Fact Check: ಸ್ವತಃ ಡಾ. ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ ಎಂದು ಚಲನಚಿತ್ರದ ವಿಡಿಯೋ ಹಂಚಿಕೆ

ಜಗತ್ತು ಕಂಡ ಇಪ್ಪತ್ತನೇ ಶತಮಾನದ ಮೇರು ಪ್ರತಿಭೆಗಳಲ್ಲಿ ಪ್ರಮುಖರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳನ್ನು ತಿರುಚುವ ಮತ್ತು ತಪ್ಪಾಗಿ ಅರ್ಥೈಸುವ ಕೆಲಸಗಳನ್ನು ಅನೇಕ ವರ್ಷಗಳಿಂದ ಕೆಲವು ಕೋಮುವಾದಿ ಶಕ್ತಿಗಳು ಮಾಡುತ್ತಲೇ ಬರುತ್ತಿದ್ದಾರೆ.

ಈಗ “ಇದು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾತನಾಡಿರುವ ವಿಡಿಯೋ. ಅಂಬೇಡ್ಕರ್ ಹೆಸರು ಹೇಳಿ ಜಾತ್ಯಾತೀತತೆ ಪಾಠ ಹೇಳುವ ಲದ್ದಿ ಜೀವಿಗಳೇ ಇಲ್ಲಿ ಕೇಳಿ, ಜೈ ಶ್ರೀ ರಾಮ್, ಜೈ ಭೀಮ್, ಜೈ ಹಿಂದು ರಾಷ್ಟ್ರ” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ರಾಷ್ಟ್ರೀಯ ದಲಿತ ಸಂಘ ಎಂಬ ಖಾತೆಯೊಂದು ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಡಾ. ಅಂಬೇಡ್ಕರ್ ಅವರು “दुनिया बी कोई ताकत, कोई शक्ति इस देश एक होने से नहीं रोक सकती। अलकी मुस्लिम लीग इस बात पर ज़ोर दे रही है कि हिंदुस्तान का बटवारा करचादे ना चाहिए। लेकिन एक दिन उनको एक बात जरूर समझ आएगी, हिंदुस्तान का बटवाड़ा उनका यह माही पालकी अखंड भारत उनके लिए ज़ियादा बेहतर हो”(ಜಗತ್ತಿನ ಯಾವುದೇ ಶಕ್ತಿಗೂ ಭಾರತೀಯರ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ. ಮುಸ್ಲಿಂ ಲೀಗ್ ಭಾರತವನ್ನು ಇಬ್ಬಾಗ ಮಾಡಿತು ತನ್ನ ಹಿತಾಸಕ್ತಿಗಾಗಿ. ಒಂದಲ್ಲಾ ಒಂದು ದಿನ ಎಲ್ಲರಿಗೂ ಅರಿವಾಗುವುದು ಭಾರತೀಯರದ್ದು ಸ್ವಹಿತಾಸಕ್ತಿಯಲ್ಲ ಭಾರತವನ್ನು ಅಖಂಡವಾಗಿಸುವುದು.) ಎಂದು ಹೇಳುತ್ತಾರೆ.

ಫ್ಯಾಕ್ಟ್‌ಚೆಕ್: ಇದು 2000ರಲ್ಲಿ ಬಿಡುಗಡೆಯಾದ ಜಬ್ಬಾರ್ ಪಟೇಲ್ ನಿರ್ದೇಶಿಸಿದ ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಎಂಬ ಇಂಗ್ಲಿಷ್-ಹಿಂದಿ ದ್ವಿಭಾಷಾ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಮಳಯಾಳಂ ಚಿತ್ರರಂಗದ ಪ್ರಸಿದ್ಧ ನಟ ಮಮ್ಮುಟ್ಟಿ ಡಾ. ಅಂಬೇಡ್ಕರ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಮತ್ತು ಈ ಚಿತ್ರಕ್ಕೆ 1999 ರಲ್ಲಿ ಇಂಗ್ಲಿಷ್‌ನಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಮಮ್ಮುಟ್ಟಿ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ನಿತಿನ್ ಚಂದ್ರಕಾಂತ್ ದೇಸಾಯಿ) ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದೆ.

ಮೂರು ಗಂಟೆಗಳ ಕಾಲವಿರುವ ಈ ಸಂಪೂರ್ಣ ಸಿನಿಮಾದಲ್ಲಿ ಮೇಲೆ ಹರಿದಾಡುತ್ತಿರುವ ಈ ಭಾಗ 2:30:18ರಿಂದ 2:31:27 ನಿಮಿಷದ ಅವಧಿಯಲ್ಲಿ ಬರುತ್ತದೆ. ಮುಸ್ಲಿಂ ಲೀಗ್ ಸಂವಿಧಾನ ರಚನಾ ಸಭೆಯನ್ನು ಧಿಕ್ಕರಿಸಿದಾಗ ಮತ್ತು ಪ್ರತ್ರ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆ ಇಟ್ಟಾಗ ನಡೆಯುವ ಚರ್ಚೆಯ ಸಂದರ್ಭದ ದೃಶ್ಯ ಇದಾಗಿದೆ. ಆದರೆ ಈ ಭಾಷಣದಲ್ಲಿ ಅಂಬೇಡ್ಕರ್ ಅಖಂಡ ಭಾರತವನ್ನು ರಚಿಸುವುದು ಭಾರತೀಯರ ಗುರಿ ಎಂದಿದ್ದಾರೆಯೇ ಹೊರತು ಯಾವುದೇ ಧರ್ಮದ ಆಧಾರದ ಮೇಲೆ ಅಖಂಡ ಭಾರತ ನಿರ್ಮಿಸುತ್ತೇವೆ ಎಂದಿಲ್ಲ. ಈ ಭಾಷಣದ ಪೂರ್ಣ ವಿಡಿಯೋವನ್ನು ನೀವಿಲ್ಲಿ ನೋಡಬಹುದು.

ಭಾರತದಲ್ಲಿ ಜಾತ್ಯಾತೀತತೆಯನ್ನು ಬೆಂಬಲಿಸಿದ ಮತ್ತು ಪ್ರಚಾರ ಪಡಿಸಿದ ಪ್ರಮುಖ ನಾಯಕರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಕೂಡ ಒಬ್ಬರಾಗಿದ್ದಾರೆ. ಸ್ವಾತಂತ್ರ್ಯಾ ಚಳುವಳಿಯ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆ ಇಟ್ಟರೆ, ಆರ್‌ಎಸ್‌ಎಸ್‌ ಮತ್ತು ವಿಶ್ವ ಹಿಂದು ಪರಿಷತ್ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯ ತಂದರು ಆದರೆ ವಿವಿಧ ಧರ್ಮ, ಜನಾಂಗ, ಭಾಷೆಯ ಜನರಿರುವ ಭಾರತದಲ್ಲಿ ಕೇವಲ ಒಂದು ಧರ್ಮ, ಭಾಷೆ, ಸಂಸ್ಕೃತಿಗೆ ಮನ್ನಣೆ ನೀಡುವುದು ನ್ಯಾಯಯುತವಲ್ಲ ಎಂದು ಚರ್ಚಿಸಿ ನಮ್ಮ ದೇಶವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡಲಾಯಿತು.

ಅಂಬೇಡ್ಕರ್ ಅವರು ತಮ್ಮ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ’ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ: “ಒಂದು ವೇಳೆ ಹಿಂದೂ ರಾಜ್(ರಾಷ್ಟ್ರ) ನಿಜವಾದರೆ, ಅದು ಈ ದೇಶಕ್ಕೆ ದೊಡ್ಡ ವಿಪತ್ತು ಎಂಬುದರಲ್ಲಿ ಸಂದೇಹವಿಲ್ಲ. ಹಿಂದೂಗಳು ಏನೇ ಹೇಳಲಿ, ಹಿಂದೂ ಧರ್ಮವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಅಪಾಯವಾಗಿದೆ. ಆ ಕಾರಣಕ್ಕಾಗಿ, ಅದು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ಹಿಂದೂ ರಾಜ್(ರಾಷ್ಟ್ರ) ಅನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಬೇಕು. ಎಂದಿದ್ದರು. 

ಅಂಬೇಡ್ಕರ್ ಅವರಿಗೆ, ಸೆಕ್ಯುಲರಿಸಂ ಕೇವಲ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಮೂಡಿಸುವುದು ಅಷ್ಟೇ ಅಲ್ಲ. ಬದಲಾಗಿ, ಇದು ಸಮಾಜದ ಎಲ್ಲಾ ನಾಗರಿಕರಿಗೆ ಪೂರ್ಣ ಸಮಾನತೆ ಮತ್ತು ಭ್ರಾತೃತ್ವದ ಕಡೆಗೆ ಪರಿವರ್ತನೆಯ ಪ್ರಯಾಣವನ್ನು ಪ್ರತಿನಿಧಿಸುತ್ತದೆ.ಅವರ ದೃಷ್ಟಿ ಧರ್ಮಗಳ ಒಳಗೆ, ವಿಶೇಷವಾಗಿ ಜಾತಿಯ ವಿಷಯದಲ್ಲಿ ಆಳವಾಗಿ ಬೇರೂರಿರುವ ಶ್ರೇಣಿಗಳನ್ನು ಕಿತ್ತುಹಾಕಲು ವಿಸ್ತರಿಸಿತ್ತು. ಜಾತಿ, ಜನಾಂಗ ಮತ್ತು ಲಿಂಗ ಅಸಮಾನತೆಗಳನ್ನು ಪರಿಹರಿಸದೆ ಧರ್ಮದ ವ್ಯಾಪ್ತಿಯಲ್ಲಿ ಜಾತ್ಯತೀತತೆಯನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು.

ನಮ್ಮ ಭಾರತೀಯ ಸಂವಿಧಾನ ಸಹ ಜಾತ್ಯಾತೀತತೆಯನ್ನು ಪ್ರತಿಪಾದಿಸಲಾಗಿದೆ. ಜಾತ್ಯಾತೀತತೆಯ ಅರ್ಥ ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಆತ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವನಾಗಿರಲಿ ಮೊದಲು ಭಾರತೀಯನಾಗಿರುತ್ತಾನೆ ಮತ್ತು ಅವನಿಗೆ ಈ ಎಲ್ಲಾ ಕಾರಣಗಳಿಗೆ ಯಾವುದೇ ತಾರತಮ್ಯವನ್ನು ನಡೆಸುವಂತಿಲ್ಲ. ಎಲ್ಲಾ ಭಾರತೀಯರಿಗೂ ಸಾಮಾನವಾದ ಸ್ಥಾನ ಮಾನಗಳನ್ನು ನೀಡಲಾಗಿದೆ ಮತ್ತು ಎಲ್ಲಾ ಧರ್ಮದವರು ಸೋದರರಂತೆ ಬಾಳಬೇಕೆಂಬ ಭ್ರಾತೃತ್ವದ ತತ್ವವನ್ನು ನಮ್ಮ ಸಂವಿಧಾನ ಸಾರುತ್ತದೆ. ಅದು ಬಹುಸಂಖ್ಯಾತ ಧರ್ಮದವರೇ ಆಗಿರಲಿ ಅಲ್ಪಸಂಖ್ಯಾತ ಧರ್ಮದವರೇ ಆಗಿರಲಿ ಸಂವಿಧಾನದ ಮುಂದೆ ಎಲ್ಲರೂ ಸಮಾನರು ಮತ್ತು ಭಾರತೀಯರು.

ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವುದು ಅಂಬೇಡ್ಕರ್ ಅವರ ನೈಜ ವಿಡಿಯೋ ಆಗಿರದೆ ಚಲನಚಿತ್ರದ್ದಾಗಿದೆ.


ಇದನ್ನು ಓದಿ: ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಜಿಎಸ್‌ಟಿ ಇರಲಿಲ್ಲ ಬದಲಿಗೆ ವ್ಯಾಟ್‌ ಎಂಬ ತೆರಿಗೆ ವ್ಯವಸ್ಥೆಯಿತ್ತು


ವಿಡಿಯೋ ನೋಡಿ: ಪಕ್ಷದ ಕಾರ್ಯಕರ್ತನಿಗೆ ರಾಹುಲ್‌ ಗಾಂಧಿ ನಾಯಿ ಬಿಸ್ಕೆಟ್‌ ನೀಡಿದರೆಂದು ಅಪಪ್ರಚಾರ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *