ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುತ್ತಿಲ್ಲ, ಹಲವು ಸಮುದಾಯಗಳಿಗೆ ಈ ಸೌಲಭ್ಯವಿದೆ

ತೆಲಂಗಾಣ

ತೆಲಂಗಾಣ ಸರ್ಕಾರ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುವ ಯೋಜನೆ ಜಾರಿಗೆ ತಂದಿದೆ. ನಮ್ಮ ತೆರಿಗೆ ಹಣವನ್ನು ಮುಸ್ಲಿಮರ ತುಷ್ಟೀಕರಣ ಮಾಡಲು ಬಳಸುತ್ತಿದೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಪಿ ಶಿವಮೊಗ್ಗ ಪೇಜ್‌ನಲ್ಲಿ ಅದನ್ನು ಹಂಚಿಕೊಂಡು ಮುಸ್ಲಿಮರ ವಿರುದ್ಧ ಕಿಡಿಕಾರಲಾಗಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

 

ತೆಲಂಗಾಣ ರಾಜ್ಯ ಸರ್ಕಾರವು ಚಾಲಕರ ಸಬಲೀಕರಣ ಕಾರ್ಯಕ್ರಮದ ಭಾಗವಾಗಿ ಅಲ್ಪಸಂಖ್ಯಾತರ ಹಣಕಾಸು ಕಾರ್ಪೊರೇಶನ್‌ನಿಂದ ಅರ್ಹ ಅಲ್ಪಸಂಖ್ಯಾತ ಚಾಲಕರಿಗೆ  ಡ್ರೈವರ್ ಕಮ್ ಓನರ್ ಯೋಜನೆಯಡಿ ಕಾರು ತೆಗೆದುಕೊಳ್ಳಲು ಸಹಾಯಧನ ಒದಗಿಸುತ್ತಿದೆ. ಇತ್ತೀಚೆಗೆ ಅದರ ಕಾರ್ಯಕ್ರಮ ನಡೆದಿದ್ದನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ.  ಅಲ್ಪಸಂಖ್ಯಾತರ ಹಣಕಾಸು ನಿಗಮ ಮತ್ತು ಎಸ್‌ಬಿಐ ಮೂಲಕ ವಾಹನ ಖರೀದಿಗೆ ಹಣಕಾಸಿನ ನೆರವು ನೀಡುವ ಯೋಜನೆ ಇದಾಗಿದೆ.

ಇದಲ್ಲದೆ ತೆಲಂಗಾಣ ಸರ್ಕಾರವು ವಿಭಿನ್ನ ಅರ್ಹತಾ ಮಾನದಂಡಗಳೊಂದಿಗೆ ಹಲವಾರು ಸಮುದಾಯಗಳಿಗೆ ಕಾರು ಕೊಂಡುಕೊಳ್ಳಲು ಸಹಾಯ ಧನ ನೀಡುವ ಯೋಜನೆಗಳನ್ನು ಜಾರಿಗೊಳಿಸಿದೆ. ತೆಲಂಗಾಣ ಬುಡಕಟ್ಟು ಕಲ್ಯಾಣ ಇಲಾಖೆಯಿಂದ ಚಾಲಕ ಸಬಲೀಕರಣ ಕಾರ್ಯಕ್ರಮವನ್ನು ಸಹ ಜಾರಿಗೊಳಿಸಲಾಗಿದೆ. ಎಸ್‌ಸಿ/ಎಸ್‌ಟಿ/ಬಿಸಿ/ಅಲ್ಪಸಂಖ್ಯಾತ ಚಾಲಕರಿಗೆ ಉಬರ್ ಮೂಲಕ ಪ್ಲೇಸ್‌ಮೆಂಟ್ ನೆರವು ಮತ್ತು ಎಸ್‌ಸಿ/ಎಸ್‌ಟಿ/ಅಲ್ಪಸಂಖ್ಯಾತ ನಿಗಮಗಳ ಮೂಲಕ ವಾಹನಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ಜೊತೆಗೆ ತೆಲಂಗಾಣ ರಾಜ್ಯ ಕ್ರಿಶ್ಚಿಯನ್ (ಅಲ್ಪಸಂಖ್ಯಾತ) ಕಲ್ಯಾಣ ಇಲಾಖೆಯು ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ.

ತೆಲಂಗಾಣ ಸರ್ಕಾರದ ಚಾಲಕ ಸಬಲೀಕರಣ ಕಾರ್ಯಕ್ರಮವನ್ನು ವಿವಿಧ ಸಮುದಾಯಗಳಾದ್ಯಂತ ಜನರಿಗೆ ಒದಗಿಸಲಾಗಿದೆ. ಹಾಗಾಗಿ ಕೇವಲ ಮುಸ್ಲಿಮರಿಗೆ ಮಾತ್ರ ಕಾರುಗಳನ್ನು ನೀಡುತ್ತಿದೆ ಎಂಬುದು ಸುಳ್ಳು. ಮುಂದಿನ ತಿಂಗಳು ಚುನಾವಣೆ ಇರುವ ಕಾರಣದಿಂದ ತೆಲಂಗಾಣ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ಸುಳ್ಳು ಸುದ್ದಿ ಹರಿಬಿಡಲಾಗಿದೆ.


ಇದನ್ನೂ ಓದಿ: Fact Check: ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಮದುವೆಯಾಗಿದ್ದಾನೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *