ಅಕ್ಟೋಬರ್ 01ರ ಭಾನುವಾರ ಸಂಜೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಗಲಭೆ ಉಂಟಾಗಿತ್ತು. ಗಾಯಗೊಂಡ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ 60 ಮಂದಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನಲೆಯಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಪೊಲೀಸ್ ಎನ್‌ಕೌಂಟರ್ ನಿಂದ ಮುಸ್ಲಿಂ ಯುವಕ ಮೃತ್ಯು ಎಂಬ ವಾಟ್ಸಾಪ್ ಸಂದೇಶವೊಂದು ಹರಿದಾಡುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಕತ್ತಿಗಳನ್ನಿಡಿದು ಮುಸ್ಲಿಮರ ಮೆರವಣಿಗೆ ಎಂದು ವಿಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, “ಶಿವಮೊಗ್ಗದಲ್ಲಿ ಪೋಲಿಸ್ ಎನ್‌ಕೌಂಟರ್ ನಡೆದಿಲ್ಲ ಮತ್ತು ಯಾವ ಮುಸ್ಲಿಂ ಯುವಕನ ಸಾವು ಸಂಭವಿಸಿಲ್ಲ. ಈ ಕುರಿತು ಸುಳ್ಳು ಸುದ್ದಿ ಹರಡಿದವರ ಮೇಲೆ ಪ್ರಕರಣ ದಾಖಲಾಗಿದೆ. ಈಗ ಗಲಭೆ ಸಂಪೂರ್ಣವಾಗಿ ತಹಬದಿಗೆ ಬಂದಿದೆ. ಮುಂದೆ ಯಾರಾದರೂ ಸುಳ್ಳು ಹರಡಿದರೆ ಎಫ್‌ಐಆರ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇನ್ನು ವಿಡಿಯೋ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದಾಗ, ವೈರಲ್ ವಿಡಿಯೋದ 14ನೇ ಸೆಕೆಂಡ್‌ನಲ್ಲಿ ಗಾಂಧಿ ಆಶ್ರಮ ಭೀತಿಹರ್ವಾಕ್ಕೆ 19 ಕಿ,ಮೀ, ಅಶೋಕ ಪಿಲ್ಲರ್ ಭೀತಿಹರ್ವಾ 22 ಕಿ.ಮೀ ಎಂಬ ಸೂಚನಾ ಫಲಕವನ್ನು ನೋಡಬಹುದು. ಭೀತಿಹರ್ವಾ ಬಿಹಾರದ ಹಳ್ಳಿಯಾಗಿದೆ. ಹಾಗಾಗಿ ಈ ವಿಡಿಯೋ ಬಿಹಾರ ರಾಜ್ಯದ್ದೆ ಹೊರತು ಶಿವಮೊಗ್ಗದಲ್ಲ.
ಈ ಸುದ್ದಿಯನ್ನೂ ಓದಿದ್ದೀರಾ?; ಹಾರಿಕಾ ಮಂಜುನಾಥ್ ಹೇಳಿದ ಹಸಿ ಸುಳ್ಳು ಬಟಾ ಬಯಲು..!
ಸಮಾಜದ ಶಾಂತಿಯ ದೃಷ್ಟಿಯಿಂದ ನಿಮಗೆ ಸಂಪೂರ್ಣ ತಿಳುವಳಿಕೆಯಿಲ್ಲದ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ. ಅನುಮಾನ ಬಂದರೆ ನಮಗೆ ಕಳಿಸಿ ಸತ್ಯಾಸತ್ಯತೆ ತಿಳಿಸುತ್ತೇವೆ.