ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ

ಕಳೆದ ನವೆಂಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕರ್ನಾಟಕದ ಯೋಧ ಕ್ಯಾ. ಪ್ರಾಂಜಲ್ ರವರ ಸಾವಿಗೆ ಇಡೀ ರಾಜ್ಯದ ಜನರು ಸಂತಾಪ ಸೂಚಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳು ಸಹ ಪ್ರಾಂಜಲ್‌ರವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿ 50 ಲಕ್ಷದಷ್ಟು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದು ತಡವಾಗುತ್ತಿದ್ದಂತೆ ಬಿಜಿಪಿ ಕಾರ್ಯಕರ್ತರು ಸೇರಿದಂತೆ ಹಲವು ಮಾಧ್ಯಮಗಳು ಸಹ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರನ್ನು ಟೀಕಿಸುತ್ತಿದ್ದಾರೆ.ಈಗ, ಕ್ಯಾ. ಪ್ರಾಂಜಲ್ ಯಾರು? ಯಾವಾಗ ಪರಿಹಾರ ನೀಡುತ್ತೇವೆ ಅಂತಾ ಘೋಷಿಸಿದ್ವಿ? ಎಂದು ಕೇಳುವ ಮೂಲಕ ಅವರನ್ನು ಅವಮಾನ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು. ಯೋಧರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಡಿಯೋ ಮೂಲಕ ಟೀಕಿಸಿದ್ದಾರೆ. ಫ್ಯಾಕ್ಟ್‌ಚೆಕ್: ಸಂಸದ ತೇಜಸ್ವಿ ಸೂರ್ಯರವರು ಅರ್ಧ ವಿಡಿಯೋ ಮಾತ್ರ ಹಂಚಿಕೊಂಡಿದ್ದಾರೆ. ಗದ್ದಲದಿಂದ ವರದಿಗಾರರ ಪ್ರಶ್ನೆ ಸರಿಯಾಗಿ ಕೇಳಿಲ್ಲ. ಆದ್ದರಿಂದ ಸಿದ್ದರಾಮಯ್ಯನವರು ಯಾರು, ಯಾವಾಗ ಕೊಡುತ್ತೇವೆ ಎಂದಿದ್ದೆವು, ಎಂದು ವಿಚಾರಿಸಿದ್ದಾರೆ. ನಂತರ ಪತ್ರಕರ್ತರ ಪ್ರಶ್ನೆ ಸರಿಯಾಗಿ ತಿಳಿದ ಬಳಿಕ ಸಿದ್ದರಾಮಯ್ಯನವರು ಪರಿಹಾರ ಕೊಡುತ್ತೇವೆ. 1 ಕೋಟಿ ಪರಿಹಾರ ಕೊಡಬೇಕಾದರೆ ಬೇರೆ ಎಲ್ಲಿಯಾದರೂ ಕೊಟ್ಟ ಆದೇಶ ಪ್ರತಿ ಕೊಡಿ ಎಂದು ಕೇಳಿದ್ದಾರೆ. ಜೊತೆಗೆ ಡಿ.4 ರಂದು 50 ಲಕ್ಷ ಪರಿಹಾರವನ್ನು ಕ್ಯಾ. ಪ್ರಾಂಜಲ್‌ರವರ ಕುಟುಂಬಕ್ಕೆ ನೀಡಿದ್ದಾರೆ.ತೇಜಸ್ವಿ ಸೂರ್ಯರವರು ಸಿದ್ದರಾಮಯ್ಯನವರನ್ನು ಟೀಕಿಸುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವು ಮಾಧ್ಯಮಗಳು ಈ ಸುದ್ದಿಯನ್ನು ಬಿತ್ತರಿಸಿವೆ. ತೇಜಸ್ವಿ ಸೂರ್ಯರವರ ವಿಡಿಯೊವಿಗೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ” “ತೇಜಸ್ವಿ ಸೂರ್ಯ ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ. ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ ಅವರ ಕುಟುಂಬಕ್ಕೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಯೋಧರ ಸಾವನ್ನು ಮುಂದೆ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವ ಮತ್ತು ತಮ್ಮ ವಿಡಿಯೋವನ್ನು ತಿರುಚಿ ಸುಳ್ಳು ಸುದ್ದಿಯನ್ನು ಹರಡಿದ ತೇಜಸ್ವಿ ಸೂರ್ಯರವರು ತನಗೆ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಹಾಗಾಗಿ ತೇಜಸ್ವಿ ಸೂರ್ಯರವರ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: Fact Check | ಭಾರತವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ವ್ಯಂಗ್ಯವಾಡಿ ಪ್ರಶ್ನಿಸಿದೆ ಎಂಬುದು ಸುಳ್ಳು


ವಿಡಿಯೋ ನೋಡಿ: ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *