ಭಾರತದ ಅನೇಕ ದೇವಸ್ಥಾನಗಳು, ಮಸೀದಿ, ದರ್ಗಾ ಮತ್ತು ಚರ್ಚ್‌ಗಳಿಗೆ ಧರ್ಮಗಳ ಹಂಗಿಲ್ಲದೆ ಜನ ಭಾವೈಕ್ಯತೆಯಿಂದ, ಭಕ್ತಿ ಮತ್ತು ಗೌರವದಿಂದ ನಡೆದುಕೊಳ್ಳುವ ಪದ್ದತಿ ಅನಾದಿ ಕಾಲದಿಂದಲೂ ಉಳಿದುಕೊಂಡು ಬಂದಿದೆ. ಅನೇಕ ಹಿಂದು ದೇವಸ್ಥಾನಗಳಿಗೆ ಮುಸ್ಲೀಮರು ನಡೆದುಕೊಳ್ಳುವುದು ಮತ್ತು ದರ್ಗಾಗಳಿಗೆ ಹಿಂದು ಧರ್ಮದ ಭಕ್ತರು ನಡೆದುಕೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಆದರೆ ಇಂತಹ ಹಿಂದು-ಮುಸ್ಲಿಂ ಸಾಮರಸ್ಯ ಬೆಸೆಯುವ ದೇವಸ್ಥಾನಗಳ ಕುರಿತು, ದರ್ಗಾಗಳ ಕುರಿತು ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ.
ಈಗ, ಅಲ್ಲಾ ಒಬ್ಬನೇ ದೇವರು. ಹಾಗಾಗಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಎರುಮೇಲಿಯಲ್ಲಿರುವ ವಾವರ್ ಮಸೀದಿಯೊಳಗಿನ ಬೋರ್ಡ್ ಹೇಳುತ್ತದೆ. ಹಾಗಾದರೆ ಅಯ್ಯಪ್ಪ ಭಕ್ತರು ಈ ಮಸೀದಿಗೆ ಹೋಗಿ ಹುಂಡಿಗೆ ಹಣ ಹಾಕುವುದು ಏಕೆ? ಎಂಬ ಬರಹದ ಸಂದೇಶವೊಂದು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಕೇರಳದ ಎರುಮೇಲಿಯಲ್ಲಿರುವ ವಾವರ್ಪಲ್ಲಿ ಅಥವಾ ವಾವರ್ ಜುಮಾ ಮಸೀದಿ ಶಬರಿಮಲೆಗೆ ಹೋಗುವ ಹಾದಿಯಲ್ಲಿರುವ ಹಿಂದು-ಮುಸ್ಲಿಂ ಭಾವೈಕ್ಯತೆ ಸಾರುವ ಪ್ರಸಿದ್ಧ ಧಾರ್ಮೀಕ ಕೇಂದ್ರ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿದಿಗೆ ಹೋಗುವ ಯಾತ್ರಿಗಳೆಲ್ಲರೂ ಬೆಟ್ಟ ಹತ್ತು ಮೊದಲು 40 ಕಿಲೋಮಿಟರ್ ಮುಂಚಿತವಾಗಿ ಸಿಗುವ ಈ ಮಸೀದಿಗೆ ಭೇಟಿ ನೀಡಿ ಆಶಿರ್ವಾದ ಪಡೆದು ಮುಂದೆ ಸಾಗುವ ಪದ್ದತಿ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.ವಾವರ್ ಅಥವಾ ವಾವರಸ್ವಾಮಿ ಎಂಬುವವರು ಅಯ್ಯಪ್ಪಸ್ವಾಮಿಯ ಸಮಕಾಲಿನಾ ಭಕ್ತರಾಗಿದ್ದು ಬೆಟ್ಟಗಳೊಳಗಿನ ಯುದ್ಧದಲ್ಲಿ ಅಯ್ಯಪ್ಪನಿಗೆ ಸಹಾಯ ಮಾಡುತ್ತಿದ್ದರು ಎಂಬ ನಂಬಿಕೆ ಇದೆ. ಭಗವಾನ್ ಅಯ್ಯಪ್ಪ ತನ್ನ ಪ್ರೀತಿಯ ಸ್ನೇಹಿತ ವಾವರ್ ಗಾಗಿ ಒಂದು ಸಣ್ಣ ಪವಿತ್ರ ಸ್ಥಳವನ್ನು ನಿರ್ಮಿಸಿದ್ದನು. ಇದು ಆರಂಭದಲ್ಲಿ ಹುಲ್ಲಿನ ಗುಡಿಸಲಾಗಿತ್ತು, ನಂತರ ಪಂದಳಂ ರಾಜನ ಕನಸಿನಲ್ಲಿ ಅಯ್ಯಪ್ಪನು ಕಾಣಿಸಿಕೊಂಡು ವಾವರ್ ಗೆ ಮಸೀದಿಯನ್ನು ನಿರ್ಮಿಸಲು ಸೂಚನೆ ನೀಡಿದನು ಎಂಬ ನಂಬಿಕೆಯಿದೆ. ವಾವರ್ ಮಸೀದಿಯಲ್ಲಿ ಮಹಾನ್ ಯೋಧನ ಶ್ರೇಷ್ಠತೆಯನ್ನು ಸಂಕೇತಿಸುವ ಹಳೆಯ ಖಡ್ಗವನ್ನು ಸಹ ನೀವು ನೋಡಬಹುದು. ಈ ಮಸೀದಿಯ ಇನ್ನೋಂದು ವಿಶೇಷವೆಂದರೆ ಶಬರಿಮಲೆಗೆ ಹೋಗುವ ಭಕ್ತರು ತಮ್ಮ ಆಧ್ಯಾತ್ಮಿಕ ನೃತ್ಯವನ್ನು ಇದೇ ವಾವರ್ ಮಸೀದಿಯಿಂದ ಆರಂಭಿಸುತ್ತಾರೆ. ಭಕ್ತಿಯಿಂದ ಅಯ್ಯಪ್ಪನನ್ನು ನೆನದು ಹಾಡುತ್ತಾ ಕುಣಿಯುತ್ತಾ ತಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಗುಣಗಳನ್ನು ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೆ ಅಲಪ್ಪುಳದ ಅರ್ತುಂಕಲ್ ಸೇಂಟ್ ಆಂಡ್ರ್ಯೂಸ್ ಬೆಸಿಲಿಕಾ ಚರ್ಚ್‌ನ ಕೊಳದಲ್ಲಿ ಸ್ನಾನ ಮಾಡಿ ಭಕ್ತರು ತಮ್ಮ ಯಾತ್ರೆಯನ್ನು ಮುಂದುವರೆಸುವ ರೂಢಿಯೂ ಸಹ ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಾಗಾಗಿ ಹಿಂದು-ಮುಸ್ಲಿಂ ಮತ್ತು ಕ್ರೈಸ್ತ್ರರನ್ನು ಒಗ್ಗೂಡಿಸುವ ಈ ವಿಶಿಷ್ಟ ಧಾರ್ಮೀಕ ಪದ್ದತಿ ಭಾರತದಲ್ಲಿ ಬೇರೊಂದಿಲ್ಲ.ಇನ್ನೂ ವೈರಲ್ ಪೋಟೋದಲ್ಲಿ ಇರುವ ಆಯತ್ ಉಲ್ ಕುರ್ಸಿ ಕುರಾನ್‌ನಲ್ಲೇ ಅತ್ಯಂತ ಪ್ರಸಿದ್ದ ಸಾಲುಗಳಾಗಿದ್ದು, ಇದರಲ್ಲಿ ಎಲ್ಲಿಯೂ ಅನ್ಯದೇವರನ್ನು ಪೂಜಿಸಬೇಡಿ ಎಂದು ಉಲ್ಲೇಖಿಸಿಲ್ಲ. ಅದರ ಪೂರ್ಣ ವಿವರ ಈ ಕೆಳಗಿನಂತಿದೆ.
ಅಧ್ಯಾಯ: 2 ಶ್ಲೋಕ: 255
ٱللَّهُ لَآ إِلَٰهَ إِلَّا هُوَ ٱلْحَىُّ ٱلْقَيُّومُ ۚ لَا تَأْخُذُهُۥ سِنَةٌۭ وَلَا نَوْمٌۭ ۚ لَّهُۥ مَا فِى ٱلسَّمَٰوَٰتِ وَمَا فِى ٱلْأَرْضِ ۗ مَن ذَا ٱلَّذِى يَشْفَعُ عِندَهُۥٓ إِلَّا بِإِذْنِهِۦ ۚ يَعْلَمُ مَا بَيْنَ أَيْدِيهِمْ وَمَا خَلْفَهُمْ ۖ وَلَا يُحِيطُونَ بِشَىْءٍۢ مِّنْ عِلْمِهِۦٓ إِلَّا بِمَا شَآءَ ۚ وَسِعَ كُرْسِيُّهُ ٱلسَّمَٰوَٰتِ وَٱلْأَرْضَ ۖ وَلَا يَـُٔودُهُۥ حِفْظُهُمَا ۚ وَهُوَ ٱلْعَلِىُّ ٱلْعَظِيمُ
ಅಲ್ಲಾಹನ ಹೊರತು ಅನ್ಯದೇವನಿಲ್ಲ. ಆತನು ಚಿರಂಜೀವಿ. ಸಮಸ್ತ ವಿಶ್ವದ ಸಮರ್ಥ ನಿಯಂತ್ರಕ. ಆತನಿಗೆ ತೂಕಡಿಕೆಯಿಲ್ಲ, ನಿದ್ದೆಯೂ ಇಲ್ಲ. ಭೂಮ್ಯಾಕಾಶಗಳಲ್ಲಿರುವ ಸರ್ವದರ ಸರ್ವಾಧಿಪತಿ, ಆತನ ಅಪ್ಪಣೆ ವಿನಹ ಆತನಲ್ಲಿ ಶಿಫಾರಸು ಮಾಡುವ ಸಮರ್ಥ ಯಾರೂ ಇಲ್ಲ ¹³⁶. ಸೃಷ್ಟಿಗಳ ಪ್ರತ್ಯಕ್ಷ – ಪರೋಕ್ಷಗಳನ್ನೆಲ್ಲ ಬಲ್ಲವನು. ಆತನ ಜ್ಞಾನದ ಪ್ರತಿಯೊಂದು ಅಂಶವೂ ಸೃಷ್ಟಿಗಳಿಗೆ ನಿಗೂಡ, ಆತನು ತಿಳಿಸಿಕೊಡ ಲಿಚ್ಚಿಸಿದ್ದು ಹೊರತು. ಆತನ ಕುರ್ಸೀ¹³⁷ ಭೂಮ್ಯಾಕಾಶಗಳ ವ್ಯಾಪ್ತಿಯನ್ನು ಮೀರಿಸಿದೆ. ಆಕಾಶ ಭೂಮಿಗಳ ರಕ್ಷಣೆ ಆತನಿಗೆ ಭಾರವಲ್ಲ, ಅವನು ಪರಮೋನ್ನತನು, ಪರಮ ಗಣ್ಯನು.ಆದ್ದರಿಂದ ಹರಿದಾಡುತ್ತಿರುವ ವಾಟ್ಸಾಪ್ ಸಂದೇಶ ಕೋಮು ಸೌಹಾರ್ದ ಹಾಳು ಮಾಡುವ ಸಂದೇಶವಾಗಿದ್ದು ಮತ್ತು ತಪ್ಪು ಪ್ರತಿಪಾದನೆಯಾಗಿದೆ. ಇಂತಹ ಸಂದೇಶಗಳನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸಿ ಹಂಚಿಕೊಳ್ಳಿ.
ಇದನ್ನು ಓದಿ: Fact Check: ತಮಿಳುನಾಡಿನ DMK ಸರ್ಕಾರವು ಪ್ರಾಚೀನ ಶಿವಲಿಂಗವನ್ನು ದೇವಾಲಯದಿಂದ ತೆರವುಗೊಳಿಸಿದೆ ಎಂಬುದು ಸುಳ್ಳು
ವಿಡಿಯೋ ನೋಡಿ: Spider | ವ್ಯಕ್ತಿಯೊಬ್ಬನ ಬಾಯಿಯಲ್ಲಿ ಮತ್ತು ಹಿಮ್ಮಡಿಯಲ್ಲಿ ಜೇಡದ ಮೊಟ್ಟೆಗಳು ಪತ್ತೆಯಾಗಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.