” ಈ ರಸ್ತೆಗಳನ್ನು ಒಮ್ಮೆ ನೋಡಿ ಇದು ಬಿಹಾರ ಅಥವಾ ಇನ್ಯಾವುದೋ ವಿಪಕ್ಷಗಳ ಆಡಳಿತ ರಾಜ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಮಾಡಲ್ ಎಂದು ಅಧಿಕಾರಕ್ಕೆ ಬಂದ ಅದೇ ಗುಜರಾತ್ ರಾಜ್ಯದ್ದು, ಇತ್ತೀಚೆಗೆ ಕಾಣಿಸಿಕೊಂಡ ಭೀಕರ ಮಳೆಯಿಂದ, ಗುಜರಾತ್‌ನ ಗುಂಡಿ ಬಿದ್ದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಅಲ್ಲಿನ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುತ್ತಿದ್ದರು. ಆದರೆ ಈ ಬಗ್ಗೆ ಅಲ್ಲಿನ ಸರ್ಕಾರವಾಗಲಿ, ಸ್ಥಳೀಯ ಆಡಳಿತವಾಗಲಿ ತಲೆ ಕೆಡಿಸಿಕೊಂಡಿಲ್ಲ.” ಎಂಬ ಸುದ್ದಿಯೊಂದು ಫೋಟೋವೊಂದರ ಜೊತೆಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇನ್ನು ಈ ಫೋಟೋವನ್ನು ಗಮನಿಸಿದಾಗ ಅದರಲ್ಲಿ ಮಹಿಳೆಯೊಬ್ಬರು ಗುಂಡಿಯಲ್ಲಿನ ನೀರನ್ನು ಪಾತ್ರೆಯೊಂದರಲ್ಲಿ ತೆಗೆಯುವುದು, ಮಕ್ಕಳು ಅದೇ ರಸ್ತೆ ಗುಂಡಿಯ ನೀರಿನಲ್ಲಿ ಆಟವಾಡುವುದನ್ನು ನೋಡಬಹುದಾಗಿದೆ. ಆದರೆ ಈ ಫೋಟೋಗಳು ನೋಡಲು ವಿಚಿತ್ರವಾಗಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಗಾಗಿ ವೈರಲ್ ಫೋಟೋವಿನ ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ಮುಂದಾಯಿತು. ಇದಕ್ಕಾಗಿ ವೈರಲ್ ಫೊಟೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಗುಜರಾತಿನಲ್ಲಿ ದೊಡ್ಡ ಹೊಂಡಗಳಿಂದ ಕೂಡಿದ ಇಂತಹ ಕಳಪೆ ಸ್ಥಿತಿಯಲ್ಲಿರುವ ಯಾವುದೇ ರಸ್ತೆ ಬಗೆಗಿನ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ಇಂತಹ ಕಳಪೆ ರಸ್ತೆಗಳು ಕಂಡು ಬಂದಿದ್ದರೆ ಆ ಕುರಿತು ಮುಖ್ಯವಾಹಿನಿಯ ಮಾಧ್ಯಮಗಳು ವರದಿಯನ್ನ ಮಾಡಬೇಕಿತ್ತು.
ಹಾಗಾಗಿ ಹೆಚ್ಚಿನ ಮಾಹಿತಿಯಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಫೋಟೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, AI- ರಚಿತವಾದ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ದೃಶ್ಯ ವೈಪರೀತ್ಯಗಳು ಈ ಚಿತ್ರದಲ್ಲಿಯೂ ಕಂಡು ಬಂದಿದೆ. ಫೋಟೋದಲ್ಲಿರುವ ಕೆಲವು ಜನರ ಮುಖಗಳು ವಿಕೃತ ಮತ್ತು ಅವಾಸ್ತವವಾಗಿ ಕಂಡು ಬಂದಿದೆ. ಇದರ ಜೊತೆಗೆ ಒಂದು ಮಗುವಿನ ಕಾಲುಗಳು ಡಾಂಬರು ರಸ್ತೆಯಲ್ಲಿ ಹೂತು ಹೋದಂತೆ ಕಾಣುತ್ತಿದೆ. ಇನ್ನು ಈ ಚಿತ್ರದಲ್ಲಿ ದಂಪತಿಗಳು ಕುಳಿತಿರುವ ಬೈಕ್‌ನ ಮುಂಭಾದ ಟೈರ್‌ಗೂ ಬೈಕ್‌ಗೂ ಸಂಬಂಧವೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಇದು ಬಹುತೇಕ AI ರಚಿತ ಚಿತ್ರ ಎಂಬುದು ಸ್ಪಷ್ಟವಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಹೈವ್ ಎಂದು ಕರೆಯಲ್ಪಡುವ AI-ಫೋಟೋ ಪತ್ತೆ ಮಾಡುವ ವೆಬ್‌ಸೈಟ್ ಮೂಲಕ, ನಾವು ಫೋಟೋವನ್ನು ಪರಿಶೀಲನೆ ಮಾಡಿದ್ದೇವೆ. ಈ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ವೈರಲ್ ಫೋಟೋವನ್ನು AI ಬಳಸಿ ರಚಿಸಲಾಗಿದೆ. ಹಾಗೂ AI ನಿಂದ ರಚಿಸಲಾಗಿರುವ ಸಾಧ್ಯತೆ ಶೇ.100 ರಷ್ಟಿದೆ ಎಂಬುದನ್ನು ಈ ಹೈವ್ ವೆಬ್‌ಸೈಟ್ ಸ್ಪಷ್ಟ ಪಡಿಸಿದೆ.
ಇನ್ನು ಹಗ್ಗಿಂಗ್ ಫೇಸ್‌ನ AI ಇಮೇಜ್ ಡಿಟೆಕ್ಟರ್ ಕೂಡ ಈ ವೈರಲ್ ಚಿತ್ರವನ್ನು 99% AI ನಿಂದ ನಿರ್ಮಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, AI ರಚಿತವಾದ ಚಿತ್ರವನ್ನು ಗುಜರಾತ್‌ನ ಗುಂಡಿಗಳಿಂದ ಕೂಡಿದ ರಸ್ತೆಯ ನೈಜ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ, ಹಾಗೂ ಸುಳ್ಳು ಸುದ್ದಿಗಳನ್ನು ಹರಡುವುದು ಅಪರಾಧ ಎಂಬುದು ನೆನಪಿರಲಿ
ಇದನ್ನೂ ಓದಿ : Fact Check | ಎಡಿಟ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ