ಬಂಗಾಳದಲ್ಲಿ ದುರ್ಗಾ ಪೂಜೆಗೆ ಸರ್ಕಾರಿ ರಜೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆ ಸುಳ್ಳು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸೇರಾಂಪೋರ್‌ನಲ್ಲಿ ಚುನಾವಣಾ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಮಮತಾ ಬ್ಯಾನರ್ಜಿ ಮುಸ್ಲಿಮರಿಗೆ ರಂಜಾನ್ ಸಮಯದಲ್ಲಿ ಸರ್ಕಾರ ರಜೆ ಮಂಜೂರು ಮಾಡುತ್ತಾರೆ. ಆದರೆ ದುರ್ಗಾ ಪೂಜೆಗೆ ನಮಗೆ ರಜೆ ನೀಡುವುದಿಲ್ಲ. ಯಾಕೆ ಈ ತಾರತಮ್ಯ?” ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು “ಈ ಇಮಾಮ್‌ಗಳು ಮತ್ತು ಮುಲ್ಲಾಗಳು ಬಂಗಾಳದ ಖಜಾನೆಯಿಂದ ಸಂಬಳ ಪಡೆಯಬೇಕೇ? ಇಲ್ಲ ಎಂದು ಹೈಕೋರ್ಟ್ ಹೇಳಿದ್ದರಿಂದ ಮಮತಾ ಬ್ಯಾನರ್ಜಿ ಅವರು ವಕ್ಫ್ ಮಂಡಳಿಯಿಂದ ಸಂಬಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇವು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಪಶ್ಚಿಮ ಬಂಗಾಳ ಸರ್ಕಾರದ 2024 ರ ಸಾರ್ವಜನಿಕ ರಜಾದಿನಗಳನ್ನು ಎರಡು ಪಟ್ಟಿಗಳಾಗಿ ವಿಂಗಡಿಸಿದ್ದು ಅದನ್ನು ಆರ್ಥಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. N. I. ಆಕ್ಟ್ ಅಡಿಯಲ್ಲಿ 2024 ರ ಸಾರ್ವಜನಿಕ ರಜಾದಿನಗಳು ಎಂಬ ಪಟ್ಟಿಯಲ್ಲಿ ಅಕ್ಟೋಬರ್ 2 ರಂದು ಮಹಾಲಯ, ಅಕ್ಟೋಬರ್ 10 ರಂದು ದುರ್ಗಾ ಪೂಜೆ ಮಹಾ ಸಪ್ತಮಿ,  ಅಕ್ಟೋಬರ್ 11 ದುರ್ಗಾ ಪೂಜೆ ಮಹಾ ಅಸ್ತಮಿ ಮತ್ತು ಅಕ್ಟೋಬರ್ 12 ರಂದು ದುರ್ಗಾ ಪೂಜೆ ದಶಮಿಗೆ ರಜೆ ಘೋಷಿಸಿದೆ.

ಕೋಲ್ಕತ್ತಾದ ರಿಜಿಸ್ಟ್ರಾರ್ ಆಫ್ ಅಶ್ಯೂರೆನ್ಸ್ ಕಚೇರಿಗಳನ್ನು ಹೊರತುಪಡಿಸಿ, ಪಶ್ಚಿಮ ಬಂಗಾಳ ಸರ್ಕಾರದ ಅಡಿಯಲ್ಲಿನ ಕಚೇರಿಗಳು, ಕೋಲ್ಕತ್ತಾದ ಸ್ಟಾಂಪ್ ರೆವಿನ್ಯೂ ಕಲೆಕ್ಟರ್ ಕಚೇರಿಗಳಿಗೆ ಸಾರ್ವಜನಿಕ ರಜಾದಿನಗಳಲ್ಲಿ ಪಟ್ಟಿ ಮಾಡದ ಪಟ್ಟಿ II ರಲ್ಲಿ ನಿರ್ದಿಷ್ಟಪಡಿಸಿದ ದಿನಗಳಲ್ಲಿ ರಜೆ ಘೋಷಿಸಿದೆ. ಪಟ್ಟಿ II ಅಕ್ಟೋಬರ್ 7 ರಂದು ಮಹಾ ಚತುರ್ಥಿ, ಅಕ್ಟೋಬರ್ 8 ರಂದು ಮಹಾ ಪಂಚಮಿ, ಅಕ್ಟೋಬರ್ 9 ರಂದು ಮಹಾ ಷಷ್ಠಿ ಮತ್ತು ಅಕ್ಟೋಬರ್ 14 ಮತ್ತು 15 ರಂದು ದುರ್ಗಾ ಪೂಜೆಗೆ ಹೆಚ್ಚಿನ ರಜಾದಿನಗಳನ್ನು ಘೋಷಿಸಿದೆ. 2023 ಮತ್ತು 2022ರಲ್ಲಿಯೂ ದುರ್ಗಾ ಪೂಜೆಗೆ ರಜೆ ಘೋಷಿಸಿತ್ತು. ಹಾಗಾಗಿ ಅಮಿತ್ ಶಾ ಹೇಳಿಕೆ ಸುಳ್ಳಿನಿಂದ ಕೂಡಿದೆ.

ಮುಸ್ಲಿಂ ಧರ್ಮಗುರುಗಳು ಮಾತ್ರ ಬಂಗಾಳದ ಸರ್ಕಾರಿ ಸಂಬಳ ಪಡೆಯುತ್ತಾರೆಯೇ?

2012 ರಲ್ಲಿ, ಮಮತಾ ಬ್ಯಾನರ್ಜಿ ಸರ್ಕಾರವು ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ ಗೌರವಧನವನ್ನು ಘೋಷಿಸಿತು. ಈ ನಿರ್ಧಾರವನ್ನು ಆ ಸಮಯದಲ್ಲಿ ಕಲ್ಕತ್ತಾ ಹೈಕೋರ್ಟು ತಳ್ಳಿಹಾಕಿತ್ತು. ಅಂದಿನಿಂದ ಮಾಸಿಕ ಭತ್ಯೆಗಳನ್ನು ವಕ್ಫ್ ಬೋರ್ಡ್ ಮೂಲಕ ನೀಡಲಾಗುತ್ತಿದೆ.

ಮತ್ತೆ ಸೆಪ್ಟೆಂಬರ್ 2020 ರಲ್ಲಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಸುಮಾರು 8,000 ಹಿಂದೂ ಪುರೋಹಿತರಿಗೆ ತಿಂಗಳಿಗೆ ₹ 1,000 ಗೌರವಧನವನ್ನು ಘೋಷಿಸಿದರು. ಆ ವರ್ಷದ ದುರ್ಗಾಪೂಜೆಗೂ ಮುನ್ನ ಗೌರವಧನ ಆರಂಭಿಸುವಂತೆ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದರು. ಕ್ರಿಶ್ಚಿಯನ್ ಪಾದ್ರಿಗಳು ಸೇರಿದಂತೆ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಬೆಂಬಲವನ್ನು ಕೇಳಿದರೆ ಅವರಿಗೆ ಸಹಾಯ ಮಾಡಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದು ಆ ಸಂದರ್ಭದಲ್ಲಿ ಹೇಳಿದ್ದರು.

ಈ ಘೋಷಣೆಯ ನಂತರ ವಿರೋಧ ಪಕ್ಷಗಳು ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದ್ದಾರೆ ಎಂದು ಆರೋಪಿಸಿ ಟೀಕಿಸಿದ್ದರು.

ಆಗಸ್ಟ್ 2023 ರಲ್ಲಿ ಮುಸ್ಲಿಂ ಧರ್ಮಗುರುಗಳು ಮತ್ತು ಹಿಂದೂ ಪುರೋಹಿತರ ಮಾಸಿಕ ಭತ್ಯೆಗಳಲ್ಲಿ 500 ರೂ ಹೆಚ್ಚಳವನ್ನು ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದರು. ಹೆಚ್ಚಳದ ನಂತರ ಇಮಾಮ್‌ಗಳು ಈಗ ರೂ. 3000 ಮತ್ತು ಮುಸೆಝಿನ್‌ಗಳು ಮತ್ತು ಹಿಂದೂ ಪುರೋಹಿತರು ರೂ. 1500 ಭತ್ಯೆ ಪಡೆಯುತ್ತಿದ್ದಾರೆ.

ಆದ್ದರಿಂದ ‘ಇಮಾಮ್ ಮತ್ತು ಮುಲ್ಲಾ’ಗಳು ಮಾತ್ರ ಸಂಬಳ ಪಡೆಯುತ್ತಾರೆ ಎಂದು ಹೇಳುವುದು ಸರಿಯಲ್ಲ. ಹಿಂದೂ ಅರ್ಚಕರಿಗೂ ಭತ್ಯೆ ಸಿಗುತ್ತದೆ. ಆದಾಗ್ಯೂ, ಅವರು ಪಡೆಯುವ ಭತ್ಯೆ ಮೊತ್ತದಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಇಮಾಮ್‌ಗಳು ಮತ್ತು ಮುಜಿನ್‌ಗಳಿಗೆ ಸ್ಟೈಫಂಡ್ ಘೋಷಿಸಿದ ಎಂಟು ವರ್ಷಗಳ ನಂತರ ಹಿಂದೂ ಪುರೋಹಿತರಿಗೆ ಸ್ಟೈಫಂಡ್ ಘೋಷಿಸಲಾಯಿತು. ಹಾಗಾಗಿ ಅಮಿತ್ ಶಾ ಹೇಳಿಕೆ ಸುಳ್ಳಾಗಿದೆ.


ಇದನ್ನೂ ಓದಿ; Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *