Fact Check: ಕರೋನಾ ಲಸಿಕೆ ವಿಚಾರಿಸಿ ಬರುವ ಕರೆಯನ್ನು ಸ್ವೀಕರಿಸಿದರೆ ನಿಮ್ಮ ಮೊಬೈಲ್ ಹ್ಯಾಕ್‌ ಆಗುತ್ತದೆ ಎಂಬ ಸಂದೇಶ ಸುಳ್ಳು

ಇತ್ತೀಚೆಗೆ ಸೈಬರ್ ಕ್ರೈಮ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಂತರ್ಜಾಲದಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ನಮಗೆ ಅರಿವಿಲ್ಲದಂತೆಯೇ ನಮ್ಮ ಹಣ, ಮಾಹಿತಿಯನ್ನು ಕದಿಯುವವರು ಹೆಚ್ಚಾಗಿದ್ದಾರೆ. ಕೃತಕ ಬುದ್ದಿಮತ್ತೆ(AI)ಯಿಂದ ವಾಯ್ಸ್‌ ಕ್ಲೋನಿಂಗ್ ಬಳಸಿ ನಿಮ್ಮ ಮನೆಯ ಸದಸ್ಯರು ಮತ್ತು ಗೆಳಯರ ಧ್ವನಿಯಲ್ಲಿ ಕರೆ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸೈಬರ್ ಕ್ರೈಮ್‌ ಪ್ರಕರಣಗಳನ್ನು ಭೇದಿಸಿ ಜನರಿಗೆ ಮಾಧ್ಯಮ ಸಾಕ್ಷರತೆ(media literacy)ಯ ಅರಿವು ಮೂಡಿಸುವ ಕೆಲಸವನ್ನು ಸಹ ಕರ್ನಾಟಕ ಪೋಲೀಸ್ ಇಲಾಖೆಯ ವಿಶೇಷ ಪೋಲಿಸ್ ವಿಭಾಗದ ಸೈಬರ್ ಕ್ರೈಮ್ ಸಿಐಡಿ ಮಾಡುತ್ತಿದೆ.

ಆದರೆ ಇತ್ತೀಚೆಗೆ ಸೈಬರ್ ಕ್ರೈಮ್ ಪೋಲೀಸರು ಹೊರಡಿಸಿರುವ ಪ್ರಕಟಣೆ ಎಂಬ ಸಂದೇಶವೊಂದು ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶದಲ್ಲಿ, “ತುರ್ತು ಮಾಹಿತಿ, ದಯವಿಟ್ಟು ಗಮನ ಕೊಡಿ. ನಿಮಗೆ ಕರೆ ಬಂದರೆ ಮತ್ತು ನೀವು ಕರೋನಾ ಲಸಿಕೆ ತೆಗೆದುಕೊಂಡಿದ್ದೀರಾ ಎಂದು ಕೇಳಿದರೆ ನಂತರ 1 ಅನ್ನು ಒತ್ತಿ ಇಲ್ಲದಿದ್ದರೆ 2 ಅನ್ನು ಒತ್ತಲು ನಿಮಗೆ ಆಯ್ಕೆಯನ್ನು ನೀಡಲಾಗುತ್ತದೆ ಆದರೆ ನೀವು ಒಂದು ಅಥವಾ ಎರಡು ಸಂಖ್ಯೆಗಳನ್ನು ಒತ್ತಿದರೆ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಮತ್ತು ನಿಮ್ಮ ಬ್ಯಾಂಕ್‌ನಲ್ಲಿರುವ ಎಲ್ಲಾ ಮಾಹಿತಿ ಖಾತೆಯು ಕಣ್ಮರೆಯಾಗುತ್ತದೆ, ಆದ್ದರಿಂದ ತಕ್ಷಣ ಫೋನ್ ಸಂಪರ್ಕ ಕಡಿತಗೊಳಿಸಿ. ಈ ಸಂದೇಶವನ್ನು ಸಾಧ್ಯವಾದಷ್ಟು ಕಳುಹಿಸಿ. ಎಲ್ಲಾ ಮೊಬೈಲ್‌ಗಳಿಗೂ ವೇಗವಾಗಿ ಹರಡಬೇಕು”-ಸೈಬರ್ ಕ್ರೈಂ ಪೋಲೀಸ್ ಎಂದು, ಪೋಲೀಸರೆ ಹೊರಡಿಸಿರುವ ಪ್ರಕಟಣೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌: ಈ ಕುರಿತು ಕರ್ನಾಟಕ ಪೋಲಿಸ್ ಇಲಾಖೆಯ ಸೈಬರ್ ಕ್ರೈಮ್ ಸಿಐಡಿ ವಿಭಾಗದ ಸರ್ಕಾರಿ ಪುಟವನ್ನು ಹುಡುಕಿದಾಗ ಇಂತಹ ಯಾವುದೇ ಪ್ರಕಟಣೆಯನ್ನು ಸೈಬರ್ ಕ್ರೈಮ್ ಪೋಲಿಸರು ನೀಡಿರುವುದು ಕಂಡು ಬಂದಿಲ್ಲ. ಸೈಬರ್ ಕ್ರೈಮ್ ವಿಭಾಗವು ಎಕ್ಸ್‌(ಟ್ವಿಟರ್) ನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು ಅವರ ಕಾರ್ಯಕ್ರಮದ ಎಲ್ಲಾ ವಿವರಗಳನ್ನು ಪ್ರಕಟಣೆಗಳು ಇಲ್ಲಿ ಹಂಚಿಕೊಳ್ಳುತ್ತಾರೆ, ಹಾಗಾಗಿ ಎಕ್ಸ್‌ ನಲ್ಲಿ ಈ ರೀತಿಯ ಪ್ರಕಟಣೆಯನ್ನು ನೀಡಿರುವ ಕುರಿತು ಹುಡುಕಿದಾಗ ಈ ರೀತಿಯ ಯಾವ ಪ್ರಕಟಣೆಯನ್ನು ನೀಡಿಲ್ಲ ಎಂದು ಖಚಿತವಾಗಿದೆ.

ಈ ಕುರಿತು ಕೀವರ್ಡ್‌ ಮೂಲಕ ಇನ್ನಷ್ಟು ಹುಡುಕಾಟ ನಡೆಸಿದಾಗ ಪತ್ರಿಕಾ ಮಾಹಿತಿ ಬ್ಯೂರೋ(Press Information Bureau:PIB) ಸರ್ಕಾರಿ ಇಲಾಖೆಯ ಕುರಿತು ಮತ್ತು ಕಾರ್ಯಕ್ರಮಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಫ್ಯಾಕ್ಟ್‌ಚೆಕ್‌ ನಡೆಸುತ್ತದೆ. PIB ಈ ಪ್ರಕಟಣೆಯ ಫ್ಯಾಕ್ಟ್‌ಚೆಕ್‌ ನಡೆಸಿದ್ದು ಈ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಈ ಸಂದೇಶ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಹರಿದಾಡುತ್ತಿದ್ದು, ತೆಲಂಗಾಣದಲ್ಲಿ ಸಹ ಇದೇ ಸಂದೇಶವನ್ನು ಎಲ್ಲೆಡೆ ಹಂಚಿಕೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಯಿಸಿರುವ ತೆಲಂಗಾಣ ಸೈಬರ್ ಪೋಲೀಸರು ಈ ಮಾಹಿತಿ ಸುಳ್ಳು ಎಂದು ಸ್ಪಷ್ಟಪಡಿಸಿ, ಜನರು ಭಯಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ತೆಲಂಗಾಣ ಟುಡೆ ವರದಿ ಮಾಡಿದೆ.

ಈಗ ಕರ್ನಾಟಕದಾದ್ಯಂತಹ ಸೈಬರ್ ಅಪರಾಧಗಳನ್ನು ತಡೆಗಟ್ಟಲು ವಿಶೇಷ ವಿಭಾಗವನ್ನೇ ರಚಿಸಿದ್ದು ನೀವು ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದರೆ ನಿಮ್ಮ ಜಿಲ್ಲಾ ಸೈಬರ್ ಪೋಲೀಸರಿಗೆ ಕರೆ ಮಾಡಿ ಅವರಿಂದ ಸಹಾಯ ತೆಗೆದುಕೊಳ್ಳಬಹುದು. ರಾಜ್ಯದ ಎಲ್ಲಾ ಜಿಲ್ಲೆಗಳ ಕಮಿಷನರೇಟ್ ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ಪೋನ್‌ ನಂಬರ್‌ಗಳಿಗೆ ಇಲ್ಲಿ ನೋಡಬಹುದು.

ಆದ್ದರಿಂದ ಕೋವಿಡ್‌ ಲಸಿಕೆ ತೆಗೆದುಕೊಂಡ ಕುರಿತು ಕರೆ ಬರುತ್ತದೆ ಎಂದು ಹಂಚಿಕೊಳ್ಳಲಾಗುತ್ತಿರುವ ಈ ಸಂದೇಶ ಸುಳ್ಳಾಗಿದ್ದು ಈ ಪ್ರಕಟಣೆಯನ್ನು ಸೈಬರ್ ಕ್ರೈಂ ಪೊಲೀಸರು ಹೊರಡಿಸಿದ್ದಾರೆ ಎಂಬುದು ಸಹ ಸುಳ್ಳಾಗಿದೆ.


ಇದನ್ನು ಓದಿ: BBC ಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: 2019ರಲ್ಲಿ ತಮಿಳುನಾಡಿನ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿರುವುದು UAE ರಾಜಕುಮಾರಿಯೇ ಹೊರತು, ದುಬೈ ಶೇಖ್‌ನ ಪತ್ನಿಯಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *