ತುರ್ತು ಎಚ್ಚರಿಕೆ! Paracetamol p-500 ಎಂದು ಬರೆದಿರುವ ಪ್ಯಾರಸಿಟಮಾಲ್ ಅನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಿ. ಇದು ಹೊಸ, ತುಂಬಾ ಬಿಳಿ ಮತ್ತು ಹೊಳೆಯುವ ಪ್ಯಾರಸಿಟಮಾಲ್ ಆಗಿದೆ, ಇದು “ಮಚುಪೋ” ವೈರಸ್ ಅನ್ನು ಹೊಂದಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಹೆಚ್ಚಿನ ಮರಣ ಪ್ರಮಾಣದೊಂದಿಗೆ ದರ ಹೊಂದಿರುವ ವಿಶ್ವದ ಅತ್ಯಂತ ಅಪಾಯಕಾರಿ ವೈರಸ್‌ಗಳಲ್ಲಿ ಒಂದಾಗಿದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಎಲ್ಲಾ ಜನರೊಂದಿಗೆ ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ, ಮತ್ತು ಒಂದು ಜೀವ ಅಥವಾ ಜೀವವನ್ನು ಉಳಿಸಿ …. ಎಂಬ ಸಂದೇಶವೊಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
Paracetamol p-500 ಮಾತ್ರೆಯಲ್ಲಿ Machupo ವೈರಸ್ ಎಂಬ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ, ಇಂತಹ ವೈರಲ್ ಸಂದೇಶ ಸುಳ್ಳು ಎಂದು “ದಿ ಹಿಂದೂ” ಇಂಗ್ಲಿಷ್ ಪತ್ರಿಕೆ ವರದಿ ಮಾಡಿದೆ. ತಜ್ಞರನ್ನು ಸಂಪರ್ಕಿಸಿದಾಗ ಭಾರತದಲ್ಲಿ ಮಚುಪೊ ವೈರಸ್‌ಗಳ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಬ್ಬರು ಹಿರಿಯ ವೈದ್ಯರುಗಳಾದ ಡಾ ಚಟರ್ಜಿ ಮತ್ತು ಡಾ ತ್ಯಾಗಿ Paracetamol p-500 ಮಾತ್ರೆಯಲ್ಲಿ Machupo ವೈರಸ್ ಇಲ್ಲ ಎಂದು ದೃಢಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಕೂಡ ವರದಿ ಮಾಡಿದೆ.
ಈ ರೀತಿಯ ಸುಳ್ಳು ಸುದ್ದಿ ಭಾರತ ಮಾತ್ರವಲ್ಲದೇ ಬೇರೆ ದೇಶಗಳಲ್ಲಿಯೂ 2017 ರಿಂದಲೂ ಹರಡುತ್ತಿದೆ ಎಂದು ಕಂಡುಬಂದಿದೆ. ಸಿಂಗಾಪುರದ ಆರೋಗ್ಯ ವಿಜ್ಞಾನ ಪ್ರಾಧಿಕಾರ (ಎಚ್‌ಎಸ್‌ಎ) 3 ವರ್ಷಗಳ ಹಿಂದೆ ಅಲ್ಲಿ ಇದು ಹುಸಿ ಎಚ್ಚರಿಕೆ ಎಂದು ತಿಳಿಸಿತ್ತು.
ಪ್ಯಾರೆಸಿಟಮಾಲ್ ಮಾತ್ರೆಗಳಲ್ಲಿ ಮಚುಪೋ ವೈರಸ್ ಇರುವ ಬಗ್ಗೆ ಅದೇ ಸುದ್ದಿ ಮಲೇಷ್ಯಾದಲ್ಲಿ ಹರಡಿದಾಗ, ಆ ದೇಶದ ಆರೋಗ್ಯ ಸಚಿವಾಲಯವು ಅದು ಸುಳ್ಳು ಎಂದು ದೃಢಪಡಿಸಿದೆ.
ಈ ಎಲ್ಲಾ ಪುರಾವೆಗಳಿಂದ Paracetamol p-500 ಮಾತ್ರೆಯಲ್ಲಿ Machupo ವೈರಸ್ ಇದೆ ಎಂಬುದು ಸುಳ್ಳು ಎಂದು ದೃಢಪಟ್ಟಿದೆ.
ಇದನ್ನೂ ಓದಿ: Fact Check: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಸಾದುದ್ದೀನ್ ಓವೈಸಿ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ