ಸಾವರ್ಕರ್ ದಲಿತರಿಗಾಗಿ ಹೋಟೆಲ್, ದೇವಾಸ್ಥಾನ ತೆರೆದಿದ್ದರು ಎಂಬ ರೋಹಿತ್ ಚಕ್ರತೀರ್ಥ ಭಾಷಣ ಸುಳ್ಳಾಗಿದೆ

‘ಕರಿ ನೀರ ಶಿಕ್ಷೆಯ ವೀರ, ದಲಿತರ ಪಾಲಿಗೆ ನಾಯಕರಾದ ಸಾವರ್ಕರ್’ ಎಂಬ ಹೆಸರಿನಲ್ಲಿ ವಿಡಿಯೋವೊಂದನ್ನು ಸಂವಾದ ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ. ಅದರಲ್ಲಿ ರೋಹಿತ್ ಚಕ್ರತೀರ್ಥ ಎಂಬುವವರು ಸಾವರ್ಕರ್‌ ದಲಿತರನ್ನೂ ಒಳಗೊಂಡಂತೆ ಸಮಾಜದ ಎಲ್ಲ ವರ್ಗ, ಪಂಥ, ಜಾತಿಯವರಿಗೂ ಮುಕ್ತವಾಗಿರುವ ಪತಿತಪಾವನ ದೇವಸ್ಥಾನ ಕಟ್ಟಿದರು. ಅಸ್ಪೃಶ್ಯರೊಟ್ಟಿಗೆ ಸಹ ಭೋಜನ ಏರ್ಪಡಿಸಿದರು. ಸಂಪೂರ್ಣವಾಗಿ ದಲಿತರಿಂದಲೇ ನಡೆಯುವ ಹೊಟೇಲನ್ನು ಮೊಟ್ಟಮೊದಲ ಬಾರಿಗೆ ತೆರೆದರು ಎಂದು ಪ್ರತಿಪಾದಿಸಿ ಸಾವರ್ಕರ್ ದಲಿತರ ಪಾಲಿಗೆ ನಾಯಕ ಎಂದಿದ್ದಾರೆ.

ಕನ್ನಡ ಫ್ಯಾಕ್ಟ್ ಚೆಕ್ ತಂಡ ಈ ಕುರಿತು ಸತ್ಯಶೋಧನೆ ನಡೆಸಿದಾಗ ಈ ಕೆಳಕಂಡ ಅಂಶಗಳು ಕಂಡುಬಂದವು. ಪತಿತಪಾವನ ದೇವಾಲಯವನ್ನು ಶ್ರೀಮನ್ ಭಗೋಜಿಶೆತ್ ಕೀರ್ ಎಂಬುವವರು 1931ರಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಟ್ಟಿಸಿದರೆಂದು ವಿಕಿಪಿಡೀಯ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳು ಹೇಳುತ್ತವೆ.

ಅದೇ ಸಮಯದಲ್ಲಿ ಅಂದರೆ 1930ರಲ್ಲಿ  ಡಾ.ಬಿ.ಆರ್ ಅಂಬೇಡ್ಕರ್‌ರವರು ಮಹಾರಾಷ್ಟ್ರದ ನಾಸಿಕ್‌ನಲ್ಲಿನ ಕಾಳರಾಮ್ ದೇವಾಲಯ ಪ್ರವೇಶಕ್ಕಾಗಿ ದೊಡ್ಡ ಹೋರಾಟವನ್ನೇ ನಡೆಸಿದರು. ತಮ್ಮ 15,000  ಅನುಯಾಯಿಗಳೊಂದಿಗೆ ದೇವಾಲಯ ಪ್ರವೇಶಿಸಿದಾಗ ಅದನ್ನು ಸವರ್ಣೀಯ ಹಿಂದೂಗಳು ವಿರೋಧಿಸಿದ್ದರು. ಅಂಬೇಡ್ಕರ್ ಅನುಯಾಯಿಗಳು ಮತ್ತು ಪೊಲೀಸರೊಂದಿಗೆ ದೊಡ್ಡ ವಾಗ್ವಾದವೇ ನಡೆದಿದೆ. ಪರಿಸ್ಥಿತಿ ಹೀಗಿರುವಾಗ ಸಾವರ್ಕರ್ ದಲಿತರಿಗಾಗಿ ದೇವಾಲಯ ಕಟ್ಟಿದರು, ಸಹಭೋಜನ ನಡೆಸಿದರು ಎಂಬುದು ಸುಳ್ಳು. ಈ ಕುರಿತು ಯಾವುದೇ ಅಧಿಕೃತ ದಾಖಲೆ ಇಲ್ಲ.

ಇನ್ನು ಹೋಟೆಲ್ ವಿಚಾರ: ಅಂಬೇಡ್ಕರ್, ತಿಲಕ್ ಮತ್ತು ಸಾವರ್ಕರ್ – ಈ ಮೂರೂ ಜನರ ಜೀವನ ಚರಿತ್ರೆ ಯನ್ನು ಬರೆದದ್ದು ಧನಂಜಯ್ ಕೀರ್. ಆ ಮೂವರ ಬದುಕಿನ ಮಾಹಿತಿಗಳ ಬಗ್ಗೆ ಕೀರ್ ಬರಹವನ್ನೇ ಮೂಲ ಆಕರವನ್ನಾಗಿ ಎಲ್ಲೆಡೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲೆಲ್ಲೂ ಸಾವರ್ಕರರು ’ಸಂಪೂರ್ಣವಾಗಿ ದಲಿತರೇ ನಡೆಸುವ ಹೋಟೆಲ್ ಪ್ರಾರಂಭಿಸಿದ” ಪ್ರಸಂಗವಿಲ್ಲ… ವಾಸ್ತವವಾಗಿ ಇಂಥಾ ರಚನಾತ್ಮಕ ಕೆಲಸಗಳನ್ನು ಸಂಘಟನಾತ್ಮಕವಾಗಿಯೋ, ವೈಯಕ್ತಿಕವಾಗಿಯೋ ಹಿಂದೂ ಮಹಾ ಸಭಾ ಕೈಗೆತ್ತಿಕೊಂಡು ಸಮಯ ಹಾಳುಮಾಡುವುದನ್ನು ಸಾವರ್ಕರ್ ವಿರೋಧಿಸುತ್ತಿದ್ದರು..

 

ಈ ಕುರಿತು ಸಾವರ್ಕರ್‌‌ರವರ ಬದುಕು ಬರಹಗಳ ಬಗ್ಗೆ ಅಧ್ಯಯನ ಮಾಡಿರುವ ಕನ್ನಡದ ಚಿಂತಕರಾದ ಶಿವಸುಂದರ್‌ರವರು “ಒಂದೂ ಬಲವಾದ ಹಿಂದೂ ಸಮಾಜ ಕಟ್ಟಲೋಸುಗ ದಲಿತರನ್ನು ಒಳಗೊಳ್ಳಬೇಕೆಂದು ಸಾವರ್ಕರ್‌ ಪ್ರತಿಪಾದಿಸುತ್ತಿದ್ದರು…. ಅದಕ್ಕಾಗಿ ಜಾತಿ ವ್ಯವಸ್ಥೆಯನ್ನೂ ಆಗಾಗ ಟೀಕಿಸುತ್ತಿದ್ದರು… ಆದರೆ ಹಿಂದೂ ಮಹಾ ಸಭಾದ ಒಳಗಡೆ ಎಂದಿಗೂ ಒಬ್ಬ ದಲಿತನನ್ನು ಒಳಗೊಳ್ಳಲಿಲ್ಲ. ಒಂದು ಅಂತರ್ಜಾತಿ ಮದುವೆಗೂ ಪ್ರೋತ್ಸಾಹ ಕೊಡಲಿಲ್ಲ” ಎಂದು ಹೇಳುತ್ತಾರೆ.

ಹಾಗಾಗಿ ರೋಹಿತ್ ಚಕ್ರತೀರ್ಥ ಎಂಬುವವರು ಹೇಳಿರುವ ಅಂಶಗಳು ವಾಸ್ತವಕ್ಕೆ ದೂರವಾಗಿವೆ.

Leave a Reply

Your email address will not be published. Required fields are marked *