Fact Check: ಜೂನ್ 5ರ ನಂತರ ರಾಹುಲ್ ಗಾಂಧಿ ಬ್ಯಾಂಕಾಕ್‌ಗೆ ತೆರಳಲು ವಿಮಾನದ ಟಿಕೆಟ್‌ ಬುಕ್ ಮಾಡಿದ್ದಾರೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಜೂನ್ 04 ರಂದು ಪ್ರಕಟವಾಗಲಿದೆ. ಈ ಮಧ್ಯೆ ಇಂದಿನಿಂದ ಸಮೀಕ್ಷೆಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಜೂನ್ 5 ಕ್ಕೆ ಲೋಕಸಭಾ ಚುನಾವಣೆ ಸೋಲುವ ಭಯದಿಂದ ರಾಹುಲ್ ಗಾಂಧಿಯವರು ಬ್ಯಾಂಕಾಕ್ ಗೆ ಓಡಿ ಹೋಗಲು ವಿಮಾನ ಟಿಕೆಟ್‌ ಬುಕ್ ಮಾಡಿದ್ದಾರೆ ಎಂದು ಪ್ರತಿಪಾದಿಸಿದ ಟಿಕೆಟ್‌ ಚಿತ್ರವೊಂದರ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಈ ವಿಮಾನದ ಟಿಕೆಟ್‌ ನಕಲಿ ಎಂದು ತಿಳಿದು ಬಂದಿದೆ. ಗೂಗಲ್ ರಿವರ್ಸ್‌ ಇಮೇಜ್ ನಲ್ಲಿ ನಾವು ಈ ಚಿತ್ರವನ್ನು ಹುಡುಕಿದಾಗ ಆಗಸ್ಟ್‌ 9, 2019 ರಲ್ಲಿ ಪ್ರಕಟವಾದ “ಲೈವ್ ಪ್ರಾಮ್ ಎ ಲಾಂಜ್” ಎಂಬ ವಾಯುಯಾನ ಮತ್ತು ಪ್ರಯಾಣದ ಸಲಹೆಗಳನ್ನು ನೀಡುವ ಸುದ್ಧಿ ಮಾಧ್ಯಮವೊಂದರ ಲೇಖನದಲ್ಲಿ ಈ ಮೂಲ ಚಿತ್ರ ದೊರಕಿದೆ. ಈ ಟಿಕೆಟ್‌ ಚಿತ್ರವನ್ನೇ ಬಳಸಿಕೊಂಡು ಅಜಯ್ ಎಂಬ ಹೆಸರನ್ನು ರಾಹುಲ್ ಗಾಂಧಿ ಎಂದು, ಮತ್ತು ವಿಮಾನದ ಸಂಖ್ಯೆಯನ್ನು ಬದಲಾಯಿಸಲಾಗಿದೆ.

ಈ ಲೇಖನದಲ್ಲಿ ಹೊಸದಾಗಿ ಪ್ರಾರಂಭವಾದ ವಿಸ್ತಾರ ಎಂಬ ವಿಮಾನ ಸಂಸ್ಥೆ ಮತ್ತು ಅದರ ಸೇವೆಗಳ ಕುರಿತು ವಿವರಗಳನ್ನು ನೀಡಲಾಗಿದೆ. ಈ ಲೇಖನವನ್ನು ಅಜಯ್ ಎಂಬ ವ್ಯಕ್ತಿಯೊಬ್ಬರು ತಮ್ಮ ವಿಮಾನಯಾನದ ಅನುಭವವನ್ನು ಬರೆದುಕೊಂಡಿದ್ದಾರೆ. ಮತ್ತು ತಾನು ಪ್ರಯಾಣಿಸಿದ ವಿಮಾನದ ಟಿಕೆಟ್‌ ಚಿತ್ರವನ್ನು ಈ ಲೇಖನದಲ್ಲಿ ನೀಡಿದ್ದಾರೆ. ಆ ಚಿತ್ರವನ್ನೇ ತಿದ್ದಿ ರಾಹುಲ್ ಗಾಂಧಿಯ ಹೆಸರು ಸೇರಿಸಲಾಗಿದೆ ಮತ್ತು ಎಲ್ಲಿಂದ ಪ್ರಯಾಣ ಮಾಡಲಾಗಿದೆ ಎಂಬ ವಿವರವನ್ನು ಅಳಿಸಿ ಎಲ್ಲಿಗೆ ತಲುಪುವವರಿದ್ದಾರೆ ಎಂಬಲ್ಲಿಗೆ ಬ್ಯಾಂಕಾಕ್ ಎಂದು ಬದಲಾಯಿಸಲಾಗಿದೆ.

ರಾಹುಲ್ ಗಾಂಧಿಯವರು ಜೂನ್ 5ರ ನಂತರ ಬ್ಯಾಂಕಾಕ್ ಪ್ರವಾಸ ಕೈಗೊಂಡಿರುವ ಕುರಿತು ನಾವು ಹುಡುಕಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಕೆಳಗೆ ವೈರಲ್ ಚಿತ್ರ ಮತ್ತು ಮೂಲ ಚಿತ್ರವನ್ನು ನೀವು ಗಮನಿಸಬಹುದು. ಈ ಎರಡೂ ಚಿತ್ರಗಳಲ್ಲಿರುವ ಕೈ ಬೆರಳಿನ ಚಿತ್ರ ಒಂದೇ ಆಗಿದ್ದು ಅನೇಕ ಹೋಲಿಕೆಗಳಿರುವುದನ್ನು ನೀವು ಗುರುತಿಸಬಹುದಾಗಿದೆ.

ಪ್ರಧಾನಿ ಮೋದಿಯವರು ಮೇ 17 ರಂದು ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರು ಜೂನ್ ನಾಲ್ಕರಂದು ಸೋಲುವ ಭಯದಲ್ಲಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದಿದ್ದರು. ನಂತರ ಅಮಿತ್ ಶಾ ಅವರು ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರು ಐದನೇ ಹಂತದ ಚುನಾವಣೆಯಲ್ಲಿ ಬಿಜೆಪಿಗೆ 310 ರಷ್ಟು ಸ್ಥಾನಗಳು ಸಿಗಲಿದೆ ಎಂದು ತಿಳಿದು ಜೂನ್ 4 ರಂದು ವಿದೇಶ ಪ್ರವಾಸ ಮಾಡಲು ವಿಮಾನದ ಟಿಕೆಟ್‌ ಬುಕ್ ಮಾಡಿದ್ದಾರೆ ಎಂದು ಟೀಕಿಸಿದ್ದರು.

ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ಕೆಲವು ಬಿಜೆಪಿ ಬೆಂಬಲಿಗರು ನಕಲಿ ವಿಮಾನದ ಟಿಕೆಟ್‌ ಅವನ್ನು ಸೃಷ್ಟಿಸಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಬ್ಯಾಂಕಾಕ್‌ಗೆ ತೆರಳಲು ವಿಮಾನದ ಟಿಕೆಟ್‌ ಬುಕ್ ಮಾಡಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ತಮಿಳುನಾಡಿನಲ್ಲಿ “ಗೋ ಬ್ಯಾಕ್ ಮೋದಿ” ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಕೋಲ್ಕತ್ತಾದ ಹಳೆಯ ಪೋಟೋ ವೈರಲ್ ಆಗಿದೆ


ವಿಡಿಯೋ ನೋಡಿ: 2024ರಲ್ಲಿ 9,60,000 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *