1955ರಲ್ಲಿ ಸೌದಿ ರಾಜ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಮಾಜಿ ಪ್ರಧಾನಿ ನೆಹರು ಸೌದಿ ರಾಜನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಕಾಶಿ ವಿಶ್ವನಾಥ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಿಗೆ ಪರದೆ ಹಾಕಿಸಿದ್ದರು ಎಂದು ಹರಿಕಾ ಮಂಜುನಾಥ್ ಭಾಷಣವೊಂದನ್ನು ಮಾಡಿದ್ದಾಳೆ. ಆ ವಿಡಿಯೋ ಕಳೆದೊಂದು ವಾರದಿಂದ ಸಂಘ ಪರಿವಾರ ಹಾಗೂ ಹಿಂದುತ್ವ ಕಾರ್ಯಕರ್ತರ ಮಧ್ಯ ಬಹಳ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತದೆ. ಇದನ್ನೇ ಎಷ್ಟು ಮಂದಿ ಅಮಾಯಕರು ನಿಜವೆಂದು ನಂಬುತ್ತಿದ್ದಾರೆ. ಆ ಮುಖೇನ ಯುವಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.
ಇದರ ಕುರಿತು ಕನ್ನಡ ಫ್ಯಾಕ್ಟ್ ಚೆಕ್ ತಂಡ ಸತ್ಯಶೋಧನೆಯನ್ನು ನಡೆಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಿಯಾದ್‌ನ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ವೆಬ್‌ಸೈಟ್‌ಗಳು ಸೌದಿಯ ರಾಜ ಭಾರತಕ್ಕೆ ಬಂದ ಕುರಿತ ಮಾಹಿತಿ ನೀಡಿವೆ. ಅದರಂತೆ 1955 ರಲ್ಲಿ ಸೌದಿಯ ರಾಜ ಸೌದ್ ಬಿನ್ ಅಬ್ದುಲ್ಅಜಿ಼ಜ್ ಅಲ್ ಸೌದ್ 17 ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಹೈದರಾಬಾದ್, ಮೈಸೂರು, ಶಿಮ್ಲಾ, ಆಗ್ರಾ, ಆಲಿಘರ್, ಮತ್ತು ವಾರಣಾಸಿ ನಗರಗಳಿಗೆ ಭೇಟಿ ನೀಡಿದ್ದರು..
#King_Saud paid a 17-day visit to #India,the first visit by a Saudi Monarch on the 27 /11/1955.During the visit, King Saud toured #Indian cities including #New_Delhi, #Mumbai, #Hyderabad, #Mysore, #Simla, #Agra, #Aligarh & #Varanasi. pic.twitter.com/6Aax9qA8Le
— الملك سعود (@kingsaud) August 23, 2019
ಹೀಗೆ ಭಾರತದ ಹಲವು ನಗರಗಳಿಗೆ ಸೌದಿ ರಾಜ ಭೇಟಿ ನೀಡಿದ್ದ ವೇಳೆ ಯಾವುದೇ ದೇವಾಲಯಗಳನ್ನು ಪರದೆಯ ಮೂಲಕ ಮುಚ್ಚಿರುವ ಕುರಿತು ಯಾವುದೇ ಐತಿಹಾಸಿಕ, ಅಧಿಕೃತ ದಾಖಲೆಗಳು ಇಲ್ಲ. ಈ ಕುರಿತು ಯಾವುದೇ ಮಾಧ್ಯಮಗಳು ಸಹ ವರದಿ ಮಾಡಿಲ್ಲ.
ಲೋಕಸಭಾ ಚರ್ಚೆಗಳ ದಾಖಲೆಗಳನ್ನು ದಿ ಕ್ವಿಂಟ್ ಪರಿಶೀಲಿಸಿದ್ದು, ಅಲ್ಲಿಯೂ ಈ ಕುರಿತು ಯಾವುದೇ ವಿವರ ಇಲ್ಲ ಎಂದು ದೃಢಪಡಿಸಿದೆ.
ಇನ್ನು 1955ರಲ್ಲಿ ಲೋಕಸಭೆಯಲ್ಲಿ 364 ಕಾಂಗ್ರೆಸ್ ಸಂಸದರಿದ್ದರೆ 3 ಜನಸಂಘದ (ಈಗಿನಿ ಬಿಜೆಪಿ) ಸಂಸದರು ಮತ್ತು 37 ಸ್ವತಂತ್ರವಾಗಿ ಆಯ್ಕೆಯಾದ ಸಂಸದರಿದ್ದರು.
ಒಂದು ವೇಳೆ ದೇವಾಸ್ಥಾನಗಳಿಗೆ ಪರದೆ ಮುಚ್ಚಿದ್ದರೆ ವಿರೋಧ ಪಕ್ಷಗಳು ಅದರ ವಿರುದ್ಧ ದನಿ ಎತ್ತಬಹುದಿತ್ತಲ್ಲವೇ? ಆ ರೀತಿಯ ಯಾವುದೇ ವರದಿಗಳು ಲಭ್ಯವಿಲ್ಲ.
ಹಾಗಾಗಿ ಸೌದಿ ರಾಜ ಭಾರತಕ್ಕೆ ಭೇಟಿ ಕೊಟ್ಟಾಗ ಕಾಶಿ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ಪರದೆ ಹಾಕಿ ಮುಚ್ಚಿದ್ದರು ಎಂಬುದು ಸಂಪೂರ್ಣ ಸುಳ್ಳು. ಆದರೂ ಮಾಜಿ ಪ್ರಧಾನಿ ನೆಹರೂರವರನ್ನು ಅವಹೇಳನ ಮಾಡಲು ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ.
ಹಾರಿಕಾ ಮಂಜುನಾತ್ ಥರದ ಯುವಜನರ ತಲೆಗೆ ಈ ರೀತಿಯ ಸುಳ್ಳು ಸುದ್ದಿಗಳನ್ನು ತುಂಬಿ ಭಾಷಣ ಮಾಡಿಸುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಈ ರೀತಿಯ ಭಾಷಣಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿವೆ. ಹಾಗಾಗಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಈ ಸುದ್ದಿಯನ್ನೂ ಓದಿ ;ಇದು ರಾಜಸ್ತಾನದ ಹಿಂದೂ- ಮುಸ್ಲಿಂ ಸೌಹಾರ್ದತೆಯ ‘ಅಖಂಡ ಜ್ಯೋತಿ’ ಎನ್ನುವ ಸಂಪ್ರದಾಯ
ಯಾವುದೇ ವಿಡಿಯೋ, ಸುದ್ದಿ, ಪೋಸ್ಟರ್ ಬಗ್ಗೆ ನಿಮಗೆ ಅನುಮಾನ ಬಂದರೆ ಹಂಚಿಕೊಳ್ಳುವ ಮೊದಲು ನಮಗೆ ಕಳಿಸಿ. ಅದರ ಸತ್ಯಾಸತ್ಯತೆ ಬಯಲುಗೊಳಿಸುತ್ತೇವೆ.