ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿನ ಕೆಲವು ಮೂಲಭೂತವಾದಿಗಳು ಪ್ರೇಮಿಗಳ ದಿನ ಆಚರಿಸದಂತೆ ತಡೆಯಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಪ್ರೇಮಿಗಳ ದಿನ ಆಚರಣೆ ನಮ್ಮ ಹಿಂದು ಸಂಸ್ಕೃತಿಯ ಭಾಗ ಅಲ್ಲ, ಹಾಗಾಗಿ ಅಂದು ರಸ್ತೆಯಲ್ಲಿ, ಪಾರ್ಕ್‌ಗಳಲ್ಲಿ ಯಾರಾದರೂ ಪ್ರೇಮಿಗಳನ್ನು ಕಂಡರೆ ಅವರಿಗೆ ಮದುವೆ ಮಾಡಿಸುತ್ತೇವೆ ಎಂದು ಹಲ್ಲೆ ಕೂಡ ನಡೆಸಿರುವ ಉದಾಹರಣೆಗಳಿವೆ.
ಈಗ, ಫೆಬ್ರವರಿ 14ರ ಈ ದಿನ ನಾವು ಕೇವಲ ನಮ್ಮ ಯೋಧರನ್ನು ಮಾತ್ರ ಕಳೆದುಕೊಂಡ ದಿನವಲ್ಲ 1931 ರಲ್ಲಿ 21 ವರ್ಷದ ಯುವಕರಾದ ಭಗತ್ ಸಿಂಗ್, ರಾಜಗುರು, ಸುಖದೇವ ವೀರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಾಯಿ ಭಾರತಾಂಬೆಯನ್ನು ಬ್ರಿಟಿಷರ ಗುಲಾಮಾಗಿರಿತನದಿಂದ ಬಿಡಸಬೇಕೆಂದು ಪಣತೊಟ್ಟು ತಾಯಿ ಭಾರತಾಂಬೆಗೆ ತಮ್ಮನ್ನು ತಾವು ಅರ್ಪಿಸಿಕೊಂಡರು ಈ ದಿನದಂದು ಇಂತಹ ಮಹಾನ್ ದೇಶಭಕ್ತರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದರು. ಆದ್ದರಿಂದ ಈ ದಿನವನ್ನು ನಾವು ವೀರ ಬಲಿದಾನ ದಿನವಾಗಿ ಆಚರಿಸೋಣ ಹಾಗೂ ನಮ್ಮ ವೀರಯೋಧರನ್ನು ಮತ್ತು ಸ್ವಾತಂತ್ರ್ಯ ಸೇನಾನಿಗಳನ್ನು ನೆನೆಯೋಣ. ಎಂಬ ಸುದ್ದಿಯೊಂದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಚಿಕ್ಕಬಳ್ಳಾಪುರ ಜಿಲ್ಲೆ ಎಂಬ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಹಾಗೆಯೇ :” ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14, 1931 ರಂದು ಗಲ್ಲಿಗೇರಿಸಲಾಯಿತು ಅವರನ್ನು ಗಲ್ಲಿಗೇರಿಸಿದ ದಿನವನ್ನು, ‘ಶಹೀದ್ ದಿವಸ್'(ಹುತಾತ್ಮರ ದಿನ) ಎಂದು ಆಚರಿಸಿ ಎನ್ನುವ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಫೆಬ್ರವರಿ 14ರಂದು ಯುವ ಚೇತನ ಕ್ರಾಂತಿಕಾರಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ನಿಜವಾಗಿಯೂ ಗಲ್ಲಿಗೇರಿಸಲಾಗಿತ್ತೆ.ಇದರ ಸತ್ಯಾಸತ್ಯೆತೆಯನ್ನು ತಿಳಿಯೋಣ ಬನ್ನಿ.
ಫ್ಯಾಕ್ಟ್‌ಚೆಕ್ : ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಬಗ್ಗೆ ಇಡೀ ದೇಶ ಹೆಮ್ಮೆ, ಗೌರವದಿಂದ ನೆನೆಯುತ್ತದೆ. ಬ್ರಿಟಿಷರು ‘ಲಾಹೋರ್ ಪಿತೂರಿ ಪ್ರಕರಣ’ದಲ್ಲಿ ಭಗತ್ ಸಿಂಗ್ ಅವರನ್ನು ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿ 1930ರ ಅಕ್ಟೋಬರ್ 07ರಂದು ಕೋರ್ಟ್ ಮರಣದಂಡನೆ ತೀರ್ಪು ಪ್ರಕಟಿಸಿತು. 1931ರ ಮಾರ್ಚ್ 23ರಂದು ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರ್ ಅವರನ್ನು ಗಲ್ಲಿಗೇರಿಸಲಾಯಿತು.ಅವರ ಮರಣದಂಡನೆಗೆ ಸಂಬಂಧಿಸಿದಂತೆ ಮಾರ್ಚ್ 25, 1931 ರಂದು ‘ದಿ ಟ್ರಿಬ್ಯೂನ್’ ಪ್ರಕಟಿಸಿದ ಲೇಖನವನ್ನು ‘ಪ್ರಸಾರ ಭಾರತಿ’ ಟ್ವಿಟ್ ಮಾಡಿದೆ ಅದನ್ನು ನೀವು ನೋಡಬಹುದು. 24 ಮಾರ್ಚ್ 1931 ರಂದು ಪ್ರಕಟವಾದ ‘ದಿ ಹಿಂದೂ’ ಪತ್ರಿಕೆಯ ಲೇಖನವನ್ನು ಸಹ ನೀವು ಓದಬಹುದು.
ಬ್ರಿಟಿಷರ ವಿರುದ್ಧ ಹೋರಾಡಿ ಕೇವಲ 23ನೇ ವಯಸ್ಸಿಗೆ ಬಲಿದಾನ ಮಾಡಿಕೊಂಡ ಮಹಾನ್ ದೇಶಪ್ರೇಮಿ ಭಗತ್ ಸಿಂಗ್ ಸುಖ್‌ದೇವ್ ಹಾಗೂ ರಾಜ್‌ಗುರು ಇಂದಿನ ಯುವಜನತೆಯ ಪಾಲಿಗೆ ಆದರ್ಶ ಪ್ರಾಯರು ಅಥವಾ ಯೂತ್ ಐಕಾನ್ ಗಳೆಂದೆ ಇವರುಗಳನ್ನು ಕರೆಯಬಹುದಾಗಿದೆ. ಆದರೆ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವ ಹುನ್ನಾರದಲ್ಲಿ, ಈ ದಿನವನ್ನು ಹುತಾತ್ಮರ ಪುಣ್ಯ ದಿನವೆಂದು ಕರೆಯುವುದು ಎಷ್ಟು ಸರಿ? ಈ ಹಿಂದೆ ಇದೇ ಫೆಬ್ರುವರಿ 14 ಪ್ರೇಮಿಗಳ ದಿನದಂದು “ಹಸು ತಬ್ಬಿಕೊಳ್ಳುವ ದಿನ” ಆಚರಿಸಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಮನವಿ ಮಾಡಿತ್ತು. ಇದಕ್ಕೆ ವ್ಯಾಪಕ ವಿರೋಧ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಪಶು ಕಲ್ಯಾಣ ಮಂಡಳಿ ಪ್ರಕಟಣೆಯನ್ನು ಹಿಂಪಡೆಯಿತು.
ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಗಿದೆ ಹೊರತು, ಪ್ರೇಮಿಗಳ ದಿನದಂದು ಅಲ್ಲ. ಆದ್ದರಿಂದ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿ: Fact Check | ಈಜಿಪ್ಟ್‌ನಲ್ಲಿ ದೈತ್ಯ ಮಮ್ಮಿ ಪತ್ತೆಯಾಗಿದೆ ಎಂದು AI ಚಿತ್ರ ಹಂಚಿಕೆ..!
ವಿಡಿಯೋ ನೋಡಿ: Fact Check | ಶೇ.50ರಷ್ಟು ಮೀಸಲಾತಿ ರದ್ದು ಪಡಿಸುವುದಾಗಿ ರಾಹುಲ್ ಗಾಂಧಿ ಹೇಳಿಲ್ಲ.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.