Fact Check: ತೆಲಂಗಾಣದಲ್ಲಿ ಕನಕದಾಸರ ಪುತ್ಥಳಿ ಸ್ಥಾಪನೆಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪಕ್ಕೆ ದಾಖಲೆಗಳಿಲ್ಲ

ಕನಕದಾಸ

ಮುಸ್ಲಿಂ ಸಮುದಾಯದ ವಿರುದ್ಧ ಹಿಂದುಗಳಲ್ಲಿ ದ್ವೇಷ ಹುಟ್ಟಿಸುವ ಸಲುವಾಗಿ ಕೇಂದ್ರ ಆಢಳಿತಾರೂಢ ಬಿಜೆಪಿ ಸರ್ಕಾರ ನಾನಾ ವಿಧವಾಗಿ ಪ್ರಯತ್ನಿಸುತ್ತಿದೆ. ಈಗ ಪ್ರತಿ ಜಾತಿಗಳನ್ನು ಕೇಂದ್ರವಾಗಿಟ್ಟುಕೊಂಡು ಮುಸ್ಲಿಂ ಸಮುದಾಯದ ಜೊತೆಗೆ ಸಾಮರಸ್ಯದಿಂದಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ನಡುವೆಯೂ ಈ ದ್ವೇಷವನ್ನು ಬಿತ್ತಲು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಇತ್ತೀಚೆಗಷ್ಟೇ ವಿಜಯಪುರದಲ್ಲಿ ಮಸೀದಿ ಬಳಿ ದಲಿತರ ಸಮುದಾಯ ಭವನ ನಿರ್ಮಾಣಕ್ಕೆ ಮುಸ್ಲಿಮರು ಅಡ್ಡಿ ಪಡಿಸುತ್ತಿದ್ದಾರೆ ಎಂಬ ಸುದ್ದಿಯೊಂದು ವರದಿಯಾಗಿತ್ತು.

ಈಗ ಅದೇ ರೀತಿ, “ಕನಕದಾಸರ ಪುತ್ಥಳಿ ಸ್ಥಾಪನೆಗೆ ಮುಸ್ಲಿಮರ ವಿರೋಧ” ಎಂಬ ವರದಿಯನ್ನು ಒಳಗೊಂಡ ಪೊಸ್ಟರ್ ಒಂದನ್ನು ಸಾಕಷ್ಟು ಜನ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು. “ತೆಲಂಗಾಣ ರಾಜ್ಯದ ಗಟ್ಟು ಮಂಡಲದಲ್ಲಿ ಹಿಂದುಗಳು ಸಂತ ಕನಕ ಹರಿದಾಸ ಇವರ ಮೂರ್ತಿ ಸ್ಥಾಪಿಸಿದ್ದರು; ಆದರೆ ಮತಾಂಧ ಮುಸಲ್ಮಾನರು ಅದನ್ನು ತೆರವುಗೊಳಿಸಿದ್ದಾರೆ”. ಎಂದು ಆರೋಪಿಸಿ ವರದಿಯನ್ನು ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ಪೋಸ್ಟರ್‌ ಮತ್ತು ವರದಿಯನ್ನು ಹಂಚಿಕೊಂಡಿದ್ದು ಅದನ್ನು ಇಲ್ಲಿ, ಮತ್ತು ಇಲ್ಲಿ ನೋಡಬಹುದು.

ಹಾಗಾದರೆ ನಿಜವಾಗಿಯೂ ಮುಸ್ಲಿಮರು ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಅಡ್ಡಿ ಪಡಿಸಿದ್ದಾರೆಯೇ? ಈ ಘಟನೆ ಎಲ್ಲಿ ನಡೆದಿದೆ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಕನ್ನಡದ ಯಾವ ಪತ್ರಿಕೆಗಳು ಇಂತಹ ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ. ವೈರಲ್ ಲೇಖನವನ್ನು ಗೂಗಲ್ ರಿವರ್ಸ್‌ ಇಮೇಜ್ ನಲ್ಲಿ ಹುಡುಕಿದಾಗ ಮತ್ತು ಲೇಖನದ ಶೀರ್ಷಿಕೆಯನ್ನು ಬಳಸಿ ಕೀವರ್ಡ್‌ಗಳ ಮೂಲಕ ಹುಡುಕಿದರು ಸಹ ಲೇಖನವು ಲಭ್ಯವಾಗಿಲ್ಲ. ಆದ್ದರಿಂದ ಈ ಲೇಖನ ನಕಲಿ ಎಂದು ತಿಳಿದು ಬಂದಿದೆ.

ಇನ್ನೂ ಇಂಗ್ಲಿಷ್‌ನಲ್ಲಿ ಕೀವರ್ಡ್‌ ಮೂಲಕ ಹುಡುಕಾಟ ನಡೆಸಿದಾಗ ಈ ವರದಿಯೂ ಅನೇಕ ಬಲಪಂಥೀಯ ಮಾಧ್ಯಮಗಳು ಮೇ 23, 2024 ರಂದು ಪ್ರಕಟಿಸಿರುವುದು ಕಂಡು ಬಂದಿದೆ. ಆಪ್ ಇಂಡಿಯಾ, ಸನಾತನ ಪ್ರಭಾತ, ಅರ್ಗನೈಸರ್, ಹಿಂದು ಪೋಸ್ಟ್‌, ಮತ್ತು ಹಿಂದು ದ್ವೇಷ ಎಂಬ ಮಾಧ್ಯಮಗಳು ಮಾತ್ರ ಈ ಲೇಖನವನ್ನು ಪ್ರಕಟಿಸಿದ್ದು ಬೇರೆ ಯಾವ ಮಾಧ್ಯಮಗಳು ಸಹ ಈ ವರದಿಯನ್ನು ಸುದ್ದಿ ಮಾಡಿಲ್ಲ. ಈ ಮಾಧ್ಯಮಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೃಪಾಪೋಷಿತ ಮಾಧ್ಯಮಗಳಾಗಿದ್ದು ನಿರಂತರ ಇತರ ಕೋಮುಗಳ ಮೇಲೆ ದ್ವೇಷ ಬಿತ್ತುವಂತಹ ಸುದ್ದಿಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸುತ್ತಿರುತ್ತವೆ.

ಈ ಲೇಖನವನ್ನು ಕೇವಲ ಒಂದು ಪೋಟೋ ಆಧಾರವಾಗಿಟ್ಟುಕೊಂಡು ಈ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಆಗಲಿ, ಇತರ ಪೋಟೋಗಳಾಗಲಿ ನೀಡಿಲ್ಲ. ಆರ್ಗನೈಸರ್‌ ಪ್ರಕಟಿಸಿರುವ ಲೇಖನವನ್ನು ಆಧಾರವಾಗಿಟ್ಟುಕೊಂಡು ಈ ಆರೋಪವನ್ನು ಮಾಡಲಾಗುತ್ತಿದೆ.

ಈ ಮಾಧ್ಯಮಗಳು ಆಗಾಗ್ಗೆ ಇಂತಹ ಸುಳ್ಳು ವರದಿಗಳನ್ನು ಪ್ರಕಟಿಸುವುದರಿಂದ ಇವುಗಳು ಪ್ರಕಟಿಸುವ ಲೇಖನಗಳು ನಂಬಿಕೆಗೆ ಅರ್ಹವಲ್ಲವಾಗಿವೆ. ಇಂತಹ ಘಟನೆ ನಡೆದಿದ್ದರೆ ಒಂದಾದರೂ ಇಂಗ್ಲಿಷ್ ಅಥವಾ ಕನ್ನಡದ ಸುದ್ದಿ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಇಂತಹ ಯಾವ ವರದಿಯನ್ನು ಪ್ರಕಟಿಸದೇ ಇರುವುದು ಈ ಘಟನೆ ನಡೆದಿಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ.

ಯೂಟೂಬ್ ನಲ್ಲಿ ಈ ಕುರಿತು ಹುಡುಕಿದಾಗ ವೈರಲ್ ಚಿತ್ರವನ್ನು ಹೊಂದಿರುವ ಸಣ್ಣ ವಿಡಿಯೋ ತುಣುಕೊಂದು ಲಭ್ಯವಾಗಿದ್ದು ಇದನ್ನು ರೈತಮಿತ್ರುಡು ಸೇನಾ ಎಂಬ ಯೂಟೂಬ್ ಖಾತೆಯಿಂದ ಹಂಚಿಕೊಂಡಿದ್ದು “ಅಯ್ಯ ಅವರು ಬಿಡುತ್ತೇವೆ ಎಂದು ಬಿಡುವುದಿಲ್ಲ(అయ్య వదలడి అని చెప్తారు కానీ వదలరు) ಎಂದು ತೆಲುಗಿನಲ್ಲಿ ಶೀರ್ಷಿಕೆಯನ್ನು ನೀಡಿದ್ದಾರೆ.

ಆದ್ದರಿಂದ ತೆಲಂಗಾಣದಲ್ಲಿ ಕನಕದಾಸರ ಪುತ್ಥಳಿ ಸ್ಥಾಪನೆಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪಕ್ಕೆ ಸರಿಯಾದ ದಾಖಲೆಗಳಿಲ್ಲ.


ಇದನ್ನು ಓದಿ: ತಮಿಳುನಾಡಿನಲ್ಲಿ “ಗೋ ಬ್ಯಾಕ್ ಮೋದಿ” ಎಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಕೋಲ್ಕತ್ತಾದ ಹಳೆಯ ಪೋಟೋ ವೈರಲ್ ಆಗಿದೆ


ವಿಡಿಯೋ ನೋಡಿ: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *