2030ಕ್ಕೆ ಭಾರತ ಇಸ್ಲಾಂ ದೇಶವಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು: ಇಲ್ಲಿದೆ ಪೂರ್ಣ ವಿವರ

ಇಸ್ಲಾಂ

“2030ಕ್ಕೆ ಭಾರತ ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ..!” ಎಂಬ ಶೀರ್ಷಿಕೆಯುಳ್ಳ, ಶ್ರೀಪಮ ಎಂಬುವವರು ಬರೆದ ಪತ್ರಿಕಾ ವರದಿಯಂತೆ ಕಾಣುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಿಂದುಗಳೇ.. ದುಡ್ಡು ಮಾಡುತ್ತೀರಿ, ನಿದ್ದೆ ಮಾಡುತ್ತೀರಿ.. ಎಂಬ ವ್ಯಂಗ್ಯದಿಂದ ಶುರುವಾಗುವ ಬರಹದಲ್ಲಿ, “ದಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮೋಗ್ರಫಿಕ್ ರಿಸರ್ಚ್” ಎಂಬ ಅಮೇರಿಕಾದ ಒಂದು ಸಂಸ್ಥೆ, ಭಾರತದ ಭವಿಷ್ಯ ಏನಾಗಬಹುದು? ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದೆ. ಈ ಸಂಸ್ಥೆ ಭಾರತವು 2041ರಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗುತ್ತದೆ, ಎಂಬುದನ್ನು ಸಾರುತ್ತದೆ. ಈ ಸಂಸ್ಥೆ ಇದಕ್ಕೆ ನೀಡಿದ ಆಧಾರ ಜನಸಂಖ್ಯೆ. ಈ ಸಂಸ್ಥೆ ನೀಡಿದ ಆಧಾರ ಕನ್ನಡಿಯಷ್ಟು ಸ್ಪಷ್ಟವಾಗಿದ್ದು, ಮುಸ್ಲಿಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮೂಲಕವೇ ಸಂಪೂರ್ಣ ಭಾರತವನ್ನು ನುಂಗಿಹಾಕುತ್ತಾರೆಂಬುದನ್ನು ತಾರ್ಕಿಕವಾಗಿ ಮತ್ತು ವೈಜ್ಞಾನಿಕವಾಗಿ ತಿಳಿಸಿದೆ. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಏರುವ ಪ್ರಮಾಣದ ಆಧಾರದ ಮೇಲೆ ಈ ಸಂಸ್ಥೆ ಈ ಕೆಳಗಿನ ಅಂಕಿ ಅಂಶಗಳನ್ನು ನೀಡಿದೆ ಎಂದು ಚಾರ್ಟ್ ಒಂದನ್ನು ಹಾಕಿದೆ. ಅದರ ಫೋಟೊವನ್ನು ಕೆಳಗೆ ನೋಡಬಹುದು.

 

1948ರಲ್ಲಿ ಹಿಂದೂ ಜನಸಂಖ್ಯೆ 84.2% ಇದ್ದರೆ, ಮುಸ್ಲಿಂ ಜನಸಂಖ್ಯೆ 6% ಇತ್ತು. ಆದರೆ 2031ರ ವೇಳೆಗೆ ಹಿಂದೂ ಜನಸಂಖ್ಯೆ 60.4%ಗೆ ಕುಸಿದರೆ ಮುಸ್ಲಿಂ ಜನಸಂಖ್ಯೆ 38.1% ಗೆ ಏರುತ್ತದೆ. 2041 ರಲ್ಲಿ ಹಿಂದೂಗಳು ಕೇವಲ 11.2% ಆದರೆ ಮುಸ್ಲಿಮರು 84.5% ಆಗುತ್ತಾರೆ.
ಈ ಆಧಾರದ ಮೇಲೆ, ಭಾರತದಲ್ಲಿ 2050ರ ವೇಳೆಗೆ ಒಬ್ಬ ಹಿಂದುವೂ ಉಳಿಯುವುದಿಲ್ಲ ಎಂದು ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್‌ಚೆಕ್

ಫೋಟೊದಲ್ಲಿನ ಅಂಕಿ ಅಂಶಗಳು ತಪ್ಪಾಗಿವೆ. 2011 ರಲ್ಲಿ ದೇಶದಲ್ಲಿ ಶೇ.22.6% ಮುಸ್ಲಿಮರಿದ್ದಾರೆ ಎಂದು ಆ ವರದಿಯಲ್ಲಿ ಹೇಳಿದೆ. ಆದರೆ ಲಭ್ಯವಿರುವ ಭಾರತದ ಜನಗಣತಿಯ ಪ್ರಕಾರ 14.2% ಮುಸ್ಲಿಮರು ಭಾರತದಲ್ಲಿದ್ದಾರೆ ಎಂದು ಅಧಿಕೃತ  ಸರ್ಕಾರದ ವರದಿ ಹೇಳಿದೆ.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂಬುದು ನಿಜವೇ?

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುವ ಮೂಲಕ ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ಹಿಂದೂಗಳು ಸಹ 10 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಕೆಲವು ಸ್ವಾಮೀಜಿಗಳು, ರಾಜಕಾರಣಿಗಳೂ ಬಿಟ್ಟಿ ಉಪದೇಶ ಕೊಡುತ್ತಿರುತ್ತಾರೆ. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಸಮೀಕ್ಷೆಗಳು ಇದಕ್ಕೆ ವ್ಯತಿರಿಕ್ತವಾದ ಅಂಕಿ ಅಂಶಗಳನ್ನು ಹೊರಚೆಲ್ಲಿವೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ವರದಿಯಂತೆ ಹಿಂದೂ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ (ಮಹಿಳೆ ತಮ್ಮ ಜೀವಮಾನದಲ್ಲಿ ಹೆರುವ ಮಕ್ಕಳ ಸರಾಸರಿ ಸಂಖ್ಯೆ) ತೀವ್ರವಾಗಿ ಇಳಿಕೆಯಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಇತರ ಧರ್ಮಗಳ ಮಹಿಳೆಯರಿಗಿಂತ ಮುಸ್ಲಿಂ ಮಹಿಳೆಯರ ಫಲವತ್ತೆತ ದರ ತೀವ್ರವಾಗಿ ಕುಸಿದಿದೆ. 1992-93 ರಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆಯ ದರ 4.4 ಇದ್ದಿದ್ದು 2015-16ರಲ್ಲಿ ಅದು 2.6 ಗೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 2.3 ಗೆ ಇಳಿದಿದೆ.

ಅದೇ ರೀತಿ ಹಿಂದೂ ಮಹಿಳೆಯರ ಫಲವತ್ತೆತೆಯ ದರ 1992-93 ರಲ್ಲಿ 3.3 ಇದ್ದುದ್ದು 2015-16 ರಲ್ಲಿ ಅದು 2.1ಕ್ಕೆ ಕುಸಿದಿತ್ತು. 2019-2021ರಲ್ಲಿ ಮತ್ತಷ್ಟು ಕುಸಿದು 1.94 ಗೆ ಇಳಿದಿದೆ. ಹಿಂದೂಗಳಲ್ಲಿ ಅದು 41.2% ಇಳಿಕೆಯಾದರೆ, ಮುಸ್ಲಿಮರಲ್ಲಿ 46.5% ಇಳಿಕೆಯಾಗಿದೆ. ಕಳೆದ 20 ವರ್ಷಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕುಸಿತದ ಪ್ರಮಾಣವು ಹಿಂದೂಗಳಿಗಿಂತ ಹೆಚ್ಚಾಗಿದೆ. 2030ರ ವೇಳೆಗೆ ಹಿಂದೂ-ಮುಸ್ಲಿಂ ಫಲವತ್ತತೆ ದರಗಳು ಸಮಾನವಾಗಿರುತ್ತವೆ ಎಂಬುದನ್ನು ಸಮೀಕ್ಷೆಗಳು ಕಂಡುಕೊಂಡಿವೆ. ಅಂದರೆ ಈಗಿರುವ ಶೇಕಡಾವಾರು ಪ್ರಮಾಣದಲ್ಲಿಯೇ ಹಿಂದೂಗಳು ಮತ್ತು ಮುಸ್ಲಿಂ ಜನಸಂಖ್ಯೆ 2030ರ ನಂತರ ಇರುತ್ತದೆ. ಈ ಎಲ್ಲಾ ಅಂಶಗಳು ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕುತ್ತದೆ.

ಮುಸ್ಲಿಮರಲ್ಲಿ ಮಾತ್ರ ಬಹುಪತ್ನಿತ್ವ ಪದ್ದತಿ ಇದೆಯೇ?

2019-20ರ NFHS ಡೇಟಾದ ಪ್ರಕಾರ, ಬಹುಪತ್ನಿತ್ವವು ಎಲ್ಲಾ ಧರ್ಮಗಳಲ್ಲಿ ಅಸ್ತಿತ್ವದಲ್ಲಿದ್ದು, ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಮುಂಬೈನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್ ನಡೆಸಿದ ವಿಶ್ಲೇಷಣೆಯ ಪ್ರಕಾರ ಹಿಂದೂಗಳಲ್ಲಿ ಬಹುಪತ್ನಿತ್ವ ದರ 1.3% ನಷ್ಟಿದ್ದರೆ, ಮುಸ್ಲಿಮರಲ್ಲಿ 1.9% ಮತ್ತು ಇತರ ಧಾರ್ಮಿಕ ಸಮುದಾಯಗಳಲ್ಲಿ 1.6% ರಷ್ಟಿದೆ.

ಈ ಹಿಂದೆ ‘ದಿ ವೈರ್’ ನಡೆಸಿದ ವೀಡಿಯೊ ಸಂದರ್ಶನದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದರು. “ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪಾಲಿಟಿಕ್ಸ್ ಇನ್ ಇಂಡಿಯಾ” ಪುಸ್ತಕವನ್ನು ನೀಡಿದ ನಂತರ ಖುರೈಶಿ, “ಮುಸ್ಲಿಮರು ಹಿಂದೂಗಳನ್ನು ಸಂಖ್ಯಾಬಲದಲ್ಲಿ ಹಿಂದಿಕ್ಕುತ್ತಾರೆ ಎಂಬುದು ಹಿಂದುತ್ವ ಗುಂಪುಗಳ ಕಡೆಯಿಂದ ಬಂದ ಶುದ್ಧ ಪ್ರೊಪಗಾಂಡ” ಎಂದಿದ್ದರು. (‘ದಿ ವೈರ್‌’ ನಡೆಸಿದ ವಿಡಿಯೊ ಸಂದರ್ಶನದಲ್ಲಿ 8 ನಿಮಿಷ 20 ಸೆಕೆಂಡ್‌ ವೇಳೆಗೆ ಈ ಚರ್ಚೆ ನಡೆಯುವುದನ್ನು ಗಮನಿಸಬಹುದು.)

“ಇನ್ನು 1,000 ವರ್ಷಗಳಾದರೂ ಇದು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಾರೆಂಬುದು) ಸಂಭವಿಸುವುದಿಲ್ಲ. ಬಹುಪತ್ನಿತ್ವದ ಪ್ರಶ್ನೆಯು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಿದ್ದಾರೆ ಎಂದು ವಾದಿಸಲು ಬಳಸುವ ವಾದ) ಭಾರತದಲ್ಲಿ ಬರುವುದೇ ಇಲ್ಲ. ಭಾರತದಲ್ಲಿ ಲಿಂಗಾನುಪಾತವು 1,000 ಪುರುಷರಿಗೆ 940 ಮಹಿಳೆಯರು ಎಂಬ ಲೆಕ್ಕದಲ್ಲಿದೆ. ಸಾವಿರದಲ್ಲಿ 60 ಬ್ಯಾಚುಲರ್‌ಗಳು ತಮ್ಮ ಮೊದಲ ಮದುವೆಯಾಗಲೂ ಹೆಣಗಾಡುತ್ತಿದ್ದಾರೆ. ಹಾಗಿದ್ದ ಮೇಲೆ ಬಹುಪತ್ನಿತ್ವದ ಪ್ರಶ್ನೆ ಎಲ್ಲಿದೆ ಎಂದು ಕೇಳಿದೆ. ಇದಕ್ಕೆ ಅವರು ಆತ್ಮೀಯ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಅರ್ಥಾತ್, ನಾನು ಏನು ಹೇಳಿದೆನೊ ಅದನ್ನು ಅವರು ದಾಖಲು ಮಾಡಿಕೊಂಡರು” ಎಂದು ಸಂದರ್ಶನದಲ್ಲಿ ಖುರೇಷಿ ವಿವರಿಸಿದ್ದಾರೆ.

ಮತಾಂತರದಿಂದ ಹಿಂದೂಗಳು ಕಡಿಮೆಯಾಗುವುದಿಲ್ಲ

ಹಿಂದುತ್ವ ಗುಂಪುಗಳು ‘ಬಲವಂತದ ಮತಾಂತರಗಳ ಹುನ್ನಾರ’ವನ್ನು ಪ್ರಸ್ತಾಪಿಸುತ್ತಿರುತ್ತವೆ. ವಿಶೇಷವಾಗಿ ಕ್ರಿಶ್ಚಿಯನ್ ಧರ್ಮವು ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂದು ವಾದಿಸುತ್ತಾರೆ. ಈ ಹಿಂದೆ ‘ದಿ ವೈರ್’ ನಡೆಸಿದ ವರದಿಯ ಪ್ರಕಾರ, “ಹಿಂದುತ್ವ ಗುಂಪುಗಳ ಈ ಪ್ರತಿಪಾದನೆಗೂ ಯಾವುದೇ ಪುರಾವೆ ಇಲ್ಲವಾಗಿದೆ.

ಧಾರ್ಮಿಕ ಮತಾಂತರದ ವಿವಾದಾತ್ಮಕ ವಿಷಯದ ಕುರಿತು ಜೂನ್ 2021ರಲ್ಲಿ ಪ್ಯೂ ಸಂಶೋಧನಾ ವರದಿಯು ಮತ್ತಷ್ಟು ಬೆಳಕು ಚೆಲ್ಲಿತ್ತು. ಭಾರತದಲ್ಲಿ ಯಾರಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸುವುದು ‘ಅಪರೂಪ’ ಎಂದು ವರದಿ ಗಮನ ಸೆಳೆದಿತ್ತು.

ಹಾಗಾಗಿ 2030ಕ್ಕೆ ಭಾರತ ಮುಸ್ಲಿಂ ದೇಶವಾಗುತ್ತದೆ, 2050ಕ್ಕೆ ಒಬ್ಬರೂ ಹಿಂದುಗಳಿರುವುದಿಲ್ಲ ಎಂಬುದು ಯಾವುದೇ ಆಧಾರಗಳಿಲ್ಲದ, ಸಂಪೂರ್ಣ ಸುಳ್ಳಾಗಿದೆ.

 


ಇದನ್ನೂ ಓದಿ: ಕಾವೇರಿ ಕೇವಲ ಕರ್ನಾಟದ ಸ್ವತ್ತಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಲ್ಲ: ಇದು ತಿರುಚಿದ ಫೋಟೊ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *