ಇಸ್ರೇಲ್‌ನ ಗಾಜಾ ಪಟ್ಟಿಯ ದುಸ್ವಪ್ನವನ್ನು ನೀವು ವೀಕ್ಷಿಸುತ್ತಿದ್ದೀರಿ. ಅದೇ ಸ್ಟ್ರಿಪ್ ಅನ್ನು ಜಿನ್ನಾ ಪ್ರಸ್ತಾಪಿಸಿದರು. ಮೋಹನ ದಾಸ್ ಒಪ್ಪಿಕೊಂಡರು. ಗೋಡ್ಸೆ ನಿಮ್ಮನ್ನು ಯಾವುದರಿಂದ ರಕ್ಷಿಸಿದ್ದಾರೆ ಎಂಬುದನ್ನು ಈ ಚಿತ್ರವು ಸ್ಪಷ್ಟವಾಗಿ ತಿಳಿಸುತ್ತದೆ ಎಂಬ ಬರಹದೊಂದಿಗೆ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಅಂದರೆ ಈಗಿನ ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವಂತಹ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆ ಮೂಲಕ ಜಿನ್ನಾ ಪ್ರಸ್ತಾಪಿಸಿದ ಪಾಕಿಸ್ತಾನ – ಬಾಂಗ್ಲಾದೇಶ ಕಾರಿಡಾರ್‌ಗೆ ಒಪ್ಪಿದ್ದಕ್ಕಾಗಿ ಗಾಂಧಿಯನ್ನು ಗೋಡ್ಸೆ ಕೊಂದರು ಎಂಬ ಕಥನವನ್ನು ತೇಲಿ ಬಿಡುವ ಮೂಲಕ ಗಾಂಧೀಜಿಯವರ ಹತ್ಯೆಯನ್ನು ಬಲಪಂಥೀಯರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇದೇ ಸಂದೇಶ ಇಂಗ್ಲಿಷ್‌ನಲ್ಲಿಯೂ ಸಹ ವೈರಲ್ ಆಗುತ್ತಿದ್ದು, ಜಾಡ್ ಆಡಮ್ಸ್ ಬರೆದ ಗಾಂಧಿ: ನೇಕಡ್ ಆಂಬಿಸನ್ಸ್; ಎಂಬ ಪುಸ್ತಕದಲ್ಲಿ ಈ ವಿವರಗಳಿವೆ ಎಂದು ಪ್ರತಿಪಾದಿಸಲಾಗಿದೆ.
ಫ್ಯಾಕ್ಟ್ ಚೆಕ್:
ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಜಿನ್ನಾ ಪ್ರಸ್ತಾಪಕ್ಕೆ ಗಾಂಧಿ ಒಪ್ಪಿಕೊಂಡರು ಎಂಬುದಕ್ಕೆ ಯಾವುದೇ ಸಣ್ಣ ಆಧಾರ ಸಹ ಕಂಡುಬಂದಿಲ್ಲ. 1947ರ ಮೇ ತಿಂಗಳಿನಲ್ಲಿ ಮೊಹಮ್ಮದ್ ಅಲಿ ಜಿನ್ನಾ ರಾಯ್ಟರ್ಸ್ ಗೆ ಸಂದರ್ಶನ ನೀಡುವಾಗ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಕ್ಕೆ ಕಾರಿಡಾರ್ ಬೇಕೆಂದು ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಬಿಹಾರ, ಉತ್ತರ ಪ್ರದೇಶಗಳ ಮೂಲಕ ಕಾರಿಡಾರ್ ಬೇಕೆಂದು ಅವರು ಆಗಸ್ಟ್ 5, 1947ರಲ್ಲಿ ವಿನ್ಸ್ಟನ್ ಚರ್ಚಿಲ್‌ರವರಿಗೆ ಪತ್ರ ಬರೆದಿರುವುದು ಕಂಡು ಬಂದಿದೆ. ಆದರೆ ಆ ಬೇಡಿಕೆಯನ್ನು ಸರ್ದಾರ್ ವಲ್ಲಭಬಾಯ್ ಪಟೇಲ್ ಮತ್ತು ಜವಾಹರಲಾಲ್ ನೆಹರೂ ತೀವ್ರವಾಗಿ ವಿರೋಧಿಸಿ, ತಿರಸ್ಕರಿಸಿದ್ದಾರೆ.
ಪಟೇಲರು ಅದನ್ನು ಗಂಭೀರವಾಗಿ ಪರಿಗಣಿಸದೇ ಅಸಂಬದ್ಧ ಎಂದು ಕರೆದರು. ನೆಹರು ಸಹ ‘ಕಾರಿಡಾರ್‌ನ ಬೇಡಿಕೆ ಅದ್ಭುತ ಮತ್ತು ಅಸಂಬದ್ಧವಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಗಾಂಧಿಯವರು ಈ ಕಾರಿಡಾರ್‌ನ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲ.
ನಾಥೂರಾಂ ಗೋಡ್ಸೆ 30 ಜನವರಿ 1948 ರಂದು ಗಾಂಧೀಜಿಯವರನ್ನು ಹತ್ಯೆ ಮಾಡಿದನು. ಗೋಡ್ಸೆ 05 ಮೇ 1949 ರಂದು ಪಂಜಾಬ್ ಉಚ್ಚ ನ್ಯಾಯಾಲಯದ ಮುಂದೆ ತನ್ನ ಕೊನೆಯ ಹೇಳಿಕೆಯನ್ನು ನೀಡಿದ್ದು, ಅಲ್ಲಿ ತಾನು ಗಾಂಧಿಯನ್ನು ಕೊಲ್ಲಲು ಹಲವು ಕಾರಣಗಳನ್ನು ನೀಡಿದ್ದಾನೆ. ಆದರೆ ಗೋಡ್ಸೆಯ ಹೇಳಿಕೆಗಳಲ್ಲಿ ಈ ಕಾರಿಡಾರ್ ಬೇಡಿಕೆಯ ವಿಷಯವನ್ನು ಉಲ್ಲೇಖಿಸಿಲ್ಲ ಎಂಬುದನ್ನು ಗಮನಿಸಬೇಕು.
ಅಲ್ಲದೇ ಜಾಡ್ ಆಡಮ್ಸ್ ಅವರ ‘ಗಾಂಧಿ: ನೇಕೆಡ್ ಆಂಬಿಷನ್’ ಪುಸ್ತಕದಲ್ಲಿ ಪ್ರಸ್ತಾವಿತ ಕಾರಿಡಾರ್‌ಗೆ ಗಾಂಧಿ ತನ್ನ ಅನುಮೋದನೆಯನ್ನು ನೀಡಿರುವುದನ್ನು ಉಲ್ಲೇಖಿಸಿಲ್ಲ. ಹಾಗಾಗಿ ಇದೊಂದು ಕಟ್ಟು ಕಥೆಯೇ ಹೊರತು ನಿಜವಲ್ಲ.
ಇದನ್ನೂ ಓದಿ: ಹಳೆಯ ವಿಡಿಯೋಗಳನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಯುದ್ಧಕ್ಕೆ ಸಂಬಂಧಿಸಿದ್ದೆಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.