ಅಪರಿಚಿತರು ಏಡ್ಸ್ ಇಂಜೆಕ್ಷನ್ ಚುಚ್ಚುತ್ತಾರೆ ಎಂಬ ಗದಗ ಪೊಲೀಸ್ ಹೆಸರಿನ ಪೋಸ್ಟರ್ ನಕಲಿ

ಗದಗ ಜಿಲ್ಲಾ ಪೊಲೀಸ್ ಪ್ರಕಟಣೆಯ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ.

‘ಯಾರಾದರೂ ಮನೆ ಹತ್ರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್‌, ವಿಟಮಿನ್‌ ಇಂಜೆಕ್ಷನ್‌ ಮಾಡ್ತೀವಿ ಅಂತ ಹೇಳಿದ್ರೆ ನಂಬಬೇಡಿ. ನಂಬಿ ಆತುರಪಟ್ಟು ಇಂಜೆಕ್ಷನ್‌ ಮಾಡಿಸಿಕೊಳ್ಳದಿರಿ. ಜಿಹಾದಿ, ಟೆರರಿಸ್ಟುಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್‌ ಇಂಜೆಕ್ಷನ್‌ ಮಾಡುತ್ತಿದ್ದಾರಂತೆ. ಜಾಗ್ರತೆಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‌ಗಳಿಗೆ ಕಳಿಸಿ, ಅಮಾಯಕರ ಪ್ರಾಣ ಉಳಿಸಿ’. ಇಂತಿ ನಿಮ್ಮ ಸೋಮೇಶ್ ಗೆಜ್ಜೆ.(SI) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗದಗ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.

ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಗದಗ ಜಿಲ್ಲಾ ಪೊಲೀಸ್ ಫೇಸ್‌ಬುಕ್ ಪೇಜ್‌ನಲ್ಲಿ ಸರ್ಚ್ ಮಾಡಿದಾಗ ಪ್ರಕಟಣೆಗೆ ಸಂಬಂಧಿಸಿದಂತೆ ಯಾವುದೇ ಅಪ್‌ಡೇಟ್‌ಗಳು ಕಂಡುಬಂದಿಲ್ಲ.

ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಛೇರಿಗೆ ಕರೆ ಮಾಡಿ ವೈರಲ್ ಸಂದೇಶದ ಬಗ್ಗೆ ಮಾತನಾಡಿದಾಗ ಇದೊಂದು ನಕಲಿ ಸಂದೇಶ ಇದರಿಂದ ನಾಗರೀಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸಷ್ಟಪಡಿಸಿದ್ದಾರೆ.

‘ಇದೊಂದು ಫೇಕ್‌ ಸಂದೇಶವಾಗಿದ್ದು, ಜನರು ಭಯಪಡಬಾರದು. ಸಾರ್ವಜನಿಕರಲ್ಲಿ ಭೀತಿ ಮೂಡಿಸುವಂತಹ ಸಂದೇಶ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಕಲಿ ಸಂದೇಶದ ಮೂಲ ಪತ್ತೆ ಹಚ್ಚಲು ಸೈಬರ್‌ ವಿಭಾಗದ ಪೊಲೀಸರಿಗೆ ಸೂಚಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ದ್ವೇಷ ಹರಡುವ ಉದ್ದೇಶದಿಂದ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಇದನ್ನು ಯಾರು ನಂಬಬೇಡಿ ಮತ್ತು ಷೇರ್ ಮಾಡಬೇಡಿ.

Leave a Reply

Your email address will not be published. Required fields are marked *