ಇತ್ತೀಚೆಗೆ ಆಧಾರ್ ಕಾರ್ಡ್ ಹತ್ತು ವರ್ಷ ಹಳೆಯದಾಗಿದ್ದರೆ ಅದನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿಸಬೇಕಾಗುತ್ತದೆ, ಇಲ್ಲದಿದ್ದರೆ ಆಧಾರ್ ಕಾರ್ಡ್ ಅಮಾನ್ಯಗೊಳ್ಳುತ್ತದೆ ಎಂದು ಅನೇಕ ಯೂಟೂರ್ಬರ್‌ಗಳು ಪ್ರತಿಪಾದಿಸಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹತ್ತು ವರ್ಷ ಕಳೆದರೂ ಅಪ್‌ಡೇಟ್ ಮಾಡಿಸದ ಸಾಮಾನ್ಯ ಜನರು ತಮ್ಮ ಆಧಾರ್ ಕಾರ್ಡ್ ಅಮಾನ್ಯಗೊಳ್ಳಲಿದೆ ಎಂಬ ಗೊಂದಲಕ್ಕೀಡಾಗುತ್ತಿದ್ದಾರೆ. ಈ ಪ್ರತಿಪಾದನೆ ನಿಜವೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್: 9 ನವೆಂಬರ್ 2022 ರಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊರಡಿಸಿದ ಅಧಿಸೂಚನೆಯ ಪ್ರಕಾರ, ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿವರಗಳನ್ನು ಆಧಾರ್‌ಗಾಗಿ ದಾಖಲಾದ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆಯಾದರೂ ನವೀಕರಿಸಲು ವಿನಂತಿಸಲಾಗಿದೆ. ಈ ಮಾಹಿತಿಯನ್ನು UIDAI ನ ಅಧಿಕೃತ ಖಾತೆಯಲ್ಲಿ X ನಲ್ಲಿ ಹಂಚಿಕೊಳ್ಳಲಾಗಿದೆ.
ಆಧಾರ್ ಕಾರ್ಡ್ ದಾಖಲೆಗಳನ್ನು ನವೀಕರಿಸುವುದು ಆಧಾರ್ ಸಂಬಂಧಿತ ವಂಚನೆಯನ್ನು ತಡೆಯಲು ಮತ್ತು ನಿಖರವಾದ ಜನಸಂಖ್ಯಾ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಆದರೆ ಹತ್ತು ವರ್ಷಕ್ಕೆ ಒಮ್ಮೆ ನವೀಕರಿಸುವುದು ಕಡ್ಡಾಯವೇನಲ್ಲ. ಡಿಸೆಂಬರ್ 14, 2022 ರ ಮನಿಲೈಫ್ ಇದೇ ರೀತಿಯ ಲೇಖನವನ್ನು ಪ್ರಕಟಿಸಿದ್ದು “ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಅನ್ನು ನವೀಕರಿಸುವುದನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿಲ್ಲ” ಎಂದು ಹೇಳುತ್ತದೆ.
ಆದಾಗ್ಯೂ, ಕೆಲವು ಸುದ್ದಿ ವರದಿಗಳು ಆಧಾರ್ ನವೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಪ್ಪಾಗಿ ಹೇಳಿಕೆ ನೀಡಿದ ನಂತರ, UIDAI ಈ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಿರ್ಲಕ್ಷಿಸುವಂತೆ ಜನರಿಗೆ ಸಲಹೆ ನೀಡಿದೆ. ಹೇಳಿಕೆಯಲ್ಲಿ, ಯುಐಡಿಎಐ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಅನ್ನು ನವೀಕರಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. 10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದ ನಿವಾಸಿಗಳು ಮತ್ತು ಈ ವರ್ಷಗಳಲ್ಲಿ ಎಂದಿಗೂ ನವೀಕರಿಸದ ನಿವಾಸಿಗಳು, ಅಂತಹ ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ದಾಖಲೆಗಳನ್ನು ನವೀಕರಿಸಲು ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆಧಾರ್‌ನಲ್ಲಿನ ಮಾಹಿತಿಯನ್ನು ಅಪ್‌ಡೇಟ್ ಮಾಡುವುದರಿಂದ ಜೀವನ ಸುಲಭ, ಉತ್ತಮ ಸೇವೆ ವಿತರಣೆ ಮತ್ತು ಹೆಚ್ಚು ನಿಖರವಾದ ದೃಢೀಕರಣಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಯುಐಡಿಎಐನ ವಿವರಣೆಯನ್ನು ಆ ಸಮಯದಲ್ಲಿ ಸುದ್ದಿ ಸಂಸ್ಥೆಗಳು (ಇಲ್ಲಿ ಮತ್ತು ಇಲ್ಲಿ) ವರದಿ ಮಾಡಿದ್ದವು. ಆಧಾರ್ ಅಪ್‌ಡೇಟ್‌ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು UIDAI ವೆಬ್‌ಸೈಟ್‌ನಲ್ಲಿ ಕಾಣಬಹುದು. ಮೇಲಿನ ಮಾಹಿತಿಯ ಆಧಾರದ ಮೇಲೆ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಲ್ಲ ಎಂದು ಸ್ಪಷ್ಟವಾಗುತ್ತದೆ.
ಇದನ್ನು ಓದಿ: ಜೂನ್ 14, 2024ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಹೋದರೆ ಅಮಾನ್ಯವಾಗುತ್ತದೆ ಎಂಬುದು ಸುಳ್ಳು
ವಿಡಿಯೋ ನೋಡಿ: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ