Fact Check | ಡಾಕ್ಟರ್ ಕಣ್ಣು ಮುಚ್ಚಿಕೊಂಡು ಚಿಕಿತ್ಸೆ ಕೊಡ್ಲಿ ಎಂಬುದು ಕಾಲ್ಪನಿಕ ಸಂದರ್ಶನ

ಮುಸ್ಲಿಂ ಮಹಿಳೆಯರಿಗೆ ಧರ್ಮವೇ ಮುಖ್ಯ ಹೊರತು ಬೇರೆಯಲ್ಲ. ಅವರು ಯಾರಿಗೂ ತಮ್ಮ ಮುಖ ತೋರಿಸುವುದಿಲ್ಲ. ಉದಾಹರಣೆಗೆ ಈ ವಿಡಿಯೋ ನೋಡಿ. ಸಂದರ್ಶನಕಾರನೊಬ್ಬ ಮುಸ್ಲಿಂ ಮಹಿಳೆಗೆ ನಿಮಗೆ ಹಲ್ಲಿನ ಸಮಸ್ಯೆ ಕಾಣಿಸಿಕೊಂಡಾಗ ದಂತ ವೈದ್ಯರ ಬಳಿಗೆ ಹೋಗಬೇಕಾದರೆ ಅವರು ನಿಮ್ಮ ಮುಖವನ್ನು ತೋರಿಸಬೇಕಲ್ಲವೆ? ಆಗ ನೀವು ಬುರ್ಕಾ ತೆಗೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಆ ಮುಸ್ಲಿಂ ಮಹಿಳೆ ನಾನು ಬುರ್ಕಾ ತೆಗೆಯುತ್ತೇನೆ. ಆದರೆ ವೈದ್ಯರು ಕಣ್ಣು ಮುಚ್ಚಿ ನನಗೆ ಚಿಕಿತ್ಸೆ ಕೊಡಬೇಕು. ಏಕೆಂದರೆ ನಮಗೆ ಧರ್ಮವೇ ಮುಖ್ಯ ಎಂದಿದ್ದಾರೆ ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ನಿಜವಾಗಿ ನಡೆದ ಸಂದರ್ಶನವೆಂದು ಭಾವಿಸಿದ್ದಾರೆ.

ಫ್ಯಾಕ್ಟ್‌ಚೆಕ್‌

ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ಕಾಲ್ಪನಿಕ ಸಂದರ್ಶನ ಪೂರ್ವ ನಿಯೋಜಿತವಾಗಿದೆ ಎಂದು ತಿಳಿದು ಬಂದಿದೆ. 18 ಫೆಬ್ರವರಿ 2022 ರಂದು ಟಿವಿ ವಿಕ್ರಮ ಯುಟ್ಯೂಬ್‌ ಚಾನಲ್‌ನಲ್ಲಿ ಇದರ ಪೂರ್ಣ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ. ಅದರ ಆರಂಭದಲ್ಲಿಯೇ ಈ ಸಂದರ್ಶನ ಕಾಲ್ಪನಿಕವಾದುದು ಎಂದು ಬರೆಯಲಾಗಿದೆ.

ಇನ್ನು ಈ ಸಂದರ್ಶನ ನಡೆಸಿದ್ದು ಕಿರಿಕ್‌ ಕೀರ್ತಿ ಮತ್ತು ಸಂದರ್ಶನ ಕೊಟ್ಟ ಮಹಿಳೆ ಸಹ ಅದೇ ಟಿವಿ ವಿಕ್ರಮ ಸಂಸ್ಥೆ ಉದ್ಯೋಗಿ ಮುಮ್ತಾಜ್‌ ಆಗಿದ್ದಾರೆ. ಅಂದರೆ ಅದೇ ಸಂಸ್ಥೆಯ ಉದ್ಯೋಗಿ ಬುರ್ಕಾ ಧರಿಸಿ ಸಾಮಾನ್ಯ ಮುಸ್ಲಿಂ ಮಹಿಳೆಯಂತೆ ಮಾತನಾಡಿದ್ದಾರೆ.

ಈ ವಿಡಿಯೋದ ಆರಂಭದ ಡಿಸ್ಕ್ಲೈಮರ್‌ ಅನ್ನು ಹಾಕಲಾಗಿದ್ದು ಅದರಲ್ಲಿ “ಇದು ಶಿಕ್ಷಣ ಪಡೆಯೋ ಸಮಯದಲ್ಲಿ ಮಕ್ಕಳು ಧರ್ಮವೇ ದೊಡ್ಡದು ಅಂತ ತಮ್ಮ ಭವಿಷ್ಯ ನಾಶ ಮಾಡಿಕೊಳ್ತಿರೊ ಸಂದರ್ಭದಲ್ಲಿ ಕೆಲವರಿಗೆ ಒಂದಷ್ಟು ಮೆಸೆಜ್‌ ಕೊಡೋ ಪ್ರಯತ್ನ, ಇದು ಕಾಲ್ಪನಿಕ ಸಂದರ್ಶನ” ಎಂದು ಉಲ್ಲೇಖಿಸಲಾಗಿದೆ. ಹಾಗೂ ಈ ವಿಡಿಯೋವಿನ ಡಿಸ್ಕ್ರಿಪ್ಷನ್‌ನಲ್ಲಿಯೂ ಇದನ್ನೇ ಉಲ್ಲೇಖಿಸಲಾಗಿದೆ.

ಹಾಗಾಗಿ ಇದೊಂದು ಪೂರ್ವ ನಿಯೋಜಿತ ಸಂದರ್ಶನವಾಗಿದ್ದು. ನಿಜವಾದ ಸಂದರ್ಶನವಲ್ಲ. ವಿಡಿಯೋದಲ್ಲಿರುವುದು ನಿಜವಾದ ಸಾಮಾನ್ಯ ಮುಸ್ಲೀಂ ಮಹಿಳೆಯಲ್ಲ. ಆದರೆ ಮುಸ್ಲಿಮರ ಮೇಲೆ ಅಪಪ್ರಚಾರ ಮಾಡಲು ಈ ವಿಡಿಯೋ ಹರಿಬಿಡಲಾಗಿದೆ.

Leave a Reply

Your email address will not be published. Required fields are marked *