೇಖಿಸಿದೆ. ಧಾರ್ಮಿಕ ಮತ್ತು ಭಾಷಿಕ ಅಲ್ವಸಂಖ್ಯಾತರಿಗೆ ನೀಡಿರುವ ಆಶ್ವಾಸನೆಗಲ್ಲಿ 9 ಅಂಶಗಳಿದ್ದು ಅವುಗಳು ಈ ಕೆಳಗಿನಂತಿವೆ.
೧. ಸಂವಿಧಾನದ 15, 16, 25, 26, 28, 29 ಮತ್ತು 30 ನೇ ವಿಧಿಗಳ ಅಡಿಯಲ್ಲಿ ಒಬ್ಬರ ನಂಬಿಕೆಯನ್ನು ಆಚರಿಸುವ ಮೂಲಭೂತ ಹಕ್ಕು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಖಾತರಿಪಡಿಸಿದ ಹಕ್ಕುಗಳನ್ನು ನಾವು ಗೌರವಿಸುತ್ತೇವೆ ಮತ್ತು ಎತ್ತಿಹಿಡಿಯುತ್ತೇವೆ.
೨. ಸಂವಿಧಾನದ 15, 16, 29 ಮತ್ತು 30 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ನಾವು ಗೌರವಿಸುತ್ತೇವೆ ಮತ್ತು ಎತ್ತಿಹಿಡಿಯುತ್ತೇವೆ.
೩. ಶಿಕ್ಷಣ, ಉದ್ಯೋಗ, ವ್ಯವಹಾರ, ಸೇವೆಗಳು, ಕ್ರೀಡೆ, ಕಲೆ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಲು ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಸಹಾಯ ಮಾಡುತ್ತೇವೆ.
೪. ನಾವು ವಿದೇಶದಲ್ಲಿ ಅಧ್ಯಯನಕ್ಕಾಗಿ ಮೌಲಾನಾ ಆಜಾದ್ ವಿದ್ಯಾರ್ಥಿವೇತನವನ್ನು ಪುನಃಸ್ಥಾಪಿಸುತ್ತೇವೆ ಮತ್ತು ವಿದ್ಯಾರ್ಥಿವೇತನದ ಸಂಖ್ಯೆಯನ್ನು ಹೆಚ್ಚಿಸುತ್ತೇವೆ.
೫. ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣವು ಭಾರತವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅಗತ್ಯವಾದ ಹೆಜ್ಜೆಯಾಗಿದೆ. ಬ್ಯಾಂಕುಗಳು ಅಲ್ಪಸಂಖ್ಯಾತರಿಗೆ ಯಾವುದೇ ತಾರತಮ್ಯವಿಲ್ಲದೆ ಸಾಂಸ್ಥಿಕ ಸಾಲವನ್ನು ಒದಗಿಸುತ್ತವೆ ಎಂದು ನಾವು ಖಚಿತಪಡಿಸುತ್ತೇವೆ.
೬. ಅಲ್ಪಸಂಖ್ಯಾತರು ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ, ಲೋಕೋಪಯೋಗಿ ಒಪ್ಪಂದಗಳು, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾರತಮ್ಯವಿಲ್ಲದೆ ತಮ್ಮ ನ್ಯಾಯಯುತ ಪಾಲನ್ನು ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ.
೭. ಪ್ರತಿಯೊಬ್ಬ ನಾಗರಿಕನಂತೆ, ಅಲ್ಪಸಂಖ್ಯಾತರಿಗೂ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನುಗಳ ಆಯ್ಕೆಯ ಸ್ವಾತಂತ್ರ್ಯವಿದೆ ಎಂದು ಕಾಂಗ್ರೆಸ್ ಖಚಿತಪಡಿಸುತ್ತದೆ.
೮. ನಾವು ವೈಯಕ್ತಿಕ ಕಾನೂನುಗಳ ಸುಧಾರಣೆಯನ್ನು ಪ್ರೋತ್ಸಾಹಿಸುತ್ತೇವೆ. ಅಂತಹ ಸುಧಾರಣೆಯನ್ನು ಸಂಬಂಧಪಟ್ಟ ಸಮುದಾಯಗಳ ಭಾಗವಹಿಸುವಿಕೆ ಮತ್ತು ಒಪ್ಪಿಗೆಯೊಂದಿಗೆ ಕೈಗೊಳ್ಳಬೇಕು.
೯. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಹೆಚ್ಚಿನ ಭಾಷೆಗಳನ್ನು ಸೇರಿಸುವ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಒಟ್ಟು 48 ಪುಟಗಳಿರುವ ಕಾಂಗ್ರೆಸ್ ನ ನ್ಯಾಯ ಪತ್ರದಲ್ಲಿ ಧಾರ್ಮಿಕ ಮತ್ತು ಭಾಷಿಕ ಅಲ್ವಸಂಖ್ಯಾತರಿಗೆ ನೀಡಿರುವ ಭರವಸೆಗಳು 7 ನೇ ಪುಟದಲ್ಲಿ ಇದೆ. ತನ್ನ ಇಡೀ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಎಲ್ಲಿಯೂ ಬಿಜೆಪಿ ಆರೋಪಿಸಿರುವಂತೆ “ಮುಸ್ಲಿಮರಿಗೆ ವಿಶೇಷ ಮೀಸಲಾತಿ. ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ. ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು” ಇಂತಹ ಯಾವ ಭರವಸೆಗಳನ್ನು ನೀಡಿಲ್ಲ ಬದಲಾಗಿ “ಸಾಮಾಜಿಕ ನ್ಯಾಯ”ದ ಅಡಿಯಲ್ಲಿ,
ಜಾತಿ ಜನಗಣತಿ ನಡೆಸಿ ಅಗತ್ಯವಿರುವ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುತ್ತೇವೆ ಎಂದಿದ್ದಾರೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಾಗಿ ಭರವಸೆ ನೀಡಿದೆ.
ಸಧ್ಯ SC, ST ಮತ್ತು OBC ಗಳಿಗೆ ನೀಡಿದ ಭರವಸೆಗಳನ್ನೇ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಆರೋಪಿಸಿರುವುದು ಸಂಪೂರ್ಣ ಸುಳ್ಳು ಆರೋಪವಾಗಿದೆ ಮತ್ತು ಒಂದು ಸಮುದಾಯವನ್ನು ಕೇಂದ್ರೀಕರಿಸಿಕೊಂಡು ನಡೆಸುತ್ತಿರುವ ದ್ವೇಷದ ರಾಜಕಾರಣವಾಗಿದೆ.
ಇದನ್ನು ಓದಿ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ್ರೋಹ ಜಾರಿಗೊಳಿಸುತ್ತೇವೆ ಎಂದಿಲ್ಲ
ವಿಡಿಯೋ ನೋಡಿ: ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ