ಲೋಕಸಭಾ ಚುನಾವಣೆಗೂ ಮುನ್ನ ಈ ಬಾರಿ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ.ಕೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದರು. ಈಗ ಸುಧಾಕರ್ ಗೆಲುವಿನ ಬೆನ್ನಲ್ಲಿಯೇ ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಪತ್ರದಲ್ಲಿ “ಬಾಲ್ಯದಿಂದಲೂ ಪುಣ್ಯಕೋಟಿ ಕಥೆಯನ್ನು ಆದರ್ಶವಾಗಿಸಿಕೊಂಡು ‘ಕೊಟ್ಟ ಮಾತು-ಇಟ್ಟ ಹೆಜ್ಜೆ ತಪ್ಪಬಾರದು’ ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತಾ ಬಂದವನು ನಾನು. ನಾನು ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ. ಕೆ. ಸುಧಾಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿರುತ್ತೇನೆ.
ಸುಧಾಕರ್ ಅವರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಆಡಿದ ಮಾತಿಗೆ ಬದ್ಧನಾಗಿ ಸ್ವಿಇಚ್ಛೇಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ.” ಎಂದು ತಮ್ಮ ಪತ್ರದಲ್ಲಿ ಬರೆದು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ಅಧಿಕೃತವಾಗಿ ಶಾಸಕ ಪ್ರದೀಪ್ ಈಶ್ವರ್ ತಮ್ಮ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಯಾವ ಮಾಧ್ಯಮಗಳು ವರದಿ ಮಾಡಿಲ್ಲ.
ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಶಾಸಕ ಪ್ರದೀಪ್ ಈಶ್ವರ್, “ಇದೆಲ್ಲ ಯಾರೋ ಕಿಡಿಗೇಡಿಗಳು ಮಾಡಿರುವ ಫೇಕ್ ಲೆಟರ್. ಆ ರೀತಿ ಯಾವುದೇ ರಾಜೀನಾಮೆ ಪತ್ರವನ್ನು ನಾನು ನೀಡಿಲ್ಲ” ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಕನ್ನಡ ಪ್ಲಾನೆಟ್ ವರದಿ ಮಾಡಿದೆ.
ಈ ಕುರಿತು ವರದಿ ಮಾಡಿರುವ ಪ್ರಜಾವಾಣಿ,”ಇದು ನಕಲಿ ರಾಜೀನಾಮೆ ಪತ್ರ” ಎಂದು ಶಾಸಕ ಆಪ್ತ ಸಹಾಯಕರು ‘ಎಂಎಲ್‌ಇ ಮಿಡಿಯಾ ಗ್ರೂಪ್’ ನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಆದ್ದರಿಂದ ಪ್ರದೀಪ್ ಈಶ್ವರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹರಿದಾಡುತ್ತಿರುವ ರಾಜೀನಾಮೆ ಪತ್ರ ನಕಲಿಯಾಗಿದೆ.
ಇದನ್ನು ಓದಿ: Paracetamol p-500 ಮಾತ್ರೆಯಲ್ಲಿ Machupo ವೈರಸ್ ಇದೆ ಎಂಬುದು ಸುಳ್ಳು
ವಿಡಿಯೋ ನೋಡಿ: ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಸುಳ್ಳು ಮತ್ತೊಮ್ಮೆ ವೈರಲ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ