Fact Check | ಶ್ರೀ ಸಿದ್ದರಾಮಯ್ಯ ಲಾ ಕಾಲೇಜು ಹೊರಡಿಸಿದ ಸುತ್ತೋಲೆಗೂ ಆರೋಗ್ಯ ಇಲಾಖೆಗೂ ಸಂಬಂಧವಿಲ್ಲ

ಶ್ರೀ ಸಿದ್ದರಾಮಯ್ಯ ಲಾ ಕಾಲೇಜು ಹೊರಡಿಸಿದ ಸುತ್ತೋಲೆಗೂ ಆರೋಗ್ಯ ಇಲಾಖೆಗೂ ಸಂಬಂಧವಿಲ್ಲ

“ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್ ನೀರು ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು” ಎಂದು ಶ್ರೀ ಸಿದ್ದರಾಮಯ್ಯ ಕಾನೂನು ಕಾಲೇಜು ಸುತ್ತೋಲೆಯನ್ನು ಹೊರಡಿಸಿದೆ ಈ ಸುತ್ತೂಲೆಯಲ್ಲಿ ದೀರ್ಘವಾಗಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ ಹೀಗಾಗಿ ಇದನ್ನು ಬಹುತೇಕರು ಇದನ್ನು ನಿಜವೆಂದು ಶೇರ್ ಮಾಡುತ್ತಿದ್ದಾರೆ

ವೈರಲ್‌ ಆಗುತ್ತಿರುವ ಸುತ್ತೋಲೆ
          ವೈರಲ್‌ ಆಗುತ್ತಿರುವ ಸುತ್ತೋಲೆ

ತಾಪಮಾನ ಏರಿಕೆ ಹಾಗೂ ಬಿಸಿ ಗಾಳಿಯ ಪ್ರಭಾವ ರಾಜ್ಯದಲ್ಲಿ ಇರಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ತಿಳಿಸಿತ್ತು ಅದರಂತೆ ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಾಗಿತ್ತು. ಇದರ ಮಧ್ಯದಲ್ಲಿ ಕೋವಿಶೀಲ್ಡ್ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಎಂಬ ಸುದ್ದಿ ಕೂಡ ವ್ಯಾಪಕವಾಗಿ ಹಬ್ಬಿತ್ತು. ಇದೆರಡನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಿದ್ದರಾಮಯ್ಯ ಕಾನೂನು ಕಾಲೇಜು ಈ ಸುತ್ತೋಲೆಯನ್ನು ಹೊರಡಿಸಿದೆ.

ಆದರೆ ಈ ಸುತ್ತೋಲೆಯಲ್ಲಿ ಆರೋಗ್ಯ ಇಲಾಖೆ ತಿಳಿಸಿರುವ ಮಾಹಿತಿ ಎಂದು ಉಲ್ಲೇಖವಾಗಿದೆ. ಹಾಗಿದ್ದರೆ ಆರೋಗ್ಯ ಇಲಾಖೆ ನಿಜಕ್ಕೂ ಈ ಮಾಹಿತಿಯನ್ನು ನೀಡಿದೆ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌

ಶ್ರೀ ಸಿದ್ದರಾಮಯ್ಯ ಕಾನೂನು ಕಾಲೇಜು ಸುತ್ತೋಲೆಯ ಕುರಿತು ಹಲವರು ವಾಟ್ಸ್‌ಆಪ್ ಮೂಲಕ ಪರಿಶೀಲನೆ ನಡೆಸಲು ಕನ್ನಡ ಪ್ಯಾಕ್ಟ್‌ಚೆಕ್ ತಂಡದ ಬಳಿ ಕೇಳಿಕೊಂಡಿದ್ದರು. ಹೀಗಾಗಿ ನಮ್ಮ ತಂಡ ಸೂಕ್ಷ್ಮವಾಗಿ ಸುತ್ತೋಲೆಯನ್ನು ಗಮನಿಸಿತು. ಈ ವೇಳೆ ಸುತ್ತೋಲೆಯಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಈ ನಂಬರ್ ಕಾಲೇಜಿನದ್ದಲ್ಲ ಎಂಬ ಮಾಹಿತಿ ಲಭ್ಯವಾಯಿತು.

ತದನಂತರ ಕಾಲೇಜಿನ ಅಧಿಕೃತ ನಂಬರನ್ನು ಪಡೆದುಕೊಂಡ ನಮ್ಮ ತಂಡ ಈ ಸುತ್ತೋಲೆ ಕುರಿತು ಸ್ಪಷ್ಟನೆಯನ್ನು ಕೇಳಿತು. ಆಗ ಕಾಲೇಜಿನ ಆಡಳಿತ ಮಂಡಳಿಯ ಅಧಿಕಾರಿಯಾದ ಶಿವಜ್ಯೋತಿ ಎಂಬುವವರು ಈ ಸುತ್ತೋಲೆಯನ್ನು ಹೊರಡಿಸಿದ್ದು ನಿಜ. ಆದರೆ ಆರೋಗ್ಯ ಇಲಾಖೆಯ ಯಾವುದೇ ಮಾರ್ಗಸೂಚಿ ಇರಲಿಲ್ಲ. ಬದಲಾಗಿ ನಮ್ಮ ವಿದ್ಯಾರ್ಥಿಗಳ ಮತ್ತು ಪೋಷಕರ ಕಾಳಜಿಯ ದೃಷ್ಟಿಯಿಂದಾಗಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು. ಮತ್ತು ಸುತ್ತೋಲೆಯಲ್ಲಿರುವ ಮೊಬೈಲ್‌ ನಂಬರ್‌ ನಮ್ಮ ಕಾಲೇಜಿನ ಹಿಂದಿನ ಉದ್ಯೋಗಿಯೊಬ್ಬರದ್ದು ಎಂದು ಮಾಹಿತಿ ನೀಡಿದ್ದಾರೆ. ಈ ವಿಚಾರ ಆರೋಗ್ಯ ಇಲಾಖೆಯ ಗಮನಕ್ಕೆ ಬಂದು ಕಾಲೇಜಿಗೆ ನೋಟಿಸ್‌ ಕೂಡ ನೀಡಿದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಆರೋಗ್ಯ ಇಲಾಖೆಯ ನೋಟಿಸ್‌
ಆರೋಗ್ಯ ಇಲಾಖೆಯ ನೋಟಿಸ್‌

ಇನ್ನು ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಎಕ್ಸ್ ಖಾತೆಯನ್ನು ಪರಿಶೀಲಿಸಿದಾಗ ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟನೆಯನ್ನು ನೀಡಿದ್ದು ಈ ರೀತಿಯ ಯಾವುದೇ ಸುತ್ತೋಲೆಯನ್ನು ನೀಡಿಲ್ಲ ಎಂದು ಖಾತ್ರಿಪಡಿಸಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾದ ನಂತರ ಎಚ್ಚೆತ್ತುಕೊಂಡು ಶ್ರೀ ಸಿದ್ದರಾಮಯ್ಯ ಲಾ ಕಾಲೇಜು ಆಡಳಿತ ಮಂಡಳಿತ ತನ್ನ ಸುತ್ತೋಲೆಯಲ್ಲಿದ್ದ “ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ” ಎಂಬ ಸಾಲನ್ನು ತೆಗೆದು “ಟಿವಿ ಮಾಧ್ಯಮ/ಜಾಹಿರಾತು ನೀಡುತ್ತಿರುವ ಮಾಹಿತಯ ಪ್ರಕಾರ” ಎಂಬ ಸಾಲನ್ನು ಸೇರಿಸಿ ತೇಪೆ ಹಚ್ಚುವ ಕೆಲಸವನ್ನು ಮಾಡಿದೆ.

ವ್ಯಾಪಕ ಟೀಕೆಯ ನಂತರ ಹೊಸ ಸುತ್ತೋಲೆ ಹೊರಡಿಸಿದ ಕಾಲೇಜು ಆಡಳಿತ ಮಂಡಳಿ
ವ್ಯಾಪಕ ಟೀಕೆಯ ನಂತರ ಹೊಸ ಸುತ್ತೋಲೆ ಹೊರಡಿಸಿದ ಕಾಲೇಜು ಆಡಳಿತ ಮಂಡಳಿ

 

ಒಟ್ಟಾರೆಯಾಗಿ ವೈರಲ್ ಆಗುತ್ತಿರುವ ಶ್ರೀ ಸಿದ್ದರಾಮಯ್ಯ ಕಾಲೇಜಿನ ಸುತ್ತೋಲೆಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗು ಯಾವುದೇ ರೀತಿಯ ಸಂಬಂಧ ಇಲ್ಲ


ಇದನ್ನೂ ಓದಿ : Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ವಿಡಿಯೋ ನೋಡಿ : Fact Check | ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *