“ಈ ವಿಡಿಯೋ ನೋಡಿ ಬಾಂಬ್ ತಯಾರಿಕೆಗೆ ಮಸೀದಿಯೊಂದರಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು. ಈ ವೇಳೆ ಅಲ್ಲಿ ಏನೋ ಲೋಪ ನಡೆದು ಆ ಮಸೀದಿ ಕುಸಿದು ಬಿದ್ದಿದೆ. ಇದು ಬಾಂಬ್ ತಯಾರಿಕೆಯ ತರಬೇತಿಯ ಪರಿಣಾಮ. ಇದೇ ರೀತಿ ದೇಶದ ಹಲವು ಮಸೀದಿಗಳಲ್ಲಿ ಬಾಂಬ್ ತಯಾರಿಕೆಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಶೇರ್ ಮಾಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋ ನೋಡಿದವರು ಇದು ನಿಜವಿರಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಮುಸ್ಲಿಂ ಸಮುದಾಯದ ಬಗ್ಗೆ ಟೀಕೆಯನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಈ ವಿಡಿಯೋದೊಂದಿಗೆ ಕೂಡ ಮುಸ್ಲಿಂ ಸಮುದಾಯದ ತೆಜೋವಧೆ ಮಾಡುವಂತೆ ಹಂಚಿಕೊಳ್ಳಲಾಗುತ್ತಿರುವುದರಿಂದ ಈ ವಿಡಿಯೋ ಜೊತೆ ಉಲ್ಲೇಖಿಸಲಾದ ಬರಹವನ್ನು ನಿಜವೆಂದು ನಂಬಿದ್ದಾರೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಈ ವಿಡಿಯೋದ ಕೆಲ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಬ್ರೂಟ್ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳ ವಿವಿಧ ವರದಿಗಳು ಕೂಡ ಕಂಡು ಬಂದಿವೆ.
ಈ ವರದಿಗಳ ಪ್ರಕಾರ , ಹಳೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ 70 ವರ್ಷ ಹಳೆಯ ಮಸೀದಿಯ ಒಂದು ಭಾಗವು ಅದರ ಗೋಡೆಗಳಲ್ಲಿ ಬಿರುಕುಗಳು ಕಂಡು ಬಂದಿತು. ಆ ಬಳಿಕ ಆಡಳಿತ ಮಂಡಳಿ ಆ ಬಿರುಕನ್ನು ಸರಿ ಪಡಿಸಿ ಅಭಿವೃದ್ಧಿಯನ್ನು ಪಡಿಸಿತ್ತು. ಆದರೆ ಆ ಕಟ್ಟಡದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡು 17 ಜೂನ್ 2024 ರಂದು ಕುಸಿದಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.. ಈ ಕುರಿತು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನ ವಕ್ತಾರರು ಕೂಡ ಪ್ರತಿಕ್ರಿಯೆ ನೀಡಿದ್ದು ಅವರ ಪ್ರಕಾರ ಮಸೀದಿ ಕಟ್ಟಡ ದುರ್ಬಲ ಅಡಿಪಾಯದಿಂದಾಗಿ ಮಸೀದಿ ಕುಸಿದಿದೆ ಎಂದಿದ್ದರು.
ಹೆಚ್ಚಿನ ಮಾಹಿತಿಗಾಗಿ ಹಲವಾರು ಮಾಧ್ಯಮಗಳ ವರದಿಯನ್ನು ಪರಿಶೀಲನೆ ನಡೆಸಿದಾಗ ಎಲ್ಲಾ ಮಾಧ್ಯಮಗಳು ಕೂಡ ದೆಹಲಿಯ ಮಸೀದಿಯ ಕುಸಿತಕ್ಕೆ ಕಟ್ಟಡದಲ್ಲಿ ಬಿರುಕು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ವರದಿಯ ಪ್ರಕಾರ ದುರ್ಬಲ ಅಡಿಪಾಯವೇ ಕಾರಣ ಎಂದಿವೆಯೇ ಹೊರತು ಯಾವ ವರದಿಯಲ್ಲೂ ಬಾಂಬ್ ತಯಾರಿಕೆಯ ತರಬೇತಿ ವೇಳೆ ಮಸೀದಿ ಕುಸಿದಿದೆ ಎಂದು ಉಲ್ಲೇಖಿಸಿಲ್ಲ.
ಇನ್ನು ಹೆಚ್ಚಿನ ಮಂದಿ ಈ ಮಸೀದಿಯನ್ನು ಕೋಮುವಾದಿ ಸಂಘಟನೆಯಾದ ಆರ್‌ಎಸ್‌ಎಸ್ ಕೆಡವಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್ ಈ ಮಸೀದಿಯನ್ನು ಕೆಡವಿದೆ ಎಂಬುದು ಕೂಡ ಸುಳ್ಳು ಎನ್ನುವುದನ್ನು ಈ ವರದಿ ಸಾಬೀತು ಪಡುಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದೆಹಲಿಯ ಮಸೀದಿ ಕುಸಿದಿರುವುದು ದುರ್ಬಲ ಅಡಿಪಾಯ ಮತ್ತು ಕಟ್ಟಡದ ದುರ್ಬಲತೆಯಿಂದ. ಹೀಗಾಗಿ ಬಾಂಬ್ ತಯಾರಿಕೆ ತರಬೇತಿಯಿಂದ ಮಸೀದಿ ಕುಸಿದಿದೆ ಎಂಬುದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹುಟ್ಟಿಸುವ ಅಜೆಂಡಾವಾಗಿದೆ ಎಂಬುದು ಈ ವರದಿಗಳಿಂದಲೇ ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಎಚ್ಚರ ವಹಿಸಿ.
ಇದನ್ನೂ ಓದಿ : ಮಹಿಳೆಯ ಮೇಲೆ ಮೊಸಳೆ ದಾಳಿ ನಡೆಸಿದೆ ಎಂಬುದು ಜಾಹಿರಾತು ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.