ಮೋದಿ ಪ್ರಧಾನಿಯಾಗುವ ಮುನ್ನ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು

ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಹೊಗಳುವ ಭರದಲ್ಲಿ ಈ ಹಿಂದೆ ಏನೂ ಅಭಿವೃದ್ದಿಯಾಗಿರಲಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಅದೇ ರೀತಿಯಾಗಿ “ಮೋದಿ ಪ್ರಧಾನಿಯಾಗುವ ಮುನ್ನ ಕೇವಲ 300 ಸ್ಟಾರ್ಟಪ್‌ಗಳಿದ್ದವು. ಈಗ ಒಂದು ಲಕ್ಷಕ್ಕೂ ಅಧಿಕವಾಗಿವೆ” ಎಂದು ಯೂಟ್ಯೂಬರ್ ಗೌರವ್ ಚೌಧರಿ ಹೇಳಿದ್ದಾರೆ. ಇದನ್ನು ಎಎನ್‌ಐ ವರದಿ ಮಾಡಿದೆ. ಏಪ್ರಿಲ್ 28 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ರವರು 2014ರಲ್ಲಿ ಕೇವಲ 350 ಸ್ಟಾರ್ಟಪ್‌ಗಳಿದ್ದವು. ಮೋದಿ ಪ್ರಧಾನಿಯಾದ ನಂತರ 300 ಪಟ್ಟು ಬೆಳವಣಿಗೆಯಾಗಿದೆ” ಎಂದಿದ್ದರು. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಈ ಕುರಿತು ಸಂಬಂಧಿತ ಕೀ ವರ್ಡ್‌ಗಳೊಂದಿಗೆ ಯೂಟ್ಯೂಬ್‌ನಲ್ಲಿ ಹುಡುಕಿದಾಗ ಅಂಕಿ ಸಂಖ್ಯೆಗಳ ಮಾಹಿತಿ ಒದಗಿಸುವ ಸ್ಟ್ಯಾಟಿಸ್ಟ ಅಂಕಿ ಅಂಶಗಳು ಲಭ್ಯವಾಗಿವೆ. ಅದರಂತೆ 2012ರಲ್ಲಿ ಭಾರತದಲ್ಲಿ ಬರೋಬ್ಬರಿ 5000 ಸ್ಟಾರ್ಟ್‌ಪ್‌ಗಳು ಕೆಲಸ ಮಾಡುತ್ತಿದ್ದವು. 2013ರಲ್ಲಿ 3000 ಸ್ಟಾರ್ಟಪ್‌ಗಳು ಹೊಸದಾಗಿ ನೋಂದಾಯಿಸಿಕೊಂಡಿವೆ. 2014ರಲ್ಲಿ ಆ ಸಂಖ್ಯೆ 4500ಕ್ಕೆ ತಲುಪಿದರೆ 2015ರಲ್ಲಿ 8000 ಕ್ಕೆ ಮುಟ್ಟಿತ್ತು ಎಂದು ವರದಿ ಮಾಡಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಸ್ಟಾರ್ಟಪ್ ನೋಂದಾಯಿಸಿಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿಯುತ್ತಿದ್ದು, 2022ರಲ್ಲಿ 652 ಸ್ಟಾರ್ಟಪ್ ನೊಂದಾಯಿಸಿಕೊಂಡಿದ್ದರೆ 2023ರಲ್ಲಿ ಕೇವಲ 489ಕ್ಕೆ ಕುಸಿದಿವೆ ಎಂದು ಮಾಹಿತಿ ನೀಡಿದೆ.

ಅದಕ್ಕೂ ಮುಂಚೆ ಸ್ಟಾರ್ಟಪ್‌ಗಳ ಬೆಳವಣಿಗೆ ತಿಳಿಯಲು ಮತ್ತಷ್ಟು ಹುಡುಕಿದಾಗ 2005 ರಿಂದ RedBus, JustDial ಮತ್ತು Snapdeal ನಂತಹ ಸ್ಟಾರ್ಟಪ್‌ಗಳು ಉತ್ತಮ ಲಾಭದೊಂದಿಗೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಮಯಾಂಕ್ ವಾಧೇರ ಬರೆದ Linked.in ವರದಿ ಲಭ್ಯವಾಗಿದೆ. ವರದಿಯ ಪ್ರಕಾರ 2011 ರಲ್ಲಿ ಯುಪಿಎ ಸರ್ಕಾರವು ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವು ಸ್ಟಾರ್ಟ್ಅಪ್ ಇಂಡಿಯಾ ಸ್ಟ್ಯಾಂಡಪ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸಿತು. ಅದರ ಪರಿಣಾಮವಾಗಿ 2012-2015 ರ ಅವಧಿಯಲ್ಲಿ ಫ್ಲಿಪ್‌ಕಾರ್ಟ್, ಓಲಾ, ಝೊಮ್ಯಾಟೊ ಮತ್ತು ಓಯೊದಂತಹ ಇ-ಕಾಮರ್ಸ್ ಸ್ಟಾರ್ಟ್‌ಅಪ್‌ಗಳು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡವು ಎನ್ನಲಾಗಿದೆ.

ಸದ್ಯ ಭಾರತದಲ್ಲಿ 1,12,718 ಸ್ಟಾರ್ಟಪ್‌ಗಳಿವೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ಮಾಡಿದೆ. ಆದರೆ ಅವುಗಳಲ್ಲಿ ಶೇ.95%ಗಿಂತಲೂ ಹೆಚ್ಚಿನ ಸ್ಟಾರ್ಟಪ್‌ಗಳು ವಿಫಲವಾಗಿವೆ ಎಂದು ತಜ್ಞರ ಹೇಳಿಕೆಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಒಟ್ಟಾರೆಯಾಗಿ ಮೋದಿ ಪ್ರಧಾನಿಯಾಗುವ ಮೊದಲೇ ಭಾರತದಲ್ಲಿ ಅತಿ ಮಹತ್ವದ ಸ್ಟಾರ್ಟಪ್‌ಗಳಿದ್ದವು. ಈಗ ಒಂದು ಲಕ್ಷಕ್ಕು ಅತಿ ಹೆಚ್ಚಿನ ಸ್ಟಾರ್ಟಪ್‌ಗಳಿದ್ದರೂ ಬಹುತೇಕ ವಿಫಲವಾಗಿವೆ. ಹಾಗಾಗಿ ಮೋದಿ ಪ್ರಧಾನಿಯಾಗುವ ಮುನ್ನ ಕೇವಲ 300 ಸ್ಟಾರ್ಟಪ್‌ಗಳಿದ್ದವು ಎಂಬುದು ಸುಳ್ಳು.


ಇದನ್ನೂ ಓದಿ: ಬಂಗಾಳದಲ್ಲಿ ದುರ್ಗಾ ಪೂಜೆಗೆ ಸರ್ಕಾರಿ ರಜೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *