ದೇಶದಲ್ಲಿ ಕಳೆದ ಕೆಲ ದಿನಗಳಿಂದ ವಾಯಸೇನೆಗೆ ಸಂಬಂಧಿಸಿದ ಸುದ್ದಿಯೊಂದು ಬಹಳ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅದು ಕೂಡ ಯಾವುದೋ ಉದ್ಯೋಗದ ವಿಚಾರಕ್ಕೋ ಅಥವಾ ಸೇನಾ ದಾಳಿ ವಿಚಾರಕ್ಕೋ ಅಲ್ಲ ಬದಲಾಗಿ ಸುಳ್ಳು ಸುದ್ದಿಯೊಂದರ ವಿಚಾರದಿಂದಾಗಿ ಈಗ ಭಾರತೀಯ ವಾಯುಸೇನೆ ಸುದ್ದಿಯಲ್ಲಿದೆ.
ಹೌದು ಈ ವಿಚಾರ ನಿಮಗೆ ಅಚ್ಚರಿ ಎನಿಸಬಹುದು ಆದರೆ ಇದು ಅಕ್ಷರಶಃ ನಿಜ ಕಳೆದ ಎರಡು ದಿನಗಳಿಂದ ಭಾರತೀಯ ವಾಯುಸೇನಯಲ್ಲಿ ಸಿಖ್ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿ, ದೇಶದ ಸೈನ್ಯಕ್ಕೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದೆ. ಅದರಲ್ಲೂ ಈ ವಿಚಾರವನ್ನ ಸತ್ಯಾಸತ್ಯತೆಯನ್ನು ಪರಿಶೀಲನೆಯನ್ನ ಮಾಡದೆ ಅದೆಷ್ಟೋ ಮಂದಿ ವ್ಯಾಪಕವಾಗಿ ಫಾರ್ವರ್ಡ್ ಮಾಡುತ್ತಿದ್ದಾರೆ. ಈ ಕುರಿತು ಇಂಡಿಯಾ ಟಿವಿ ಕೂಡ ಪರಿಶೀಲನೆಯನ್ನ ನಡೆಸಿದ್ದು ಇದು ಸುಳ್ಳು ಸುದ್ದಿ ಎಂದು ಸಾಭೀತು ಮಾಡಿದೆ.
ಅಷ್ಟಕ್ಕೂ ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ, ʼʼ ಹಿರಿಯ ಹಿಂದೂ ಸೈನಿಕರು, ಸಿಖ್ ಸೈನಿಕರನ್ನು ಅವಮಾನಿಸುತ್ತಿದ್ದಾರೆ, ಅವರಿಗೆ ಪರೋಕ್ಷವಾಗಿ ಶೋಷಣೆ ಕೊಡಲಾಗುತ್ತಿದೆ, ಹೀಗಾಗಿ ಸಾಕಷ್ಟು ಮಂದಿ ಸಿಖ್ ಸೈನಿಕರು ಕರ್ತವ್ಯ ತೊರೆಯುತ್ತಿದ್ದಾರೆʼʼ ಎಂದು ತರಹೇವಾರಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು
ಯಾವಾಗ ಈ ಕುರಿತು ವ್ಯಾಪಕವಾದ ಸುಳ್ಳು ಸುದ್ದಿ ಹಬ್ಬಲು ಪ್ರಾರಂಭವಾಯಿತೋ, ಆಗಲೇ ಈ ಸುದ್ದಿ ಭಾರತೀಯ ವಾಯು ಸೇನೆಯ ಕಣ್ಣಿಗೆ ಕೂಡ ಬಿದ್ದಿತು, ಹೀಗಾಗಿ ಈ ಪೋಸ್ಟ್‌ಗೆ ಟ್ವಿಟ್ ಮಾಡಿ ಪ್ರತಿಕ್ರಿಯೆ ನೀಡಿದ ಭಾರತೀಯ ವಾಯುಸೇನೆ ʼʼ ಈ ಮಾಹಿತಿಯೂ ನಿಜವಲ್ಲ, ಹಾಗೂ ಇದನ್ನ ಗಾಳಿ ಸುದ್ದಿಯಾಗಿ ಹರಿಬಿಡಲಾಗ್ತಾ ಇದೆ” ಎಂದು ತನ್ನ ಅಧಿಕೃತ ಎಕ್ಸ್ ಖಾತೆ ( ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು ) ಯಲ್ಲಿ ಸ್ಪಷ್ಟ ಪಡಿಸಿದೆ.
ಇದೀಗ ಭಾರತೀಯ ಸೇನೆಯೇ ಈ ಬಗ್ಗೆ ಅಧಿಕೃತವಾದ ಸ್ಪಷ್ಟನೆಯನ್ನ ನೀಡಿರುವುದರಿಂದ, ಸಿಖ್ ಸಮುದಾಯಕ್ಕೆ ಸೇರಿದ ಸೈನಿಕರಿಗೆ ಹಿರಿಯ ಹಿಂದೂ ಸೈನಿಕರು ಕಿರುಕುಳ ಕೊಡುತ್ತಿದ್ದಾರೆ ಎಂಬುವುದು ಸುಳ್ಳು ಎಂದು ಸಾಬೀತಾಗಿದೆ.