Fact Check: ಲಾವೋಸ್‌ ನಲ್ಲಿ ಪತ್ತೆಯಾದ ಬೃಹತ್ ಬುದ್ಧನ ಪ್ರತಿಮೆಯನ್ನು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ

ಬುದ್ಧ

ಬುದ್ಧ ಪೂರ್ಣಿಮೆಗೆ ಕೆಲವೇ ದಿನಗಳು ಬಾಕಿ ಇದ್ದ ಸಂದರ್ಭದಲ್ಲಿ ನೇಪಾಳದಲ್ಲಿ 1200 ವರ್ಷಗಳಷ್ಟು ಹಳೆಯದಾದ ಬೃಹತ್ ಬುದ್ಧನ ಮೂರ್ತಿ ಪತ್ತೆಯಾಗಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಭೂಮಿಯಲ್ಲಿ ಹುದುಗಿದ್ದ ಬೃಹತ್ ಪ್ರತಿಮೆಯನ್ನು ಉತ್ಖನನ ನಡೆಸಿ ಹೊರ ತೆಗೆಯುವುದನ್ನು ನೋಡಬಹುದು. ಇದು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಎಲ್ಲೆಡೆ ವೈರಲ್ ಆಗುತ್ತಿದೆ. ನಿಜಕ್ಕೂ ಈ ಬುದ್ಧನ ಮೂರ್ತಿ ನೇಪಾಳದಲ್ಲಿ ಪತ್ತೆಯಾಗಿದೆಯೇ? ಈ ಲೇಖನದ ಮೂಲಕ ಪರಿಶೀಲಿಸೋಣ.

ಪೇಸ್‌ಬುಕ್‌ನಲ್ಲಿ ಇದು ನೇಪಾಳದಲ್ಲಿ ಪತ್ತೆಯಾಗಿದೆ ಎಂದು ಸಾಕಷ್ಟು ಜನರು ಹಂಚಿಕೊಂಡಿದ್ದಾರೆ. ಅವುಗಳನ್ನು ನೀವು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಭಗವಾನ್ ಬುದ್ಧನ ಬೃಹತ್ ಪ್ರತಿಮೆ ಪತ್ತೆಯಾಗಿರುವುದು ನೇಪಾಳದಲ್ಲಿ ಅಲ್ಲ, ಲಾವೋಸ್‌ನಲ್ಲಿ ಎಂದು ಕಂಡುಬಂದಿದೆ. ಲಾವೊ ಅಧಿಕಾರಿಗಳು ಮೇ 16 ರಂದು ಉತ್ತರ ಲಾವೊ ಪ್ರಾಂತ್ಯದ ಬೊಕಿಯೊದಲ್ಲಿ ಮೆಕಾಂಗ್ ನದಿಯ ಬಳಿ ಮರಳು ಪ್ರದೇಶದಿಂದ ಕನಿಷ್ಠ ಎರಡು ಮೀಟರ್ ಎತ್ತರವಿರುವ ಬುದ್ಧನ ಪ್ರತಿಮೆಯನ್ನು ಉತ್ಖನನ ನಡೆಸಿ ಹೊರತೆಗೆದಿದ್ದಾರೆ. ಮಾರ್ಚ್ 2024 ರಲ್ಲಿ ಈ ಪ್ರದೇಶದಲ್ಲಿ ಪ್ರಾರಂಭವಾದ ಪ್ರಾಚೀನ ಕಲಾಕೃತಿಗಳ ಹುಡುಕಾಟದ ಸಮಯದಲ್ಲಿ ಈ ಪ್ರತಿಮೆಯನ್ನು ಕಂಡುಹಿಡಿಯಲಾಗಿದೆ. 

ಲಾವೊ ರಾಷ್ಟ್ರೀಯ ಟಿವಿ ಪ್ರಕಾರ, ಮೇ 16 ರಂದು ಇದರ ಜೊತೆಗೆ ಒಂಬತ್ತು ಬುದ್ಧನ ವಿಗ್ರಹಗಳನ್ನು ಸಹ ಕಂಡುಹಿಡಿಯಲಾಗಿದೆ. ಪ್ರತಿಮೆಗಳ ಕಾಲ ಮತ್ತು ಮೂಲವನ್ನು ಗುರುತಿಸಲಾಗಿಲ್ಲ. ಅವುಗಳಲ್ಲಿ ಹೆಚ್ಚಿನವನ್ನು ಕಂಚಿನಿಂದ ಮಾಡಲ್ಪಟ್ಟಿವೆ ಮತ್ತು ಕೆಲವು ಅಕ್ಷರಗಳಿಂದ ಸಹ ಕೆತ್ತಲ್ಪಟ್ಟಿವೆ. ಕೆಲವರು ಈ ಕಲಾಕೃತಿಗಳು 14 ರಿಂದ 16 ನೇ ಶತಮಾನದ ಅವಶೇಷಗಳು ಎಂದು ನಂಬಿದ್ದಾರೆ, ಈ ಕಲಾಕೃತಿಗಳ ನಿಜವಾದ ಐತಿಹಾಸಿಕ ಕಾಲ ನಿಗೂಢವಾಗಿ ಉಳಿದಿವೆ, ಮತ್ತು ಹೆಚ್ಚಿನ ಸಂಶೋಧನೆ ಇನ್ನಷ್ಟೇ ನಡೆಯಬೇಕಿದೆ.

ಈ ವಿಗ್ರಹ ಲೋವೋಸ್‌ನಲ್ಲಿ ಪತ್ತೆಯಾಗಿರುವ ಕುರಿತು ಸಾಕಷ್ಟು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಇದರಿಂದ ಬುದ್ಧನ ವಿಗ್ರಹ ಪತ್ತೆಯಾಗಿರುವುದು ನೇಪಾಳದಲ್ಲಿ ಅಲ್ಲ ಲಾವೋಸ್‌ ನಲ್ಲಿ ಎಂದು ವರದಿಗಳು ಖಚಿತ ಪಡಿಸುತ್ತವೆ. ಲಾವೋದಲ್ಲಿನ ಬೌದ್ಧ ಧರ್ಮದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಬೇಕಾದರೆ ಈ ಲೇಖನ ಓದಿ.

ಪ್ರತಿಮೆ ಪತ್ತೆಯಾದ ಈ ಪ್ರದೇಶದಲ್ಲಿ ಇದುವರೆಗೂ ಸುಮಾರು 282 ಬುದ್ಧನ ವಿಗ್ರಹಗಳು ಪತ್ತೆಯಾಗಿವೆ, ಇದು ಪ್ರಾಚೀನ ನಗರವಾದ ಸೌವನ್ನಖೋಮ್‌ಖಾಮ್‌ನ ಸ್ಥಳವೆಂದು ನಂಬಲಾಗಿದೆ. ಪ್ರಾಂತೀಯ ಅಧಿಕಾರಿಗಳು ಈ ಬುದ್ಧನ ವಿಗ್ರಹಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶಿಸಲು ದೇವಾಲಯದ ಬಳಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಯೋಜಿಸಿದ್ದಾರೆ. 

ಇದೇ ರೀತಿ, 2021ರ ಮೇ ತಿಂಗಳಲ್ಲಿ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಉಡುಪಿಯ ಸಮೀಪದ ಮಡುಗುಬೆಟ್ಟು ಗ್ರಾಮವೊಂದರ ಪ್ರಾಚೀನ ದೇವಾಲಯದ ಬಳಿ ಇರುವ ಬಾವಿಯೊಂದರಲ್ಲಿ 5 ನೇ ಶತಮಾನಕ್ಕೆ ಸೇರಿದ ಗುಪ್ತರ ಕಾಲದ ಬುದ್ಧನ ಮೂರ್ತಿಯೊಂದು ಪತ್ತೆಯಾಗಿತ್ತು. ಈ ಮೂಲಕ ಗುಪ್ತರ ಕಾಲದಲ್ಲಿ ಅಥವಾ ಅದಕ್ಕೂ ಹಿಂದೆ(ಮೌರ್ಯರ ಕಾಲ) ಕರ್ನಾಟಕದಾದ್ಯಂತ ಬೌದ್ಧ ಧರ್ಮದ ಪ್ರಭಾವ ಸಾಕಷ್ಟು ಇತ್ತು ಎಂಬುದನ್ನು ಇದು ಸಾಬೀತು ಪಡಿಸುತ್ತದೆ.

ಒಂದು ಕಾಲದಲ್ಲಿ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳ ಪ್ರಮುಖ ಧರ್ಮವಾಗಿ ಹೊರಹೊಮ್ಮಿದ ಬೌದ್ಧ ಧರ್ಮದ ಕುರುಹುಗಳು ಉತ್ಖನದ ವೇಳೆ, ಅಥವಾ ಭೂಮಿಯನ್ನು ಅಗೆಯುವ ಸಂದರ್ಭದಲ್ಲಿ ಸಿಗುವುದು ಈಗ ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಸಧ್ಯ ನೇಪಾಳದಲ್ಲಿ ಬುದ್ಧನ ಪ್ರತಿಮೆ ಪತ್ತೆ ಆಗಿದೆ ಎಂದು ಹಂಚಿಕೊಳ್ಳುತ್ತಿರುವ ವಿಡಿಯೋ ಮೂಲತಃ ಲಾವೋಸ್‌ನಲ್ಲಿ ದೊರೆತಿದೆ.


ಇದನ್ನು ಓದಿ: ಕೇಂದ್ರ ಸರ್ಕಾರ ಪ್ರತೀ ಮನೆಗಳಿಗೆ ಉಚಿತ ವೈ-ಫೈ ಒದಗಿಸುತ್ತದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಸಾಮಾಜಿಕ ಜಾಲತಾಣದಲ್ಲಿ ಮಹೇಶ್‌ ವಿಕ್ರಮ್‌ ಹೆಗ್ಡೆ ಸುಳ್ಳು ಮತ್ತೊಮ್ಮೆ ವೈರಲ್‌


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *