Fact Check | ಪ್ಯಾಲೆಸ್ತೀನಿಯರು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಭಾರತ, ಇಸ್ರೇಲ್ ಮತ್ತು ಅಮೆರಿಕದ ಧ್ವಜಗಳಿಗೆ ಪುರುಷರ ಗುಂಪೊಂದು ಅವಮಾನ ಮಾಡುತ್ತಿರುವು ಮತ್ತು ಆ ಧ್ವಜಗಳನ್ನು ಸುಡುವುದನ್ನು ತೋರಿಸುವ ಫೋಟೋವನ್ನು ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ಹಂಚಿಕೊಂಡ ಹಲವರು ಪ್ಯಾಲೆಸ್ತೀನಿಯರು ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುತ್ತಿದ್ದಾರೆ. ಆದರೆ ಕೆಲ ಭಾರತೀಯರು ಮಾತ್ರ ಇನ್ನೂ ಕೂಡ ಪ್ಯಾಲೆಸ್ತೀನಿಯರನ್ನು ಬೆಂಬಲಿಸುತ್ತಿದ್ದಾರೆ ಎಂದು ಈ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಕೆಲವರು ತಮ್ಮ ಎಕ್ಸ್‌ ಖಾತೆಯಲ್ಲಿ “ಭಾರತ ಯುದ್ಧ ಪೀಡಿತ ಯಾವುದೇ ದೇಶಗಳಿಗೆ ಬೆಂಬಲ ಕೊಡಬಾರದು. ಈಗ ಪ್ಯಾಲೆಸ್ತೀನಿಯರು ಭಾರತದ ಧ್ವಜವನ್ನು ಸುಟ್ಟ ಭಾರತಕ್ಕೆ ಅಪಮಾನ ಮಾಡಿದ್ದಾರೆ. ಇಂತಹ ದೇಶಕ್ಕೆ ಬೆಂಬಲ ಕೊಡುವುದರಲ್ಲಿ ಯಾವುದೇ ರೀತಿಯ ಅರ್ಥ ಇರುವುದಿಲ್ಲ. ಹಾಗಾಗಿ ಜನ ಸಾಮಾನ್ಯರು ಯಾವುದೇ ದೇಶಕ್ಕೆ ಬೆಂಬಲ ಕೊಡುವ ಮುನ್ನ ಒಮ್ಮೆ ಆಲೋಚಿಸುವುದು ಉತ್ತಮ.” ಎಂಬ ರೀತಿಯ ವಿವಿಧ ಬರಹಗಳೊಂದಿಗೆ ಹಲವು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್ ಫೋಟೋವನ್ನು ನಾವು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ 11 ಮೇ 2021 ರಂದು ‘ US NEWS’ ಎಂಬ ಸುದ್ದಿ  ವೆಬ್‌ಸೈಟ್‌ನಲ್ಲಿ ಪ್ರಕಟವಾದ ಇದೇ ರೀತಿಯ ಫೋಟೋವನ್ನು ಒಳಗೊಂಡ ವರದಿಯೊಂದು ಕಂಡು ಬಂದಿದೆ. ಆ ವರದಿಯ ಪ್ರಕಾರ, ಜೆರುಸಲೆಮ್‌ನಲ್ಲಿ ಪ್ಯಾಲೆಸ್ತೀನಿಯರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು ಮತ್ತು ಈ ಸಂದರ್ಭದಲ್ಲಿ ಭಾರತ, ಇಸ್ರೇಲ್‌, ಹಾಗೂ ಅಮೇರಿಕದ  ಧ್ವಜವನ್ನು ಅಲ್ಲಿನ ನಾಗರಿಕರು ದಹಿಸಿದ್ದಾರೆ ಎಂದು ಬರೆಯಲಾಗಿದೆ.

ವರದಿಗಳ ಪ್ರಕಾರ , 11 ಮೇ 2021 ರಂದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲ್ ಬಲಪ್ರಯೋಗವನ್ನು ಖಂಡಿಸಿದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನದ ವಿವಿಧ ರಾಜಕೀಯ ಮತ್ತು ಧಾರ್ಮಿಕ ಸಂಘಟನೆಗಳು ಪ್ಯಾಲೆಸ್ತೀನ್ ಅನ್ನು ಬೆಂಬಲಿಸಲು ಕರಾಚಿ ಪ್ರೆಸ್ ಕ್ಲಬ್ ಮುಂದೆ ಪ್ರದರ್ಶನವನ್ನು ನಡೆಸಿದವು. ಕರಾಚಿ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿಗಳು ಸ್ಥಾಪಿಸಿದ ಸಂಘಟನೆಯಾದ ಪ್ಯಾಲೆಸ್ಟೈನ್ ಫೌಂಡೇಶನ್ ಪಾಕಿಸ್ತಾನ್‌ ಎಂಬ ಸಂಘಟನೆ ಕೂಡ ಪ್ರತಿಭಟನೆಯಲ್ಲಿ ಸೇರಿಕೊಂಡಿತು.

ಈ ಮಾಹಿತಿಯ ಆಧಾರದ ಮೇಲೆ  ಕರಾಚಿ ಪ್ರೆಸ್ ಕ್ಲಬ್ ಮುಂಭಾಗದ ಕುರಿತ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವು ಕೀ ಬೋರ್ಡ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದೆವು ಮತ್ತು ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಸ್ಥಳಗಳನ್ನು ಕ್ರಾಸ್-ಚೆಕ್ ಮಾಡಿದೆವು. ಈ ಹುಡುಕಾಟದ ಸಮಯದಲ್ಲಿ, ಫೇಸ್‌ಬುಕ್‌ನಲ್ಲಿ ಸಮಾ ಇಂಗ್ಲಿಷ್ ಚಾನೆಲ್ ಪೋಸ್ಟ್ ಮಾಡಿದ ಪ್ರತಿಭಟನಾ ವೀಡಿಯೊವೊಂದು ಕಂಡು ಬಂದಿದೆ. ಈ ಸುದ್ದಿ ವಾಹಿನಿಯಲ್ಲಿನ ವಿಡಿಯೋಗೂ ವೈರಲ್‌ ಫೋಟೋಗೂ ಸಾಕಷ್ಟು ಹೋಲಿಕೆಯಾಗಿದ್ದರಿಂದ ಪ್ರತಿಭಟನೆ ಪಾಕಿಸ್ತಾನದಲ್ಲೇ ನಡೆದಿತ್ತು ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆಯ ದೃಶ್ಯಗಳನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಪ್ಯಾಲೆಸ್ತೀನಿಯರು ಭಾರತದ ಧ್ವಜವನ್ನು ಅವಮಾನಿಸಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ನೀಡಲಾಗಿದೆ.


ಇದನ್ನೂ ಓದಿ : ಇತ್ತೀಚೆಗೆ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ ಎಂದು ಹಳೆಯ ವೀಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *