Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ

ಟಿವಿ ವಿಕ್ರಮ ಚಾನಲ್‌ನ ನಿರೂಪಕಿ ಸೌಮ್ಯರವರು ರಾಮಮಂದಿರ ಉದ್ಘಾಟನೆ ಮೌಲಾನ ಹೇಳಿಕೆ.. ಬಾಂ*ಬ್ ಹಾಕ್ತಾರಾ..? ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ “ದೇಶಾದ್ಯಂತೆ ಜ. 22 ರಿಂದ 25 ರವರೆಗೆ ಮುಸಲ್ಮಾನರು ರೈಲು, ಬಸ್‌ಗಳಲ್ಲಿ ಓಡಾಡಬೇಡಿ, ಮನೆಯಲ್ಲಿಯೇ ಇರಿ ಎಂದು AIUDF ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.”

“ಇದರ ಅರ್ಥ ಏನು? ಗೋದ್ರಾ ಮಾದರಿ ರೈಲಿನಲ್ಲಿ ಬಾಂಬ್‌ ಇಡೋದಕ್ಕೆ ಪ್ಲಾನ್‌ ಮಾಡಿದ್ದಾರಾ? ಅಜ್ಮಲ್‌ ಕಸಬ್‌ ರೀತಿ ಸಿಕ್ಕ ಸಿಕ್ಕ ಹಿಂದೂಗಳನ್ನು ಗುಂಡಿಟ್ಟು ಕೊಲ್ಲಲು ಪ್ಲಾನ್‌ ಮಾಡಿದ್ದಾರಾ?” ಎಂದು ಇಡೀ ಮುಸಲ್ಮಾನ ಸಮುದಾಯದ ಬಗ್ಗೆ ಅನವಶ್ಯಕ ಅನುಮಾನ ಮೂಡಿಸುವಂತೆ AIUDF ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿಕೆಯನ್ನೇ ತಿರುಚಿ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.”

ಫ್ಯಾಕ್ಟ್‌ಚೆಕ್‌

ಟಿವಿ ವಿಕ್ರಮದ ಸೌಮ್ಯ ಅವರ ವಿಡಿಯೋವನ್ನು ಗಮನಿಸಿದ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಈ ವಿಡಿಯೋದ ಕುರಿತು ಸತ್ಯ ಶೋಧನೆಗೆ ಮುಂದಾಯಿತು. ಈ ವೇಳೆ ತಮ್ಮ ವಿಡಿಯೋದಲ್ಲಿ ಟಿವಿ ವಿಕ್ರಮ ನಿರೂಪಕಿ ಸೌಮ್ಯ ಮಾತನಾಡುವಾಗ ಅವರ ಎಡಬದಿಯಲ್ಲಿ ಪಬ್ಲಿಕ್‌ ಟಿವಿ ವರದಿಯ ಶೀರ್ಷಿಕೆ ಕಂಡು ಬಂದಿದೆ. ಇದನ್ನೇ ಆಧಾರವಾಗಿರಿಸಿಕೊಂಡು, ಆ ವರದಿಯನ್ನು ಪರಿಶೀಲಿಸಲಾಯಿತು. ಅದರಲ್ಲಿ “ಮುಸ್ಲಿಂ ಸಹೋದರರ ಹಿತಾಸಕ್ತಿ ಮತ್ತು ದೇಶದ ಶಾಂತಿಗಾಗಿ ಮುಸ್ಲಿಮರು ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಮತ್ತು ಈ ಅವಧಿಯಲ್ಲಿ ಮನೆಯಲ್ಲೇ ಇರುವುದು ಸೂಕ್ತ ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ” ಎಂದು ಬರೆಯಲಾಗಿದೆ.

” ಭಾರತದಾದ್ಯಂತ ಸ್ವಯಂಸೇವಕರು ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಯುವಕರಿರುವ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಒಂದೆರಡು ಮುಸ್ಲಿಮರು ಸಿಕ್ಕಿಹಾಕಿಕೊಂಡರೆ ಸಮಸ್ಯೆಯಾಗಬಹುದು. ಇದು ಕೋಮುವಾದ ಎಂದು ಕೆಲವರು ಭಾವಿಸಿದರೆ ಅದು ತಪ್ಪು. ಯಾವುದೇ ರೀತಿಯ ಘರ್ಷಣೆಯಾಗದಂತೆ ಜನರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಬೇಕು ಎಂದು ಬದ್ರುದ್ದೀನ್ ಅಜ್ಮಲ್ ತಿಳಿಸಿದ್ದಾರೆ” ಎಂಬ ಅಂಶ ವರದಿಯಲ್ಲಿ ಕಂಡು ಬಂದಿದೆ.

ಆದರೆ ಈ ವರದಿಯಲ್ಲಿನ ಎಲ್ಲಾ ಅಂಶಗಳನ್ನು ಉಲ್ಲೇಖಿಸದ ಸೌಮ್ಯ ಕೇವಲ ತಮಗೆ ಬೇಕಾದ ರೀತಿಯಲ್ಲಿ ಸುದ್ದಿಯನ್ನು ಬಳಸಿಕೊಂಡು ತಿರುಚಿದ್ದಾರೆ. ಬಾಂಬ್ ಹಾಕ್ತಾರ ಎಂದು ಕಪೋಲ ಕಲ್ಪಿತ ಸುಳ್ಳು ಹೇಳಿದ್ದಾರೆ. ಜೊತೆಗೆ ಜನರಲ್ಲಿ ಕೋಮು ದ್ವೇಷ ಭಿತ್ತುವಂತೆ ಅನವಶ್ಯಕ ಅನುಮಾನ ವ್ಯಕ್ತ ಪಡಿಸಿ ವಿಡಿಯೋ ಮಾಡಿ ಸಾಮಾಜದ ಕೋಮು ಸಾಮರಸ್ಯ ಕದಡುವ ಕೆಲಸ ಮಾಡಿದ್ದಾರೆ.. ಎಂಬುದು ಈ ವರದಿಯಿಂದ ಸ್ಪಷ್ಟವಾಗಿದೆ. ಅಸಲಿಗೆ ಅಜ್ಮಲ್‌ರವರು ಕೋಮು ಭಾವನೆ ಕೆರಳಿಸುವ ಯಾವುದೇ ಹೇಳಿಕೆ ನೀಡಿಲ್ಲ.

ಟಿವಿ ವಿಕ್ರಮ ಎಂಬ ಡಿಜಿಟಲ್‌ ಮಾಧ್ಯಮ ಆರಂಭವಾದಾಗಿನಿಂದ ಸಮಾಜದಲ್ಲಿ ಕೋಮು ಸಾಮಾರಸ್ಯವನ್ನು ಹಾಳು ಮಾಡುವ ಹಲವು ವಿಡಿಯೋಗಳನ್ನು ಯೂಟ್ಯೂಬ್‌ ಸೇರಿದಂತೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ತನ್ನ ಟಿವಿ ವಿಕ್ರಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮುಮ್ತಾಜ್ ಮುಸ್ಲಿಂ ಮಹಿಳೆಯಂತೆ ಸಂದರ್ಶನ ನೀಡಿ ಮುಸ್ಲಿಂ ಮಹಿಳೆಯರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ವಿಡಿಯೋ ಮಾಡಿದ್ದನ್ನು ಈ ಹಿಂದೆ ಕನ್ನಡ ಫ್ಯಾಕ್ಟ್ ಚೆಕ್ ಬಯಲಿಗೆಳೆದಿತ್ತು.

ಇದರ ಸ್ಥಾಪಕರಾದ ಮಹೇಶ್ ವಿಕ್ರ ಹೆಗ್ಡೆ ಸುಳ್ಳು ವರದಿ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಆದರೂ ಸುಳ್ಳುಗಳು, ಅಪಪ್ರಚಾರಗಳ ಈ ಚಾನೆಲ್‌ ಮುಂದುವರೆಯುತ್ತಿರುವುದು ದುರದೃಷ್ಟಕರ.


ಇದನ್ನೂ ಓದಿ :Fact Check | ಮಾಲ್ಡೀವ್ಸ್ ಅಧ್ಯಕ್ಷ ಭಾರತೀಯರ ಕ್ಷಮೆಯಾಚಿಸಿದ್ದಾರೆಂಬ ಟ್ವೀಟ್‌ ಎಡಿಟೆಡ್ ಹೊರತು ನಿಜವಲ್ಲ


ವಿಡಿಯೋ ನೋಡಿ :Fact Check | ಮಾಲ್ಡೀವ್ಸ್ ಅಧ್ಯಕ್ಷ ಭಾರತೀಯರ ಕ್ಷಮೆಯಾಚಿಸಿದ್ದಾರೆಂಬ ಟ್ವೀಟ್‌ ಎಡಿಟೆಡ್ ಹೊರತು ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *