10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ

ಇಂದಿಗೂ ಭಾರತದ ಗ್ರಾಮೀಣ ಭಾಗಗಳಲ್ಲಿ ತಮ್ಮ ದಿನನಿತ್ಯದ ಅಡುಗೆಗೆ ಸೌದೆಗಳನ್ನು, ಬೆರಣಿಯನ್ನು ಬಳಸುವುದು ರೂಢಿಯಲ್ಲಿದೆ. ಆದರೆ ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಗೃಹ ಮಾಲಿನ್ಯವನ್ನು ಸೇವಿಸಿ ಶ್ವಾಸಕೋಶ ಸಂಬಂಧಿ ಆನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರ ಪ್ರಮಾಣವೇ ಅಧಿಕವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoP&NG) ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು “LPGಯಂತಹ ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಪ್ರಾರಂಭಿಸಿತು.” ಈ ಯೋಜನೆಯೂ ಮಾರ್ಚ್ 2020 ರ ವೇಳೆಗೆ ಬಡ ಕುಟುಂಬಗಳಿಗೆ 8 ಕೋಟಿ LPG ಸಂಪರ್ಕಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಆದರೆ ಸೆಪ್ಟೆಂಬರ್ 7, 2019 ರಂದು ಒಂದು ವರ್ಷ ಮುಂಚಿತವಾಗಿ ಈ ಗುರಿಯನ್ನು ಪೂರೈಸಲಾಗಿದೆ ಎಂದು ಸರ್ಕಾರ ಹೇಳಿದೆ.

ಈಗ ಈ ಉಜ್ವಲ ಯೋಜನೆಗೆ ಸಂಬಂಧಿಸಿದಂತೆ ಹಲವು ಸುಳ್ಳು ಪ್ರತಿಪಾದನೆಗಳು ಹರಿದಾಡುತ್ತಿವೆ. ಈಗ, ” ಒಂದು ದಿನ ಭಾರತೀಯರು ಇಲ್ಲಿ ಏನು ಸಾಧಿಸಲಾಗಿದೆ ಎಂದು ಅರಿತುಕೊಳ್ಳುತ್ತಾರೆ.  5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣಕ್ಕೆ ಅತಿದೊಡ್ಡ ಕಾರಣವಾಗಿರುವ ಗೃಹ ಮಾಲಿನ್ಯವು ವಾರ್ಷಿಕ 86 ಮಿಲಿಯನ್ ಆರೋಗ್ಯಕರ ಜೀವನ ವರ್ಷಗಳ ನಷ್ಟಕ್ಕೆ ಕಾರಣವಾಗಿದೆ. ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯೂ ತನ್ನ 10 ಕೋಟಿ ಸಂಪರ್ಕಗಳ ಮೂಲಕ, ವಾರ್ಷಿಕವಾಗಿ 1,50,000 ಜೀವಗಳನ್ನು ನೇರವಾಗಿ ಉಳಿಸಿದೆ. ಎಂದು ಆನಂದ್ ರಂಗನಾಥನ್ ಎಂಬ ಬಲಪಂಥೀಯ ಲೇಖಕರೊಬ್ಬರು ತಮ್ಮ ಟ್ವಿಟರ್(X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಇದನ್ನು ರೀ ಟ್ವಿಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಸಹ ಸೇರಿಸಿದ್ದಾರೆ.

ಫ್ಯಾಕ್ಟ್‌ಚೆಕ್‌: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ 2019ರಲ್ಲಿ ಕನಿಷ್ಠ 1.5 ಲಕ್ಷ ಅಕಾಲಿಕ ಸಾವನ್ನಪ್ಪುವುದು ಕಡಿಮೆಯಾಗಿದೆ ಮತ್ತು  13% ಗೃಹ ಮಾಲಿನ್ಯ ತಗ್ಗಿದೆ  ಎಂದು ಉಜ್ವಲ ಕಾರ್ಯಕ್ರಮದ ಮೊದಲ ಸ್ವತಂತ್ರ ಪರಿಣಾಮ ಮೌಲ್ಯಮಾಪನ ತಿಳಿಸಿದೆ. ಆದರೆ ಉಜ್ವಲ ಯೋಜನೆಯ ಬಹುತೇಕ ಫಲಾನುಭವಿಗಳು (9.6% ರಷ್ಟು) ಗ್ಯಾಸ್ ರೀಫಿಲ್ ಮಾಡಿಸಿಲ್ಲ, 11.3%ರಷ್ಟು ಜನ ಮಾತ್ರ ಎರಡನೇ ಬಾರಿಗಷ್ಟೇ ರೀಫೀಲ್ ಮಾಡಿಸಿದ್ದಾರೆ. ಶೇ. 56.5% ಫಲಾನುಭವಿಗಳು 4 ಅಥವಾ ಅದಕ್ಕಿಂತ ಕಡಿಮೆ ಬಾರಿ ರಿಫೀಲ್ ಮಾಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಗ್ಯಾಸ್ ಬೆಲೆಯ ಹೆಚ್ಚಳ, ಕಡಿಮೆ ಸಬ್ಸಿಡಿ (300 ರೂ) ಅಥವಾ ಸಬ್ಸಿಡಿ ಹಣ ಬಾರದೇ ಇರುವುದು, ಉಚಿತವಾಗಿ ಸೌದೆಗಳು ಸಿಗುವುದು ಮತ್ತು ಕೆಲವು ಗ್ರಾಮೀಣ ಭಾಗದ ಮಹಿಳೆಯರಿಗೆ ಗ್ಯಾಸ್ ಬಳಕೆ ತಿಳಿಯದೇ ಇರುವುದು ಇದಕ್ಕೆ ಕಾರಣವಾಗಿವೆ.

ಇನ್ನೂ, ಪ್ರಸ್ತುತ ನರೇಂದ್ರ ಮೋದಿ ಸರ್ಕಾರವು ಸಬ್ಸಿಡಿ ದರವನ್ನು 200 ರಿಂದ 300 ರೂಪಾಯಿಗೆ ಹೆಚ್ಚಿಸಿದ್ದರೂ ಸಹ ಜನರ ಖಾತೆಗೆ ಸಮರ್ಪಕವಾಗಿ ತಲುಪುತ್ತಿಲ್ಲ. ನೇರ ಲಾಭ ವರ್ಗಾವಣೆಯ ಅಡಿಯಲ್ಲಿ, ಈಗ ಜನರು ಮೊದಲು ಸಿಲಿಂಡರ್ ಅನ್ನು ಮರುಪೂರಣ(ರೀಫಿಲ್) ಮಾಡಿಸಬೇಕು ಮತ್ತು ನಂತರ ಸಬ್ಸಿಡಿ ಮೊತ್ತವು ಅವರ ಬ್ಯಾಂಕ್ ಖಾತೆಗೆ ಬರುತ್ತದೆ. 1 ಸಾವಿರದಷ್ಟಿರುವ LPG ಸಿಲಿಂಡರ್ ಅನ್ನು ಪೂರ್ಣ ವೆಚ್ಚದಲ್ಲಿ ರೀಫಿಲ್ ಮಾಡಿಸುವುದು ಬಡ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ ಎಂದು ದ ಸ್ಕ್ರಾಲ್(The Scroll) ವರದಿ ಮಾಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು 2023-2024 ರ ಬಜೆಟ್ ಮಂಡಿಸುವಾಗ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ 9.6 ಕೋಟಿ LPG (ದ್ರವೀಕೃತ ಪೆಟ್ರೋಲಿಯಂ ಅನಿಲ ಅಥವಾ ಅಡುಗೆ ಅನಿಲ) ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಫೆಬ್ರವರಿ 2, 2023 ರವರೆಗೆ PMUY ಯೋಜನೆಯಡಿ 9.58 ಕೋಟಿಗೂ ಹೆಚ್ಚು ಅನಿಲ ಸಂಪರ್ಕಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ PMUY ವೆಬ್ಸೈಟ್‌ನ ಅಂಕಿ ಅಂಶಗಳು ತೋರಿಸುತ್ತವೆ. ಆದಾಗ್ಯೂ, 2021-22ರಲ್ಲಿ 9.6% ಫಲಾನುಭವಿಗಳು LPG ಸಿಲಿಂಡರ್ ಮರುಪೂರಣವನ್ನು ತೆಗೆದುಕೊಂಡಿಲ್ಲ. ಇನ್ನೂ 2023-24ರ ಕೇಂದ್ರ ಬಜೆಟ್‌ನಲ್ಲಿ “ಬಡ ಕುಟುಂಬಗಳಿಗೆ LPG ಸಂಪರ್ಕಕ್ಕಾಗಿ ಬಜೆಟ್ ಹಂಚಿಕೆ 0.01 ಕೋಟಿ ರೂ, ಇದು ಬಜೆಟ್ ಅಂದಾಜು 800 ಕೋಟಿ ರೂ.ಗಳು ಮತ್ತು 2022-23ರಲ್ಲಿ 8,010 ಕೋಟಿ ರೂ.ಗಳ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ 99.99% ರಷ್ಟು ಕಡಿಮೆಯಾಗಿದೆ. 2022-23ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಮನೆಗಳಿಗೆ ಸಬ್ಸಿಡಿಯಾಗಿ ನೇರ ಲಾಭ ವರ್ಗಾವಣೆಯ ಬಜೆಟ್ 180 ಕೋಟಿ ರೂ.ಗಳಲ್ಲಿ ಬದಲಾಗದೆ ಉಳಿದಿದೆ, ಆದರೆ 2022-23 ರ 4,000 ಕೋಟಿ ರೂ.ಗಳ ಬಜೆಟ್ ಅಂದಾಜಿಗೆ ಹೋಲಿಸಿದರೆ ಇದು 95.5% ರಷ್ಟು ಕುಸಿದಿದೆ.

ಸಧ್ಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯೂ ಗ್ರಾಮೀಣ ಭಾಗಗಳಿಗೆ ಇನ್ನಷ್ಟು ತಲುಪುವ ಅಗತ್ಯವಿದೆ ಮತ್ತು ದಿನಬಳಕೆಯ LPG ಸಿಲಿಂಡರ್ ಬೆಲೆಯನ್ನು ಕಡಿಮೆಗೊಳಿಸಿ, ರೀಫಿಲಿಂಗ್‌ ಗಾಗಿ ಸಬ್ಸಿಡಿ ಹಣವನ್ನು ನೀಡುವ ಅಗತ್ಯವಿದೆ. ಆದ್ದರಿಂದ ಉಜ್ವಲ ಯೋಜನೆಯ ಕುರಿತು ಆನಂದ್ ರಂಗನಾಥನ್ ಹೇಳಿರುವ ಮೇಲಿನ ಹೇಳಿಕೆ ಅರ್ಧ ಸತ್ಯದಿಂದ ಕೂಡಿದೆ.


ಇದನ್ನು ಓದಿ: Fact Check | ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಕಪಿಲ್‌ ಸಿಬಲ್‌ ಹೇಳಿಲ್ಲ


ವಿಡಿಯೋ ನೋಡಿ: ಖರ್ಗೆಯವರು ಭಾಷಣ ಮಾಡುವಾಗ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ | Mallikarjun Kharge


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *