Fact Check: ತಮಿಳುನಾಡಿನಲ್ಲಿ “ಗೋ ಬ್ಯಾಕ್ ಮೋದಿ” ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಕೋಲ್ಕತ್ತಾದ ಹಳೆಯ ಪೋಟೋ ವೈರಲ್ ಆಗಿದೆ

ಮೋದಿ

ಪ್ರಸ್ತುತ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಪಲಿತಾಂಶಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ 2 ಸಾವಿರ ಪೋಲಿಸ್ ಭದ್ರತೆಯೊಂದಿಗೆ 48 ಗಂಟೆಗಳ ಕಾಲ(ಎರಡು ದಿನ) ಧ್ಯಾನಕ್ಕೆ ತೆರಳಿದ್ದಾರೆ. ಆದರೆ ಮೋದಿಯವರ ಧ್ಯಾನದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ತಮಿಳುನಾಡು ಸೇರಿದಂತೆ ದೇಶದಾದ್ಯಂತ ವ್ಯಾಪಕವಾಗದ ಟೀಕೆಗೆ ಗುರಿಯಾಗುತ್ತಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಮೋದಿಯವರನ್ನು ಟೀಕಿಸಲಾಗುತ್ತಿದೆ.

ಈಗ, “ತಮಿಳುನಾಡಿನ ಜನಗಳಷ್ಟು ಮೋದಿಯನ್ನು ದ್ವೇಷಿಸುವವರು ಇಲ್ಲ” ಎಂದು ರಸ್ತೆಯ ಮೇಲೆ “ಗೋ ಬ್ಯಾಕ್ ಮೋದಿ” ಎಂದು ಬರೆದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದು ನಿಜವಾಗಿಯೂ ತಮಿಳುನಾಡಿನ ಚಿತ್ರವೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಫೇಸ್‌ಬುಕ್‌ನಲ್ಲಿ ಸಹ ಈ ಚಿತ್ರವನ್ನು ತಮಿಳುನಾಡಿನದು ಎಂದು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಈ ಫೋಟೋ ಜನವರಿ 2020 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಪ್ರಧಾನಿ ಮೋದಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದ್ದಾಗಿದೆ.

ಈ ಕುರಿತು ಇನ್ನಷ್ಟು ತಿಳಿಯಲು ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ 11 ಜನವರಿ 2020 ರಂದು ಇದೇ ಚಿತ್ರವನ್ನು ಕೋಲ್ಕತ್ತಾದ ಎಸ್‌ಪ್ಲೇನೇಡ್‌ನಲ್ಲಿ ನಡೆದ ಪ್ರತಿಭಟನೆಯದು ಎಂದು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಫೋಟೋದ ಹಿನ್ನೆಲೆಯಲ್ಲಿ “ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್ ಹೇರ್ ಸ್ಟ್ರೀಟ್ ಪೋಲೀಸ್ ಸ್ಟೇಷನ್” ಎಂದು ಬರೆದಿರುವ ಕಟ್ಟಡವನ್ನು ನಾವು ಗುರುತಿಸಿದ್ದೇವೆ.

ಗೂಗಲ್‌ನಲ್ಲಿ ಈ ಪೋಲಿಸ್ ಸ್ಟೇಷನ್ ರಸ್ತೆಯ ಕುರಿತು ಹುಡುಕಿದಾಗ ವೈರಲ್ ಚಿತ್ರವು ಕೋಲ್ಕತ್ತಾದ್ದಾಗಿದೆ ಎಂದು ತಿಳಿದು ಬಂದಿದೆ, ವೈರಲ್ ಸಂದೇಶಗಳಲ್ಲಿ ಪ್ರತಿಪಾದಿಸಿರುವಂತೆ ಇದು ತಮಿಳುನಾಡಿನದಲ್ಲ ಎಂದು ದೃಢವಾಗಿದೆ.

ವರದಿಗಳ ಪ್ರಕಾರ, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಜನವರಿ 11, 2020 ರಂದು ಮೋದಿಯವರ ಕೋಲ್ಕತ್ತಾ ಭೇಟಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸುಮಾರು 30,000 ಜನರು ಭಾಗವಹಿಸಿದ್ದರು ಎಂದು ವರದಿಗಳು ತಿಳಿಸುತ್ತವೆ.

ಕೋಲ್ಕತ್ತಾದ ಎಸ್ಪ್ಲಾನೇಡ್‌ನಲ್ಲಿ ಅದೇ ಸ್ಥಳದಲ್ಲಿ ಆಯೋಜಿಸಲಾದ ಇತರ ಪ್ರತಿಭಟನೆಗಳ ವಿವರಗಳು ಸಹ ನಮಗೆ ಲಭ್ಯವಾಗಿವೆ – ಅವುಗಳಲ್ಲಿ ಒಂದು ಫೆಬ್ರವರಿ 2019ರಲ್ಲಿ ಸಿಬಿಐ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಧರಣಿ ನಡೆಸಿರುವುದು ಕಂಡು ಬಂದಿದೆ. ಫೋಟೋ ಸುದ್ದಿ ಸಂಸ್ಥೆ ಗೆಟ್ಟಿ ಇಮೇಜಸ್ ಪ್ರಕಟಿಸಿದ ಈ ಪ್ರತಿಭಟನೆಯ ದೃಶ್ಯಗಳು ವೈರಲ್ ಚಿತ್ರವನ್ನೇ ತೋರಿಸುತ್ತವೆ. ಹಿನ್ನೆಲೆಯಲ್ಲಿ ಕಟ್ಟಡ, ಅದರ ಸ್ಥಳವನ್ನು ಕೋಲ್ಕತ್ತಾ ಎಂದು ಉಲ್ಲೇಖಿಸಲಾಗಿದೆ.

ಆದ್ದರಿಂದ ಗೋ ಬ್ಯಾಕ್ ಮೋದಿ ಎಂದು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಹಂಚಿಕೊಳ್ಳುತ್ತಿರುವ ಚಿತ್ರವು ಮೂಲತಃ ಕೋಲ್ಕತ್ತಾದ್ದಾಗಿದೆ.


ಇದನ್ನು ಓದಿ: ಲಾವೋಸ್‌ ನಲ್ಲಿ ಪತ್ತೆಯಾದ ಬೃಹತ್ ಬುದ್ಧನ ಪ್ರತಿಮೆಯನ್ನು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *