Fact Check; ಮೋಸ ಹೋಗಬೇಡಿ, ‘ಪಿಎಂ ಕನ್ಯಾ’ ಎಂಬ ಯೋಜನೆಯೇ ಇಲ್ಲ

ಮೋಸ ಹೋಗಬೇಡಿ, 'ಪಿಎಂ ಕನ್ಯಾ’ ಎಂಬ ಯೋಜನೆಯೇ ಇಲ್ಲ

“ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ, ಪ್ರಧಾನಿ ಮೋದಿ ಜಾರಿಗೆ ತಂದಿರುವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಅಡಿಯಲ್ಲಿ, ಪತ್ರಿ ತಿಂಗಳು 2000 ರೂ. ಸಿಗುತ್ತದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂದೇಶವು ಹಲವಾರು ವರ್ಷಗಳಿಂದ ಹರಿದಾಡುತ್ತಿದ್ದು, ಯೋಜನೆಗಾಗಿ ಹಲವು ದಾಖಲಾತಿಗಳನ್ನು ‘ಸಿಎಸ್‌ಸಿ’ ಎಂಬ ಪೋರ್ಟಲ್‌ಗೆ ಸಲ್ಲಿಸಬೇಕು ಎಂದು ಸಂದೇಶವೊಂದು ವೈರಲ್‌ ಆಗಿದೆ.

ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಸಂದೇಶದಲ್ಲಿ “ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಅದು ಹೇಗೆಂದರೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ. ಅದು ಯಾವುದೆಂದರೆ ‘ಪಿ ಎಂ ಕನ್ಯಾ ಯೋಜನೆ’. ಪಿ ಎಂ ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು; ವಯಸ್ಸಿನ ಮಿತಿ 05 ರಿಂದ 18 ವಷ೯ದೊಳಗಿನವರು, ಆಧಾರ ಕಾರ್ಡ್, ಬ್ಯಾಂಕ್ ಪಾಸಬುಕ್, ಮಗುವಿನ 2 ಭಾವಚಿತ್ರ, ತಂದೆ ತಾಯಿಯ ವಾಷಿ೯ಕ ವರಮಾನ 2 ಲಕ್ಷ ರೂ ದಾಟಿರಬಾರದು” ಎಂದು ಹೇಳಲಾಗಿದೆ.

Fact Check:  ಈ ಕುರಿತು ಫ್ಯಾಕ್ಟ್‌ ಚೆಕ್‌ ನಡೆಸಿದಾಗ‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಹೆಸರಿನ ಯಾವುದೆ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಇದುವರೆಗೂ ರೂಪಿಸಿಲ್ಲ. ಈ ರೀತಿಯ ಯಾವುದೆ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ’(PIB) ಸ್ಪಷ್ಟಪಡಿಸಿದೆ.

ಈ ಸಂದೇಶವು ಕಳೆದ ಕೆಲವು ವರ್ಷಗಳಿಂದ ವೈರಲ್ ಆಗುತ್ತಿದೆ. ಇದೀಗ ಕನ್ನಡದಲ್ಲಿ ಭಾಷಾಂತರಗೊಂಡು ಹರಿದಾಡುತ್ತಿದೆ. ಒಟ್ಟಿನಲ್ಲಿ, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಯೋಜನೆ ನಕಲಿಯಾಗಿದೆ. ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2000 ರೂ. ಸಿಗುವ ಯಾವುದೆ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ರೂಪಿಸಿಲ್ಲ.

Leave a Reply

Your email address will not be published. Required fields are marked *