“ನೀವು ರೇಷನ್ ಅಕ್ಕಿ ತೆಗೆದುಕೊಳ್ಳುತ್ತಿದ್ದೀರಾ, ಹಾಗಿದ್ದರೆ ಎಚ್ಚರದಿಂದಿರಿ. ಸರ್ಕಾರ ಕೊಡುತ್ತಿರುವ 10 ಕೆ.ಜಿ ಅಕ್ಕಿಯಲ್ಲಿ ಏನಿಲ್ಲ ಅಂದ್ರೂ ಮುಕ್ಕಾಲು ಕೆ.ಜಿ ಪ್ಲಾಸ್ಟಿಕ್ ಅಕ್ಕಿ ಇದೆ. ಈ ತಿಂಗಳು ಹಾಗೆಯೇ ಬಂದಿದೆ. ಈ ಕುರಿತು ಬಹಳ ಮಂದಿ ದೂರುತ್ತಿದ್ದಾರೆ. ಈ ಅಕ್ಕಿಯನ್ನ ಸುಟ್ಟರೆ ಪ್ಲಾಸ್ಟಿಕ್ ಅನ್ನು ಸುಟ್ಟ ರೀತಿಯಲ್ಲಿ ಆಗುತ್ತಿದೆ. ಇದರಿಂದ ಯಾವುದೋ ಲಿಕ್ವಿಡ್ ಬರುತ್ತಿದೆ” ಎಂದು ಟಿವಿ ವಿಕ್ರಮದ ನಿರೂಪಕಿ ಶ್ವೇತ ತಮ್ಮ ಕಾರ್ಯಕ್ರಮ ಮಿರ್ಚಿ ಮಂಡಕ್ಕಿಯಲ್ಲಿ ಹೇಳಿದ್ದಾರೆ.
ಇನ್ನು ಇದೇ ವರದಿಯನ್ನು ಎರಡು ದಿನಗಳ ಹಿಂದೆ ವಿಸ್ತಾರ ನ್ಯೂಸ್ ಮಾಡಿದ್ದು, ಅದರಲ್ಲಿ ಕೆಲವು ಮಹಿಳೆಯರು ನಮಗೆ ಪ್ಲಾಸ್ಟಿಕ್ ಅಕ್ಕಿಯನ್ನು ನೀಡಲಾಗುತ್ತಿದೆ ಎಂದು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಇದೇ ವಿಡಿಯೋದ ಆಧಾರದ ಮೇಲೆ ಟಿವಿ ವಿಕ್ರಮದ ನಿರೂಪಕಿ ಶ್ವೇತ ಈ ಸರ್ಕಾರ ಕೊಡುತ್ತಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸಲಾಗುತ್ತಿದೆ ಎಂದು ಆಧಾರ ರಹಿತ ಮಾಹಿತಿಯನ್ನು ನೀಡಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ಪರಿಶೀಲನೆ ನಡೆಸಿದ್ದು, ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿತು ಈ ವೇಳೆ 2 ಜುಲೈ 2023ರಂದು ವಿಜಯ ಟೈಮ್ಸ್ ಯುಟ್ಯೂಬ್ ಚಾನಲ್‌ನಲ್ಲಿ ” Plastic Rice | ರೇಷನ್ ‘ ಪ್ಲಾಸ್ಟಿಕ್ ಅಕ್ಕಿ’ ಸತ್ಯ ಏನು? | Food Department karnataka” ಎಂಬ ಶೀರ್ಷಿಕೆಯಲ್ಲಿ ಪ್ರಸಾರಗೊಂಡ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಜನರಿಗೆ ನೀಡಿತ್ತಿರುವ ಅಕ್ಕಿಯಲ್ಲಿ ಕಂಡು ಬರುತ್ತಿರುವುದು ಪ್ಲಾಸ್ಟಿಕ್ ಅಕ್ಕಿಯಲ್ಲ ಬದಲಿಗೆ ಅದು ಸಾರವರ್ಧಿತ ಅಕ್ಕಿ ಎಂಬ ಮಾಹಿತಿ ಲಭ್ಯವಾಗಿದೆ.
ಇದರ ಆಧಾರದ ಮೇಲೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 22 ಜುಲೈ 2023ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ರೇಷನ್ ಅಕ್ಕಿಯಲ್ಲಿ ಸಿಗ್ತಿರೋದು ಪ್ಲಾಸ್ಟಿಕ್ ಅಕ್ಕಿ ಅಲ್ಲ; ಪೋಷಕಾಂಶ ಭರಿತ ಅಕ್ಕಿ ಹಾಕಿದ್ದೇವೆ- ಇಲ್ಲಿದೆ ಆಹಾರ ಇಲಾಖೆ ಸ್ಪಷ್ಟನೆ” ಎಂ ಶೀರ್ಷಿಕೆಲ್ಲಿ ಆಹಾರ ಇಲಾಖೆ ನೀಡಿರುವ ಸ್ಪಷ್ಟನೆಯ ಕುರಿತು ಮಾಹಿತಿ ಇದೆ. ಇದರಲ್ಲಿ ”ಸಾರವರ್ಧಿತ ಅಕ್ಕಿಯನ್ನು ಕೇಂದ್ರ ಸರಕಾರದ ಸೂಚನೆ ಮೇರೆಗೆ ವಿತರಿಸುತ್ತಿದ್ದೇವೆ.” ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಡಾ. ಎಂ.ಟಿ. ರೇಜು ನೀಡಿದ ಮಾಹಿತಿಯನ್ನು ಕೂಡ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಒಂದು ವರ್ಷದಿಂದಲೂ ರೇಷನ್ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಸಿಗುತ್ತಿದೆ ಎಂಬುದು ಸುಳ್ಳು ಮತ್ತು ಹಾಗೆ ಸಿಗುತ್ತಿರುವ ಕಾಳುಗಳು ಸಾರವರ್ಧಿತ ಅಕ್ಕಿಗಳಾಗಿವೆ. ಇವುಗಳನ್ನು ಜನರ ಆರೋಗ್ಯಕ್ಕೆ ಉತ್ತಮ ಪೌಷ್ಠಕಾಂಶ ಸಿಗಲಿ ಎಂದು ಕೇಂದ್ರದ ಸೂಚನೆಯ ಮೇರೆಗೆ ಬೆರಸಲಾಗುತ್ತಿದೆ. ಹಾಗಾಗಿ ಟಿವಿ ವಿಕ್ರಮ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಸಾಮಾನ್ಯರಲ್ಲಿ ನಕಾರಾತ್ಮಕ ಭಾವನೆ ಬರಲಿ ಎಂಬ ಉದ್ದೇಶದಿಂದ ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.
ಈ ಸುದ್ದಿಯನ್ನು ಓದಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ
ಈ ವಿಡಿಯೋ ನೋಡಿ : ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.