Fact Check: ಮುಂಬೈನ ಎಸ್‌ಆರ್‌ಸಿಸಿ ಖಾಸಗಿ ಆಸ್ಪತ್ರೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್‌ಗೆ ಸಹಾಯ ಮಾಡುತ್ತಿಲ್ಲ

ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 10ರಿಂದ 12 ಲಕ್ಷದಷ್ಟು ರೋಟರಿ ಕ್ಲಬ್ ಆಫ್ ಮುಂಬೈ ವರ್ಲಿ ಧನಸಹಾಯ ಮಾಡುತ್ತಿದ್ದು, ಮುಂಬೈನ ಎಸ್‌ಆರ್‌ಸಿಸಿ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ಸಹಾಯ ಮಾಡುತ್ತಿದೆ. ಸಂಪರ್ಕಿಸಿ; ರೋಟರಿ ಕ್ಲಬ್ ಆಫ್ ಮುಂಬೈ ವರ್ಲಿ ಡಿಜಿ ಆರ್ಟಿಎನ್ ರಾಜೇಂದ್ರ ಅಗರ್ವಾಲ್ 9820085149. ಎಂಬ ವಾಟ್ಸಾಪ್ ಸಂದೇಶವೊಂದು  ಎಲ್ಲೆಡೆ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಮುಂಬೈನ ಎಸ್‌ಆರ್‌ಸಿಸಿ ಖಾಸಗಿ ಆಸ್ಪತ್ರೆ ಆಗಿದ್ದು, ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಯಾವ ಪ್ರಕಟಣೆಯನ್ನೂ ಅಧಿಕೃತವಾಗಿ ನೀಡಿಲ್ಲ. ಈ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್(cochlear implant) ಶಸ್ತ್ರಚಿಕಿತ್ಸೆಯ ಸೇವೆಯೇ ಇಲ್ಲ. ಇನ್ನೂ ರೋಟರಿ ಕ್ಲಬ್ ಆಫ್ ಮುಂಬೈ ವರ್ಲಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಧನಸಹಾಯ ಮಾಡುವ ಕುರಿತು ಯಾವ ಪ್ರಕಟನೆಯನ್ನೂ ಇದುವರೆಗೂ ನೀಡಿಲ್ಲ. ಮತ್ತು ರಾಜೇಂದ್ರ ಅಗರ್ವಾಲ್ ಎಂಬ ಯಾವ ವ್ಯಕ್ತಿಯ ಹೆಸರೂ ಸಹ ವೆಬ್‌ಸೈಟ್‌ನಲ್ಲಿ ನಮೂದಿಸಿಲ್ಲ. ಹಾಗೂ ನೀಡಲಾಗಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದರೂ ಸಹ ಯಾವ ಪ್ರತಿಕ್ರಿಯೆ ದೊರೆತಿಲ್ಲ.

ಆದರೆ ರೋಟರಿ ಕ್ಲಬ್ ಈ ಯೋಜನೆಯನ್ನು ಹೊಂದಿದ್ದು ಅನೇಕ ವರ್ಷಗಳಿಂದ ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕಾಕ್ಲಿಯರ್ ಇಂಪ್ಲಾಂಟ್(cochlear implant) ಅಳವಡಿಕೆಗೆ ಸಹಾಯ ಮಾಡುತ್ತಿದೆ. ಕರ್ನಾಟಕದಲ್ಲೂ ಸಹ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ಮತ್ತು ಉಪಕರಣಗಳ ಖರೀದಿಗೆ ರೋಟರಿ ಕ್ಲಬ್ ಸಹಾಯ ಮಾಡುತ್ತಿದೆ.

ಕರ್ನಾಟಕ ಸರ್ಕಾರವು ಸಹ ‘ಶ್ರವಣ ದೋಷ ಮುಕ್ತ ಕರ್ನಾಟಕ’ದ ದೃಷ್ಟಿಕೋನದೊಂದಿಗೆ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ (ಎನ್‌ಪಿಪಿಸಿಡಿ) ಎಂಬ ಯೋಜನೆಯನ್ನು ಹೊಂದಿದ್ದು.  500 ಕಿವುಡ ಮಕ್ಕಳಿಗೆ ಕಾಕ್ಲಿಯರ್ ಅಳವಡಿಕೆಗೆ 32 ಕೋಟಿ ರೂ ರಷ್ಟು ಹಣವನ್ನು ಮೀಸಲಿಟ್ಟಿದ್ದು. ಶಸ್ತ್ರಚಿಕಿತ್ಸೆಯ ಪೂರ್ವ ಮೌಲ್ಯಮಾಪನ, ಇಂಪ್ಲಾಂಟ್ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆಯ ನಂತರದ ಆಡಿಯೊ ಮೌಖಿಕ ಚಿಕಿತ್ಸೆಯನ್ನು ಒಂದು ವರ್ಷದವರೆಗೆ ಉಚಿತವಾಗಿ ಮುಂದುವರೆಸುವುದನ್ನು ಈ ಯೋಜನೆ ಒಳಗೊಂಡಿದೆ.

ಭಾರತ ಸರ್ಕಾರವು ಅಂಗವಿಕಲರಿಗೆ ಸಾಧನಗಳು ಮತ್ತು ಉಪಕರಣಗಳ ಖರೀದಿ / ಜೋಡಣೆಗಾಗಿ ನೆರವು (ಎಡಿಐಪಿ ಯೋಜನೆ) ಎಂಬ ಯೋಜನೆಯನ್ನು ಹೊಂದಿದ್ದು, ಇದು ಅಂಗವಿಕಲರಿಗೆ ಅಂಗವೈಕಲ್ಯಗಳ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅವರ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪುನರ್ವಸತಿಯನ್ನು ಉತ್ತೇಜಿಸುವ ಬಾಳಿಕೆ ಬರುವ, ಅತ್ಯಾಧುನಿಕ ಮತ್ತು ವೈಜ್ಞಾನಿಕವಾಗಿ ತಯಾರಿಸಿದ ಸಾಧನಗಳು ಮತ್ತು ಉಪಕರಣಗಳನ್ನು ಖರೀದಿಸಲು ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಸಹಾಯಕ ಸಾಧನವನ್ನು ಒದಗಿಸುವ ಮೊದಲು ಅಗತ್ಯವಿರುವಲ್ಲಿ ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಹ ಈ ಯೋಜನೆಯು ಉದ್ದೇಶಿಸಿದೆ. ಈ ಯೋಜನೆಯಡಿ ಬರುವ ಸಾಧನಗಳ ಪಟ್ಟಿಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಗಳನ್ನು ಸಹ ಸೇರಿಸಲಾಗಿದೆ.

ಆದ್ದರಿಂದ ಮುಂಬೈನ ಎಸ್‌ಆರ್‌ಸಿಸಿ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ನಡೆಸಲಾಗುತ್ತಿದ್ದು, ಮುಂಬೈನ ವಾರ್ಲಿ ರೋಟರಿ ಕ್ಲಬ್ ಧನಸಹಾಯ ಮಾಡುತ್ತಿದೆ ಎಂಬ ಈ ಸುದ್ದಿ ಸುಳ್ಳು.


ಇದನ್ನು ಓದಿ: Fact Check: ನಾನು ಪ್ಯಾಲೆಸ್ಟೈನ್‌ ಬೆಂಬಲಿಸುತ್ತೇನೆ ಎಂದು ನಟ ಅಕ್ಷಯ್‌ ಕುಮಾರ್‌ ಹೇಳಿಲ್ಲ..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *