Fact Check | ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಅದರಲ್ಲಿ “ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು  ಇಲ್ಲ.. ಈ ಬಾರಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರ ಬಾಯಿಂದಲೇ ಸತ್ಯ ಹೊರಬಂದಿದೆ. ಈ ವಿಡಿಯೋವನ್ನು ಎಲ್ಲಾರಿಗೂ ಶೇರ್‌ ಮಾಡಿ.” ಎಂದು ಡಿ.ಕೆ ಶಿವಕುಮಾರ್‌ ಅವರ ಹೇಳಿಕೆ ನೀಡಿರುವ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ.

ಈ ವಿಡಿಯೋದಲ್ಲಿ ಸ್ವತಃ ಡಿ.ಕೆ ಶಿವಕುಮಾರ್‌ ಅವರೇ  ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಆದರೆ ಇಲ್ಲಿ ಡಿಕೆ ಶಿವಕುಮಾರ್‌ ಅವರು ಯಾವ ಪ್ರಶ್ನೆಗೆ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಮತ್ತು ವೈರಲ್‌ ವಿಡಿಯೋ ಕೂಡ ಪೂರ್ತಿ ಹೇಳಿಕೆಯಿಂದ ಕೂಡಿಲ್ಲ. ಹಾಗಾಗಿ ಈ ವಿಡಿಯೋ ಹಲವು ಅನುಮಾನಗಳನ್ನು ಕೂಡ ಹುಟ್ಟುಹಾಕಿದೆ. ಹಾಗಾಗಿ ಈ ವಿಡಿಯೋದಲ್ಲಿನ ಅಂಶ ಎಷ್ಟು ನಿಜ ಎಂಬುದನ್ನು ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ, ಇದೇ ಜೂನ್‌ 3 ರಂದು ANI ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದ ಡಿ.ಕೆ ಶಿವಕುಮಾರ್‌ ಅವರ ಪ್ರತಿಕ್ರೆಯೆಯನ್ನು ಪಡೆದಿದ್ದ ವಿಡಿಯೋವೊಂದು ಪತ್ತೆಯಾಯಿತು. ಈ ವಿಡಿಯೋ ವೈರಲ್‌ ವಿಡಿಯೋಗಿಂತ ಭಿನ್ನವಾಗಿರುವುದು ANI ಎಕ್ಸ್‌ ಪೋಸ್ಟ್‌ನಿಂದ ಖಚಿತವಾಯಿತು.

ANI ಹಂಚಿಕೊಂಡಿರುವ ವಿಡಿಯೋದ ಶೀರ್ಷಿಕೆಯಲ್ಲಿಯೇ  “Karnataka Dy CM DK Shivakumar says, …INDIA (alliance) will form the govt” ಇಂಡಿಯಾ ಒಕ್ಕೂಟ ಸರ್ಕಾರವನ್ನು ರಚಿಸುತ್ತದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿಕೆಯನ್ನು ನೀಡಿದ್ದಾರೆ ಎಂದು ಬರೆಯಲಾಗಿತ್ತು.

ಇನ್ನು ವಿಡಿಯೋವನ್ನು ಗಮನಿಸಿದಾಗ ಅದರಲ್ಲಿ ಮಾಧ್ಯಮ ಪ್ರತಿನಿಧಿ “ಎಕ್ಸಿಟ್‌ ಪೋಲ್‌ ಬಗ್ಗೆ ನಿಮ್ಮ ಅಭಿಪ್ರಾಯ ಏನು?” ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ ಶಿವಕುಮಾರ್‌, ” ನನಗೆ ಅದರ ಮೇಲೆ ನಂಬಿಕೆ ಇಲ್ಲ. ಇಂಡಿಯಾ ಒಕ್ಕೂಟ ಸರ್ಕಾರವನ್ನು ರಚಿಸುತ್ತದೆ” ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದರಲ್ಲಿ ಸಾಕಷ್ಟು ಮಂದಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಯನ್ನು ತೆಗೆದು ಹಾಕಿ ಡಿ.ಕೆ ಶಿವಕುಮಾರ್‌ ಅವರು ನೀಡಿದ ಉತ್ತರವನ್ನೇ ತಿರುಚಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಡಿ.ಕೆ ಶಿವಕುಮಾರ್‌ ಇಂಡಿಯಾ ಒಕ್ಕೂಟ ಸರ್ಕಾರ ರಚಿಸುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಗಿದೆ. ಮತ್ತು ವೈರಲ್‌ ವಿಡಿಯೋ ಎಡಿಟೆಡ್‌ ಆಗಿದೆ.


ಇದನ್ನೂ ಓದಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ಈ ವಿಡಿಯೋ ನೋಡಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *