Fact Check | ವೈರಲ್ ವ್ಯಂಗ್ಯ ಚಿತ್ರ ಗಾಂಧಿ ಕುಟುಂಬದ ವಿರುದ್ಧವಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರವೊಂದು ವ್ಯಾಪಕವಾಗಿ ವೈರಲಾಗುತ್ತಿದ್ದು ಇದನ್ನು ಗಾಂಧಿ ಕುಟುಂಬ ವಿರುದ್ಧ ರಚಿಸಲಾಗಿದೆ ಎನ್ನಲಾಗುತ್ತಿದೆ. ಈ ಕಾರ್ಟೂನ್ ನಲ್ಲಿ ಒಂದು ಹಸು ಎಲೆಯನ್ನು ತಿನ್ನುತ್ತಿದ್ದು ಆ ಎಲೆ ಭಾರತದ ಭೂಪಟದಂತಿದ್ದು, ಎರಡು ಬಕೆಟ್‌ಗಳು ಹಸುವಿನ ಬಳಿ ಇರುವುದನ್ನು ನೋಡಬಹುದಾಗಿದೆ. ಅದರಲ್ಲಿ ಒಂದು ಬಕೆಟ್‌ನಲ್ಲಿ ಹಾಲಿದ್ದು, ಆ ಬಕೆಟ್‌ ಮೇಲೆ ಗಾಂಧಿ ಕುಟುಂಬ ಎಂದು ಬರೆಯಲಾಗಿದೆ. ಇನ್ನೊಂದು ಬಕೆಟ್‌ನಲ್ಲಿ ಸಗಣಿ ಇದ್ದು, ಆ ಬಕೆಟ್‌ನ ಮೇಲೆ ಭಾರತೀಯ ಜನರಿಗೆ  ಎಂದು ಬರೆಯಲಾಗಿದೆ. ಇನ್ನು ಹಸುವಿನ ಮೇಲೆ ಕಾಂಗ್ರಸ್‌ ಪಕ್ಷದ ಚಿಹ್ನೆಯನ್ನು ಬಿಡಿಸಲಾಗಿದೆ.

ಇದೇ ವ್ಯಂಗ್ಯ ಚಿತ್ರವನ್ನು ಬಳಸಿಕೊಂಡು ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಗಾಂಧಿ ಕುಟುಂಬವನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಹೀಗೆ ವೈರಲ್ ಆಗುತ್ತಿರುವ ವ್ಯಂಗ್ಯ ಚಿತ್ರವನ್ನು ನಿಜಕ್ಕೂ ಗಾಂಧಿ ಕುಟುಂಬವನ್ನು ಗುರಿಯಾಗಿಸಿ ರಚಿಸಲಾಗಿದೆಯೇ ಎಂಬುದು ಅನುಮಾನವನ್ನು ಹುಟ್ಟಿಸುತ್ತಿದೆ. ಹಾಗಾಗಿ ಇದು ನಿಜವಾದ ವ್ಯಂಗ್ಯ ಚಿತ್ರವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಆಗುತ್ತಿರುವ ಕಾರ್ಟೂನ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ 9 ಫೆಬ್ರವರಿ 20201 ರಂದು ಕಾಂಗ್ರೆಸ್‌ ಅನ್ನು ಟೀಕಿಸಿರುವ ವೈರಲ್‌ ಚಿತ್ರವನ್ನೇ ನಾವು ಕಂಡುಕೊಂಡೆವು. ಆದರೆ ಇದೇ ಪೋಸ್ಟ್‌ನ ಕಾಮೆಂಟ್ ಬಾಕ್ಸ್ ನಲ್ಲಿ, ರಾಕೇಶ್ ಕೃಷ್ಣನ್ ಸಿಂಹ ಎಂಬ ಎಕ್ಸ್ ಖಾತೆಯ ಬಳಕೆದಾರರು ಮೂಲ ಚಿತ್ರವನ್ನು ಹಂಚಿಕೊಂಡಿದ್ದರು.

ಅವರ ಪೋಸ್ಟ್‌ ಅನ್ನು ಗಮನಿಸಿದಾಗ ವೈರಲ್‌ ವ್ಯಂಗ್ಯ ಚಿತ್ರದ ಕುರಿತು ವಿವರಣೆಯನ್ನು ಬರೆದಿದ್ದರು. ಅವರು ಹಂಚಿಕೊಂಡ ಚಿತ್ರದಲ್ಲಿ ಹಸುವಿನ ಮೇಲೆ ಮೇಕ್ ಇನ್ ಇಂಡಿಯಾ ಎಂದು ಬರೆಯಾಲಾಗಿತ್ತು. ಹಾಲಿರುವ ಬಕೆಟ್ ನ ಮೇಲೆ ವಿದೇಶಿ ಬಂಡವಾಳಿಗರು ಮತ್ತು ಸಗಣಿ ತುಂಬಿರುವ ಬಕೆಟ್ ಮೇಲೆ ಭಾರತೀಯ ಜನರಿಗಾಗಿ ಎಂದು ಬರೆದಿರುವುದು ಕಂಡುಬಂದಿದೆ. ಈ ಮೂಲ ವ್ಯಂಗ್ಯ ಚಿತ್ರದಲ್ಲಿ ಭಾರತದ ಮೇಕ್‌ ಇನ್‌ ಇಂಡಿಯಾ ಯೋಜನೆ ಹೇಗೆ ಬಂಡವಾಳಶಾಹಿ ವ್ಯವಸ್ಥೆಗೆ ಉಪಯುಕ್ತವಾಗಿದೆ ಎಂಬ ರೀತಿಯಲ್ಲಿ ಬರೆಯಲಾಗಿದೆ.

ಇನ್ನು ಈ ಚಿತ್ರವನ್ನು ಭಾರತದ ವ್ಯಂಗ್ಯ ಚಿತ್ರಕಾರ ಅಮಲ್ ಮೇದಿ ಅವರು ಬರೆದಿದ್ದಾರೆ ಎಂಬುದು ತಿಳಿಯಿತು.  ಅಮಲ್‌ ಮೇದಿ ಅವರ ಫೇಸ್‌ಬುಕ್‌ ಖಾತೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿದಾಗ, 28 ಮಾರ್ಚ್ ನಲ್ಲಿ ಅಮಲ್‌ ಮೇದಿ ಅವರೇ ಇದು ಒಂಬತ್ತು ವರ್ಷಗಳಿಂದಲೂ ಕೂಡ ಬೇರೆ ಬೇರೆ ವಿಚಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂಬುದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವುದು ಕಂಡು ಬಂದಿದೆ. ಜೊತೆಗೆ ಮೂಲ ಚಿತ್ರದ ರಚನೆಕಾರರು ಅವರೇ ಆಗಿದ್ದು, ಆವರ ವ್ಯಂಗ್ಯ ಚಿತ್ರದ ಮೂಲ ಉದ್ದೇಶವನ್ನು ತೆಗೆದು ಹಾಕಿ ಗಾಂಧಿ ಕುಟುಂಬದ ವಿರುದ್ಧ ಈ ವ್ಯಂಗ್ಯ ಚಿತ್ರವನ್ನು ರಚಿಸಲಾಗಿದೆ ಎಂಬಂತೆ ಬಿಂಬಿಸಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ಆಗುತ್ತಿರುವ ವ್ಯಂಗ್ಯ ಚಿತ್ರವು ಎಡಿಟೆಡ್‌ ಆಗಿದ್ದು, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಟೀಕಿಸಲು ಮೂಲ ಚಿತ್ರವನ್ನು ತಿರುಚಲಾಗಿದೆ ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ಈ ವಿಡಿಯೋ ನೋಡಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *