ಕಾವೇರಿ ಗಲಾಟೆಯ ಈ ವಿಡಿಯೋ ಇತ್ತೀಚಿನದ್ದಲ್ಲ: 2016ರಲ್ಲಿ ನಡೆದಿರುವುದು

ಕಾವೇರಿ

ಕಾವೇರಿ ಹೋರಾಟದಲ್ಲಿ ತಮಿಳುನಾಡಿನವರು ಕರ್ನಾಟಕದ ಬಸ್ ಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ನೋಡಿ ಎಂಬ ವಿಡಿಯೋವೊಂದನ್ನು ಇತ್ತೀಚೆಗೆ ನಡೆದ ಘಟನೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

ಕಪ್ಪು ಬಟ್ಟೆ ಧರಿಸಿರುವ ಹಲವು ಯುವಕರು ಸರ್ವೋದಯ ಎಂದು ಬರೆದಿರುವ ಕರ್ನಾಟಕದ ಬಸ್‌ ಅನ್ನು ದೊಣ್ಣೆಗಳಿಂದ ಹೊಡೆಯುವುದು, ಕಾವೇರಿ ಯಾರದು ಎಂದು ಜನರನ್ನು ಪ್ರಶ್ನಿಸುವುದು ಹಾಗೂ ಕೊನೆಯಲ್ಲಿ ಅವರನ್ನು ಪೊಲೀಸರು ಬಂಧಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಕುರಿತ ಫ್ಯಾಕ್ಟ್ ಚೆಕ್ ನಡೆಸಿದಾಗ, “ಇದೇ ವಿಡಿಯೋ ಸೆಪ್ಟಂಬರ್ 12, 2016ರಲ್ಲಿಯೇ ನಕ್ಕಿರನ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ “ಕರ್ನಾಟಕದ ಬಸ್‌ಗಳ ಮೇಲೆ ತಮಿಳು ಕಾರ್ಯಕರ್ತರ ದಾಳಿ | ಕಾವೇರಿ ಜಲ ವಿವಾದ” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಆಗಿರುವುದು ಕಂಡುಬಂದಿದೆ.

2016ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿಗೆ 10 ದಿನಗಳಲ್ಲಿ 15,000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶಿಸಿತ್ತು. ಆ ಸಂದರ್ಭದಲ್ಲಿ ಸುಪ್ರೀಂ ಆದೇಶ ವಿರೋಧಿಸಿ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದ ಪ್ರತಿಭಟನೆಯ ವೇಳೆ ಈ ಬಸ್‌ ಮೇಲಿನ ದಾಳಿ ನಡೆದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

 

2023ರಲ್ಲಿಯೂ ಕಾವೇರಿ ವಿವಾದ ಭುಗಿಲೆದ್ದಿದೆ. ಆದರೆ ಎಲ್ಲಿಯೂ ಹಿಂಸಾಚಾರ, ಬಸ್‌ ಮೇಲಿನ ದಾಳಿಯ ಬಗ್ಗೆ ವರದಿಯಾಗಿಲ್ಲ. ಮುಂಜಾಗ್ರತೆಯಾಗಿ ಎರಡೂ ರಾಜ್ಯಗಳ ನಡುವೆ ಹೆಚ್ಚಿನ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ. ಆದರೂ ಹಿಂಸಾಚಾರವಾಗಿದೆ ಎಂದು ನಕಲಿ ವಿಡಿಯೋ ಹಂಚಿಕೊಂಡ ಆರೋಪದ ಮೇಲೆ ಇಬ್ಬರ ಮೇಲೆ ತಮಿಳುನಾಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕರ್ನಾಟಕದಲ್ಲಿಯೂ ಸಹ ತಮಿಳುನಾಡಿನ ಲಾರಿ ಡ್ರೈವರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಆದರೆ ಅದು ಸಹ ಹಳೆಯ ವಿಡಿಯೋ, ಇತ್ತೀಚೆಗೆ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

 

ಈ ರೀತಿಯ ಯಾವುದೇ ವಿಡಿಯೋ ನಿಮ್ಮ ಗಮನಕ್ಕೆ ಬಂದರೆ ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ. ಗೊತ್ತಾಗದಿದ್ದರೆ ನಮಗೆ ಕಳಿಸಿ, ಫ್ಯಾಕ್ಟ್ ಚೆಕ್ ಮಾಡುತ್ತೇವೆ. ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯದಿರಿ.


ಇದನ್ನು ಓದಿ: ಮೋದಿಯವರನ್ನು ನೇಪಾಳದ ಸಂಸದರು ಟೀಕಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *