Fact Check: ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಎಂದು ಸುಳ್ಳು ವರದಿ ಮಾಡಿದ ಕರ್ನಾಟಕದ ಮಾಧ್ಯಮಗಳು

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತು ನಮ್ಮ ಸಮಾಜದಲ್ಲಿ ಬಹು ಹಿಂದಿನಿಂದಲೂ ಇದೆ. ಆದರೆ ಇಂದು ಬಹುತೇಕ ಮಾಧ್ಯಮಗಳು ಜನರಿಗೆ ಸತ್ಯವನ್ನು ತೋರಿಸುವ ಬದಲಾಗಿ ಆಧಾರರಹಿತವಾದ ಸುಳ್ಳುಗಳನ್ನೇ ಹಂಚಿಕೊಳ್ಳುತ್ತಿವೆ. ಸುದ್ದಿಯ ನಿಖರತೆಯನ್ನು ಪರೀಕ್ಷಿಸಿಕೊಳ್ಳದೆ ಪತ್ರಿಕಾ ಧರ್ಮವನ್ನು ಮರೆತವರಂತೆ ವರ್ತಿಸುತ್ತಿವೆ.

ಇದಕ್ಕೆ ಸಾಕ್ಷಿಯೆಂಬಂತೆ ನೆನ್ನೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಅವರ ಬೆಂಬಲಿಗರಿಂದಲೇ ವಿಧಾನ ಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೇಳಿಬಂದಿದೆ. ಎಂದು ಕನ್ನಡದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.

ಫ್ಯಾಕ್ಟ್‌ಚೆಕ್: ವಿಧಾನ ಸೌಧದಲ್ಲಿ ರಾಜ್ಯ ಸಭೆಗೆ ನಡೆದ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಪರವಾಗಿ ಅವರ ಬೆಂಬಲಿಗರು “ನಾಸೀರ್ ಸಾಬ್ ಜಿಂದಾಬಾದ್” ಎಂದು ಕೂಗಿದ್ದಾರೆ. ಅದರೆ ಕರ್ನಾಟಕದ ಬಹುತೇಕ ಮಾಧ್ಯಮಗಳು “ಪಾಕಿಸ್ತಾನ್ ಜಿಂದಾಬಾದ್” ಎಂದು ತಪ್ಪಾಗಿ ವರದಿ ಮಾಡಿವೆ.

ಈ ಘಟನೆ ನಡೆದ ಸ್ಥಳದಲ್ಲೇ ಇದ್ದ ಪತ್ರಕರ್ತ ಮಧು ನಾಯಕ್ ಅವರು ತಮ್ಮ X ಖಾತೆಯಲ್ಲಿ, ಅಲ್ಲಿ ಕೂಗಲಾಗಿರುವ ಘೋಷಣೆ ನಾಸೀರ್ ಸಾಬ್ ಜಿಂದಾಬಾದ್ ಎಂದೇ ಹೊರತು ಪಾಕಿಸ್ತಾನ್ ಜಿಂದಾಬಾದ್” ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ಕನ್ನಡ ಮಾದ್ಯಮಗಳ ಸುಳ್ಳು ಸುದ್ದಿಯ ಕುರಿತು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಕುರಿತು ಜನರು ಕನ್ನಡದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿವೆ. ಆದ್ದರಿಂದ ವಿಧಾನ ಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೇಳಿಬಂದಿದೆ ಎಂಬುದು ಸುಳ್ಳು.

ಆದರೆ ಈ ಕುರಿತು ಶಿವಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಬೆಂಗಳೂರು ಪೋಲಿಸರು FIR ದಾಖಲಿಸಿದ್ದು ಪಾಕಿಸ್ತಾನ ಜಿಂದಾಬಾದ್ ಎಂದು ದೇಶವಿರೋಧಿ ಘೋ‍ಷಣೆ ಕೂಗಿದ ಅಜ್ಞಾತ ವ್ಯಕ್ತಿಯನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಗೃಹ ಮಂತ್ರಿ ಎಸ್.ಜಿ ಪರಮೇಶ್ವರ್ ಅವರು ಆರೋಪ ನಿಜವಾದರೆ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಇದನ್ನು ಓದಿ: Fact Check | ಇವರು ಷಹಜಹಾನ್ ಅವರ ಪತ್ನಿ ಮುಮ್ತಾಜ್ ಅಲ್ಲ, ಭೂಪಾಲ್‌ನ ಮೂರನೇ ಷಹಜಹಾನ್ ಬೇಗಂ


ವಿಡಿಯೋ ನೋಡಿ: Fact Check: ಬಿಜೆಪಿ ಕೌನ್ಸಿಲರ್‌ ಪೋಲಿಸರನ್ನು ತಳಿಸಿದ ವಿಡಿಯೋವನ್ನು ಕಾಂಗ್ರೆಸ್ ಶಾಸಕ ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *