Fact Check | ಯಾದಗಿರಿಯಲ್ಲಿ ರೈತನೊಬ್ಬನ ಜಮೀನನ್ನು ವಕ್ಪ್ ಬೋರ್ಡ್ ವಶಪಡಿಸಿಕೊಂಡಿದೆ ಎಂಬುದು ಸುಳ್ಳು..!

“ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನು ದರ್ಗಾಕ್ಕೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ಹೇಳಿಕೊಂಡಿದೆ. ಇದೀಗ ಆ ಬಡ ರೈತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ವಕ್ಫ್‌ ಬೋರ್ಡ್‌ ಅಲ್ಲಿ ಈಗ ದರ್ಗಾ ನಿರ್ಮಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟ್ ನೋಡಿದ ಹಲವರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ವಕ್ಫ್‌ ಬೋರ್ಡ್‌ಗಳ ವಿರುದ್ಧ ಮತ್ತು ಅವುಗಳ ಸುಪರ್ದಿಯಲ್ಲಿರುವ ಆಸ್ತಿಗಳ ಬಗ್ಗೆಯೂ ಕೂಡ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹಾಗಿದ್ದರೆ ಈ ರೀತಿಯ ಆಪಾದನೆ ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನ ಬಳಸಿ, ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿತು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ತದನಂತರ ಈ ಕುರಿತು ಯಾವುದಾದರೂ ಮಾಧ್ಯಮ ಅಥವಾ ಪತ್ರಿಕಾ ವರದಿ ಆಗಿದೆಯೇ ಎಂದು ಪರಿಶೀಲನೆ ನಡೆಸಿದಾಗ, ಈ ಘಟನೆಗೆ ಸಂಬಂಧಪಟ್ಟಂತೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಯಾದಗಿರಿ ಜಿಲ್ಲಾ ಪೋರ್ಟಲ್‌ನಲ್ಲಿ, 2011ರ ಜನಗಣತಿಯ ಮಾಹಿತಿಯಲ್ಲಿ ಶಾಬಾದ್ ಹೆಸರಿನ ಯಾವುದಾದರೂ ಗ್ರಾಮವಿದೆಯೇ ಎಂದು ಪರಿಶೀಲನೆ ನಡೆಸಿದಾಗ ಆ ಹೆಸರಿನ ಯಾವ ಗ್ರಾಮವು ಕೂಡ ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್‌ ಅನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಟ ನಡೆಸಿದಾಗ “ದರ್ಗಾ ಬಾಬಾ ಆಶಿಕ್ ಶಾ ಮಶೂಕ್ ಶಾ ರಹಮತುಲ್ ಅಲೈಹ್ ಇಸಾನಿ ತೆಕ್ಡಿ” ಎಂಬ ಹೆಸರಿನ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ, ಇದೇ ರೀತಿಯ ಚಿತ್ರವು ಕಂಡುಬಂದಿದೆ.

ಈ ಫೇಸ್‌ಬುಕ್‌ ಪುಟದಲ್ಲಿ ನೀಡಿರುವ ವಿವರಣೆಯ ಪ್ರಕಾರ, ಇದು ಮಹಾರಾಷ್ಟ್ರದ ನಾಗಪುರದಲ್ಲಿರುವ ” ಬಾಬಾ ಆಶಿಕ್ ಶಾ ಮಶೂಕ್ ಶಾ ರಹಮತುಲ್ ಅಲೈಹ್”  ಅವರ ದರ್ಗಾದ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಈ ಪೋಸ್ಟ್ ನಲ್ಲಿ ದರ್ಗಾದ ನವೀಕರಣದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇನ್ನು ಈ ಕುರಿತು ಫ್ಯಾಕ್ಟ್‌ಲೀ ಆಂಗ್ಲ ವೆಬ್‌ತಾಣವು, ದರ್ಗಾದ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು, ಇದು ನಾಗಪುರವ ದರ್ಗಾ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಹೇಳಿದಂತೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನ ಎಂಬ ರೈತನ ಜಮೀನನ್ನು ವಕ್ಫ್‌ ಬೋರ್ಡ್ ವಶಪಡಿಸಿಕೊಂಡಿರುವುದು ಸುಳ್ಳಾಗಿದೆ. ಮತ್ತು ಶಾಬಾದ್‌ ಗ್ರಾಮ ಯಾದಗಿರಿ ಜಿಲ್ಲೆಯಲ್ಲಿ ಇಲ್ಲ ಎಂಬುದು ಖಚಿತವಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಎಚ್ಚರವಹಿಸಿ


ಇದನ್ನೂ ಓದಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ಈ ವಿಡಿಯೋ ನೋಡಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *