AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು INDIA ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ದೇಶಾದ್ಯಂತ ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಖರ್ಗೆಯವರು ಭಾಷಣ ಮಾಡುವಾಗ ಪ್ರೇಕ್ಷಕರು ಮೋದಿ ಮೋದಿ ಎಂಬ ಘೋಷಣೆ ಕೂಗಿ, ಹಿಂಸೆ ನೀಡಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ವೈರಲ್ ಮಾಡಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರೆ ಖರ್ಗೆಯವರಿಗೆ ಗೌರವ ಕೊಡದೇ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ.
ಫ್ಯಾಕ್ಟ್ ಚೆಕ್
ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಿದಾಗ ಇದೇ ರೀತಿಯ ಹಲವಾರು ವಿಡಿಯೋಗಳು ಕಂಡುಬಂದಿವೆ. ANI ಭಾರತ್ ಯೂಟ್ಯೂಬ್ ಚಾನೆಲ್‌ನಲ್ಲಿ ಖರ್ಗೆಯವರು ಇದೇ ರೀತಿ ಮಾತನಾಡಿರುವ ಪೂರ್ಣ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅದರ ವಿಡಿಯೋ ವಿವರಣೆಯಲ್ಲಿ ಇದು ತೆಲಂಗಾಣದ ಕಲ್ವಕುರ್ತಿಯಲ್ಲಿ ನವೆಂಬರ್ 26ರಂದು ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ವಿಡಿಯೋ ಎಂದು ಬರೆಯಲಾಗಿದೆ.
ANI ಭಾರತ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾದ ಮೂಲ ವಿಡಿಯೋದಲ್ಲಿ ಎಲ್ಲಿಯೂ ಪ್ರೇಕ್ಷಕರು ಮೋದಿ ಮೋದಿ ಎಂದು ಕೂಗಿಲ್ಲ. ಕೆಲವು ಪ್ರೇಕ್ಷಕರು ಜೋರಾಗಿ ಮಾತನಾಡಿದಾಗ ಸಿಟ್ಟಿಗೆದ್ದ ಖರ್ಗೆಯವರು ಕೇಳುವುದಿದ್ದರೆ ಕೇಳಿ, ಇಲ್ಲದಿದ್ದರೆ ಹೋಗಿ ಎಂದು ಗದರಿದ್ದಾರೆ. ಈ ಕುರಿತು ಜನಸತ್ತಾ, ಹಿಂದೂಸ್ತಾನ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡುವಾಗ ಮೋದಿ ಮೋದಿ ಎಂದು ಕೂಗಿರುವ ಬೇರೆಯ ಆಡಿಯೋ ಸೇರಿಸಿ ಎಡಿಟ್ ಮಾಡಿ ಸುಳ್ಳು ಹರಡಲಾಗಿದೆ.
ಇದರ ಫ್ಯಾಕ್ಟ್ ಚೆಕ್ ವಿಡಿಯೋ ನೋಡಿ
ಇದನ್ನೂ ಓದಿ: Fact Check | ನರೇಗಾ ಯೋಜನೆಯ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ನಕಲಿ ವೆಬ್‌ಸೈಟ್ ಲಿಂಕ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.