Fact Check: ದೇವಸ್ಥಾನಗಳ ಸಮಿತಿಯಲ್ಲಿ ಹಿಂದೂಯೇತರರು ಇರಬೇಕೆಂದು ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿಲ್ಲ

ದೇವಸ್ಥಾನ

ಇತ್ತೀಚೆಗೆ ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕರು ಹಿಂದೂ ದೇವಸ್ಥಾನಗಳ ಹಣವನ್ನು ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರುತ್ತಿದ್ದಾರೆ. ಸದನದಲ್ಲಿಯೂ ಈ ಚರ್ಚೆ ಕೇಳಿಬಂದಾಗ ಪ್ರಸ್ತುತ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿಯವರು ದೇವಸ್ಥಾನದ ಹಣ ಮುಜರಾಯಿ ಇಲಾಖೆಗಾಗಲಿ, ಸರ್ಕಾರಕ್ಕಾಗಲಿ ಬರುವುದಿಲ್ಲ. ಎಲ್ಲಾ ಹಣವನ್ನು ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗಾಗಿಯೇ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆದರೆ ಈಗ, ರಾಜ್ಯ ಸರಕಾರದಿಂದ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಕೇವಲ ಹಿಂದೂ ಸದಸ್ಯರಿರಬೇಕು ಎಂಬ ನಿಯಮ ರದ್ದು ! ಈಗ ಅನ್ಯಮತೀಯರನ್ನೂ ದೇವಸ್ಥಾನ ವ್ಯವಸ್ಥಾಪನೆಗೆ ನೇಮಕ ಮಾಡಲು ತಿದ್ದುಪಡಿ.ಕಾಂಗ್ರೆಸ್ ನ ಹಿಂದೂವಿರೋಧಿ ನೀತಿಯನ್ನು ಖಂಡಿಸಿ ! ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆರೋಪ ನಿಜವೇ ಎಂದು ತಿಳಿಯೋಣ ಬನ್ನಿ. 

ಫ್ಯಾಕ್ಟ್‌ಚೆಕ್: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಅಡಿಯಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಯ ನಿಮಯವನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಇದರಲ್ಲಿ ಅಧ್ಯಾಯ 6ರಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಯ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಸಮಿತಿಯಲ್ಲಿ ದೇವಾಲಯದ ಪ್ರಧಾನ ಅರ್ಚಕ, ಕಡೇ ಪಕ್ಷ ಒಬ್ಬ SC-STಗೆ ಸೇರಿದವರು, ಇಬ್ಬರು ಮಹಿಳೆಯರು ಇರಬೇಕು.ಹಾಗೆಯೇ ಸಂಸ್ಥೆ ಇರುವ ಸ್ಥಳದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಪೈಕಿ ಒಬ್ಬರು ಅಥವಾ ಸಂಯೋಜಿತ ಸಂಸ್ಥೆಯ ಸಂದರ್ಭದಲ್ಲಿ ಹಿಂದೂ ಮತ್ತು ಇತರ ಧರ್ಮಗಳೆರಡರಿಂದಲೂ ಸದಸ್ಯರನ್ನು ನೇಮಕ ಮಾಡಿಕೊಳ್ಳಬಹುದು. ಅಥವಾ ಆ ದೇವಸ್ಥಾನದ ಅನುಸರಿಸುತ್ತಿರುವ ರೂಢಿ ಹಾಗೂ ಆಚರಣೆಗಳಿಗನುಸಾರವಾಗಿ ರಚಿಸತಕ್ಕದ್ದು ಎಂದಿದೆ. ಎಲ್ಲಿಯೂ ಅನ್ಯ ಧರ್ಮದವರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದಿಲ್ಲ.

ಅಷ್ಟೇ ಅಲ್ಲದೆ ” ವ್ಯವಸ್ಥಾಪನಾ ಸಮಿತಿಯನ್ನು ರಚಿಸುವಾಗ ಸಂಸ್ಥೆ ಅಥವಾ ಅದರ ಯಾವುದೇ ಶಾಖೆಯು ಯಾವ ಧಾರ್ಮಿಕ ಸಂಪ್ರದಾಯಕ್ಕೆ ಸೇರುತ್ತದೆಯೋ ಆ ಧಾರ್ಮಿಕ ಸಂಪ್ರದಾಯಕ್ಕೆ ಸೂಕ್ತ ಮನ್ನಣೆ ನೀಡತಕ್ಕದ್ದು” ಎಂದು ಹೇಳುತ್ತದೆ. ಹೀಗಿರುವಾಗ  ಕೆಲವರು ಬೇಕೆಂದೇ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು ಇಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.


ಇದನ್ನು ಓದಿ: Fact Check | ಕೇಂದ್ರ ಸರ್ಕಾರದಿಂದಲೇ ಸುಳ್ಳು, BAPS ದೇವಾಲಯವು UAEನಲ್ಲಿ ಮೊದಲ ದೇವಾಲಯವಲ್ಲ..!


ವಿಡಿಯೋ ನೋಡಿ: Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *