Fact Check: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16, 2024ರಂದು ತನ್ನ 15ನೇ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬೆನ್ನಲ್ಲೇ ದೇಶದ ಪ್ರಮುಖ ಸುದ್ದಿ ವಾಹಿನಿಗಳಲ್ಲೊಂದಾದ CNN ನೆಟ್ವರ್ಕ್ 18 ಸಲಹಾ ಸಂಪಾದಕ ರಾಹುಲ್ ಶಿವಶಂಕರ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಡಿದ ಪೋಸ್ಟ್ ಒಂದು ತೀವ್ರ ಚರ್ಚೆಗೆ ಗುರಿಯಾಗಿದೆ.

ತಮ್ಮ ಪೋಸ್ಟ್‌ನಲ್ಲಿ ಅವರು “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಬಜೆಟ್‌ನಲ್ಲಿ ವಕ್ಫ್‌ ಆಸ್ತಿಯ ಅಭಿವೃದ್ಧಿಗಾಗಿ, ಮಂಗಳೂರಿನಲ್ಲಿ ಹಜ್ ಭವನಕ್ಕಾಗಿ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ₹330ಕೋಟಿ ಮೀಸಲಿಟ್ಟಿದೆ. ಕರ್ನಾಟಕ ದತ್ತಿ (ಮುಜರಾಯಿ) ಇಲಾಖೆಯಿಂದ ನಿಯಂತ್ರಿಸಲ್ಪಡುವ 400 ‘ಎ ಮತ್ತು ಬಿ’ ವರ್ಗದ ದೇವಾಲಯಗಳಿಗೆ ಹಿಂದೂ ಭಕ್ತರಿಂದ ಬರುವ ವಾರ್ಷಿಕ ದೇಣಿಗೆ ಸರಾಸರಿ ₹450 ಕೋಟಿಯನ್ನು ರಾಜ್ಯ ಸರ್ಕಾರವು ಜೇಬಿಗಿಳಿಸಿಕೊಂಡಿದೆ” ಎಂದು ಆರೋಪಿಸಿದ್ದಾರೆ. 

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್ ಶಿವಶಂಕರ್ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿ ““ಹಿಂದೂ ದೇವಾಲಯಗಳಿಂದ ಹಣವನ್ನು ತೆಗೆದುಕೊಂಡು ಅದನ್ನು ಹಿಂದೂಯೇತರ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ಧನ ಸಹಾಯ ಮಾಡಲು ಬಳಸುವುದು ಸಿದ್ದರಾಮಯ್ಯನವರಂತಹ ‘ಜಾತ್ಯತೀತ’ ನಾಯಕರ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ. ಅವರ ಸೆಕ್ಯುಲರಿಸಂ ಹಿಂದೂಗಳನ್ನು ಹೊಡೆಯುವ ಕೋಲು ಮಾತ್ರವಲ್ಲ, ಅದು ಹಿಂದೂಗಳ ವೆಚ್ಚದಲ್ಲಿ ಇತರರನ್ನು ಆರ್ಥಿಕವಾಗಿ ಶ್ರೀಮಂತಗೊಳಿಸುವ ಸಾಧನವಾಗಿದೆ” ಎಂದು ಅದಕ್ಕೆ ತಮ್ಮದೇ ಆದ ಅಭಿಪ್ರಾಯವನ್ನು ಸೇರಿಸಿದ್ದಾರೆ.ದೇವಸ್ಥಾನದ ಹಣವನ್ನು ಇತರ ಧರ್ಮಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದ್ದಂತೆ ಎಲ್ಲಾ ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸಿಕೊಳ್ಳಬೇಕು ಎಂದು ಕೆಲವು ಬಲಪಂಥೀಯ ಸಂಘಟನೆಗಳು ಅಭಿಯಾನ ಪ್ರಾರಂಭಿಸಿವೆ. ರಾಹುಲ್ಮ ಶಿವಶಂಕರ್ ಅವರ ಟ್ವಿಟ್ ಆಧರಿಸಿ ಕನ್ನಡದ ಸುವರ್ಣ ನ್ಯೂಸ್ ಸುಳ್ಳು ಸುದ್ದಿ ಪ್ರಕಟಿಸಿ ಸಿಕ್ಕಿ ಬಿದ್ದಿತ್ತು, ನಂತರ ತನ್ನ ಸುದ್ದಿಯನ್ನು ತಿದ್ದಿದೆ.

ಫ್ಯಾಕ್ಟ್‌ಚೆಕ್‌: ಕರ್ನಾಟಕ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕೆಟಗರಿ “ಎ” ದೇವಾಲಯಗಳು ಕೇವಲ 10% ಹಣವನ್ನು ಮಾತ್ರ ಸರ್ಕಾರಕ್ಕೆ ಕಟ್ಟುತ್ತಿದ್ದು ಕೆಟಗರಿ “ಬಿ” ದೇವಾಲಯಗಳು ಕೇವಲ 5% ಹಣವನ್ನು ಕಟ್ಟುತ್ತಿವೆ. ಮತ್ತು ಉಳಿದ ಹಣವನ್ನು ತಮ್ಮ ದೇವಾಲಯದ ಅಭಿವೃದ್ದಿಗೆ ಬಳಸಿಕೊಳ್ಳುತ್ತಿವೆ. ಸದನದಲ್ಲಿ ಹಿಂದು ದೇವಾಲಯಗಳ ಹಣವನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಯಿಸಿರುವ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿಯವರು “ಮುಜರಾಯಿ ದೇವಸ್ಥಾನಗಳ ನಯಾಪೈಸೆ ಹಣ ಸರ್ಕಾರಕ್ಕೆ ಆಗಲೀ, ಮುಜರಾಯಿ ಇಲಾಖೆಗೆ ಆಗಲಿ ಬರುವುದಿಲ್ಲ, ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗುತ್ತದೆ.” ಎಂದು ಸಚಿವರು ಸದನಕ್ಕೆ ವಿವರಿಸಿದ್ದಾರೆ.

ಇನ್ನೂಈ ಬಾರಿಯ ಬಜೆಟ್‌ನಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಮತ್ತು ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಸುಮಾರು ₹730 ಕೋಟಿ ಮೀಸಲಿಟ್ಟಿದೆ. ಇದರಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ₹100 ಕೋಟಿ ಅನುದಾನ, ತಿರುಮಲ, ಶ್ರೀಶೈಲಂ, ವಾರಣಾಸಿ ಮತ್ತು ಗುಡ್ಡಾಪುರದಂತಹ ಯಾತ್ರಾ ಸ್ಥಳಗಳಲ್ಲಿ ಸುಸಜ್ಜಿತ ವಸತಿ ಸಂಕೀರ್ಣಗಳ ನಿರ್ಮಾಣವೂ ಸೇರಿದೆ.

“ತಿರುಮಲದಲ್ಲಿ ₹200ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಶ್ರೀಶೈಲದಲ್ಲಿ ₹85ಕೋಟಿ ಹಾಗೂ ಗುಡ್ಡಾಪುರದಲ್ಲಿ ₹11 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸಕ್ತ ವರ್ಷ ₹5ಕೋಟಿ ವೆಚ್ಚದಲ್ಲಿ ವಾರಣಾಸಿಯಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು” ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ‘ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ’ಯನ್ನು ರಚಿಸುವ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ₹158 ಕೋಟಿ ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ಚಿಕ್ಕನಹಳ್ಳಿ ಗ್ರಾಮದ ಬಳಿ ಸೇತುವೆ-ಕಮ್-ಬ್ಯಾರೇಜ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಯಾವುದೇ ಆದಾಯವಿಲ್ಲದ 34,165 ಸಿ ಕೆಟಗರಿ ಐತಿಹಾಸಿಕ ದೇವಸ್ಥಾನಗಳಿಗೆ ಮೂಲ ಸೌಕರ್ಯ ಒದಗಿಸಲು ‘ವಿಷನ್ ಗ್ರೂಪ್’ ರಚಿಸಲಾಗುವುದು ಮತ್ತು ಇನಾಂ/ಇನಾಂ ಅಲ್ಲದ ಭೂಮಿ ಕಳೆದುಕೊಂಡ 29,523 ಸಿ ಕೆಟಗರಿ ದೇವಸ್ಥಾನಗಳ ಅರ್ಚಕರಿಗಾಗಿ ವಾರ್ಷಿಕ ₹170ಕೋಟಿ ಹಣ ಮೀಸಲಿಡಲಾಗಿದೆ.

ಸುಳ್ಳು ಸುದ್ದಿ ಹರಡಿರುವ ರಾಹುಲ್ ಶಿವಶಂಕರ್ ಮತ್ತು ಸಂಸದ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರು ಪತ್ರಿಕಾಧರ್ಮವನ್ನು ಪಾಲಿಸದೆ ಜನರ ದಿಕ್ಕುತಪ್ಪಿಸುತ್ತಿರುವ ಈ ನಾಯಕರಿಗೆ ಕೇಂದ್ರ ಸರ್ಕಾರವನ್ನು ಕನ್ನಡಿಗರ ತೆರಿಗೆ ಪಾಲನ್ನು ನೀಡುವಂತೆ ಪ್ರಶ್ನಿಸಿ ಎಂದು ಸವಾಲು ಹಾಕಿದ್ದಾರೆ.

ಆದ್ದರಿಂದ ಸಧ್ಯ ₹450 ಕೋಟಿಯನ್ನು ರಾಜ್ಯ ಸರ್ಕಾರವು ಜೇಬಿಗಿಳಿಸಿಕೊಂಡಿದೆ ಎಂಬ ಆರೋಪ ಸುಳ್ಳು.


ಇದನ್ನು ಓದಿ: ದೇವಸ್ಥಾನದ ಹಣ ವಕ್ಫ್, ಕ್ರಿಶ್ಚಿಯನ್‌ಗೆ ದಾನ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಸುವರ್ಣ ನ್ಯೂಸ್


ವಿಡಿಯೋ ನೋಡಿ: Fact Check: ರೈತ ಹೋರಾಟದಲ್ಲಿ ಮದ್ಯ ಹಂಚಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *