Fact Check: ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ

ಕಾಬಾ

ಈ ಹಿಂದೆ ಜಗತ್ತೇ ಸನಾತನ ಧರ್ಮವನ್ನು ಅನುಸರಿಸುತ್ತಿತ್ತು, ಶಿವ ಲಿಂಗಗಳು ಜಗತ್ತಿನಾದ್ಯಂತ ಪತ್ತೆಯಾಗಿವೆ. ಮುಸ್ಲೀಮರ ಪವಿತ್ರ ಯಾತ್ರೆಯ ಕಾಬಾ ಕೂಡ ಶಿವಲಿಂಗವಾಗಿತ್ತು ಎಂಬ ಆಧಾರ ರಹಿತ ಬಾಲಿಷ ಪ್ರತಿಪಾಧನೆಗಳನ್ನು ಕೆಲವು ಬಲಪಂಥೀಯರು ಹರಡುತ್ತಿದ್ದಾರೆ. ಇವುಗಳಿಗೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಪ್ರಾಚೀನ ಭಾರತದ ಸಿಂದು ಬಯಲಿನ ನಾಗರೀಕತೆಯಲ್ಲಿ ಸಹ ಹಿಂದು ಧರ್ಮ ಅನುಸರಿಸುತ್ತಿದ್ದ ಕುರಿತು ದಾಖಲೆಗಳಿಲ್ಲ. “ಪಶುಪತಿ” ಎಂದು ಗುರಿತಿಸಿರುವ ಮುದ್ರೆ ಸಹ “ಶಿವ”ನದು ಹೌದೇ ಅಲ್ಲವೇ ಎಂಬ ಚರ್ಚೆ ಕೂಡ ಇನ್ನೂ ಹಾಗೆಯೇ ಉಳಿದಿದೆ. ಇನ್ನೂ ಜಗತ್ತಿನಾದ್ಯಂತ ಬೇರೆ ಬೇರೆ ನಾಗರೀಕತೆಗಳು ತಮ್ಮದೇ ಆದ ದೈವಗಳು, ಆಚರಣೆ, ಸಂಸ್ಕೃತಿ ಹೊಂದಿದ್ದವು ಎಂಬುದಕ್ಕೆ ಎಲ್ಲಾ ರೀತಿಯ ದಾಖಲೆಗಳು ಸಿಗುತ್ತವೆ.

ಆದರೆ ಇತ್ತೀಚೆಗೆ, “ಇದು ಮೆಕ್ಕಾದಲ್ಲಿರುವ ಕಾಬಾದ ಸುತ್ತಲೂ ಕಪ್ಪು ಗೋಡೆಯನ್ನ ನಿರ್ಮಿಸುವ ಮೊದಲು ತೆಗೆದ ಚಿತ್ರ. ಈ ಚಿತ್ರವನ್ನ ಸೌದಿ ಅರೇಬಿಯಾ ದೇಶದಲ್ಲಿ ತೈಲ ಸಂಪನ್ಮೂಲಗಳು ಸಿಗುವ ಮುಂಚೆ, ಆ ದೇಶದಲ್ಲಿ ಬಡತನ ಇದ್ದ ಸಮಯದಲ್ಲಿ, ಅದು ಮರುಳುಗಾಡಾಗಿದ್ದ ಸಮಯದಲ್ಲಿ, ಪ್ರಪಂಚದಲ್ಲಿ ಸೂರ್ಯ‌ ಮುಳುಗದ ಸಾಮ್ರಾಜ್ಯವನ್ನ ಸ್ಥಾಪಿಸಿದ್ದ ಬ್ರಿಟೀಷರು ತೆಗೆದ ಚಿತ್ರ.

ಅಲ್ಲಾಹ್ ನಿಗೆ ಆಕಾರವೇ ಇಲ್ಲ ಎಂದು ಹೇಳಿ ಕೋಟಿ ಕೋಟಿ ಜನರನ್ನ ಗೋಡೆಯ ಮುಂದೆ ನಿಲ್ಲಿಸಿರುವವರ, ಹಾಗೂ ಗೋಡೆಯ ಮುಂದೆ ನಿಂತಿರುವವರ ಅಲ್ಲಾಹ್ ನ ಆಕಾರ ಯಾವುದಿದೆ ನೋಡಿ. ಅದು ಬೇರೆ ಯಾರು ಅಲ್ಲ ಅಲ್ಲೇಶ್ವರ ಅಂದರೆ ನಮ್ಮ ಮಹಾದೇವ, ಈಶ್ವರ.” ಎಂದು ಪ್ರತಿಪಾದಿಸಿದ ಹಲವಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವರ್ಷಗಳಿಂದ ಹರಿದಾಡುತ್ತಿದೆ. ಇದರಲ್ಲಿ “ಮಹಮ್ಮದ್ ಪೈಗಂಬರ್ ಸಹ ಹಿಂದು ದೇವರನ್ನು ಪೂಜಿಸುತ್ತಿದ್ದ. ಮೆಕ್ಕಾ ಎಂಬ ಊರು ಸಹ ಇರಲಿಲ್ಲ ಇದ್ದದ್ದು ಮೆಕ್ಕೇಶ್ವರ ಮಾತ್ರ” ಎಂದು ಪ್ರತಿಪಾಧಿಸುತ್ತಿದ್ದಾರೆ.

ಈ ಸಂದೇಶವು ಪೇಸ್‌ಬುಕ್ ಮತ್ತು X ಖಾತೆಯಲ್ಲಿ ನಾನಾ ರೀತಿಯ ಪ್ರತಿಪಾಧನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ದ ಹಿಂದು ಪೋರ್ಟಲ್ ಕೆಲವು ಬಲಪಂಥೀಯ ಮಾಧ್ಯಮಗಳು ಈ ರೀತಿಯ ಹಲಾವಾರು ಪ್ರತಿಪಾಧನೆಗಳನ್ನು ತಮ್ಮದೇ ರೀತಿಯ ಕಾರಣಗಳ ಕೊಟ್ಟು ಪ್ರತಿಪಾದಿಸುತ್ತಿದ್ದಾರೆ. ವಿಕ್ರಮಾದಿತ್ಯನ ಕಾಲದಲ್ಲಿ ಅಲ್ಲಿ ಶಿವ ದೇವಾಲಯವನ್ನು ನಿರ್ಮಿಸಿದ್ದನು ಎಂದು ಈ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. Archeological sources and evidence ಎಂದು ಸುಲಭವಾಗಿ ಹೇಳಲಾಗಿದೆ. ಯಾವ ಉತ್ಖನನದ ಸಂದರ್ಭದಲ್ಲಿ ಇದು ಪತ್ತೆಯಾಯಿತು ಅದರ ವರ್ಷ, ಯಾರು ಉತ್ಖನನ ನಡೆಸಿದವರು?, ವಿಕ್ರಮಾದಿತ್ಯ ಯಾವ ರಾಜ ಮನೆತನದವನು? ಅವನ ಕಾಲಘಟ್ಟ ಯಾವುದು? ಈ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.   ಅನೇಕರು ಇದನ್ನೇ ಓದಿ ಸತ್ಯವೆಂದು ನಂಬಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ಹರಿದಾಡುತ್ತಿರುವ ಈ ವೈರಲ್ ಚಿತ್ರ ಕಾಬಾವನ್ನು ಸ್ಥಾಪಿಸಿದ ಪ್ರವಾದಿ ಇಬ್ರಾಹಿಂ ಸೈತಾನನ ಮೇಲೆ ಏಳು ಕಲ್ಲುಗಳನ್ನು 3 ಸ್ಥಳಗಳಲ್ಲಿ ತೂರಿದ್ದನ್ನು ಪ್ರತಿನಿಧಿಸುತ್ತವೆ. ಅವುಗಳನ್ನು ‘ಜಮ್ರತ್-ಅಸ್-ಸುಘ್ರಾ’, ‘ಜಮ್ರತ್-ಅಲ್-ವುಸ್ತಾ’ ಮತ್ತು ‘ಜಮ್ರತ್-ಅಲ್-ಕುಬ್ರಾ’ ಎಂದು ಕರೆಯಲಾಗುತ್ತದೆ. ಮುಸ್ಲೀಮರು ಹಜ್ ಯಾತ್ರೆ ನಡೆಸುವ ಸಂದರ್ಭದಲ್ಲಿ ಈ ಸ್ಥಳಗಳಿಗೆ(ಜಮಾರಾತ್) ಭೇಟಿ ನೀಡುವ ಪದ್ದತಿಯಿದೆ.

ಪ್ರವಾದಿ ಇಬ್ರಾಹಿಂ ಎಂದರೆ ಯಾರು?

ಹೀಬ್ರೂ ಬೈಬಲ್‌ನಲ್ಲಿ ಅಬ್ರಹಾಂ ಎಂದು ಕರೆಯಲ್ಪಡುವ ಇಬ್ರಾಹಿಂಗೆ ‘ಖಲೀಲುಲ್ಲಾ’ ಎಂಬ ಬಿರುದನ್ನು ನೀಡಲಾಯಿತು, ಇದರರ್ಥ ‘ಅಲ್ಲಾಹನ ಸ್ನೇಹಿತ’ ಎಂದು. ಇಬ್ರಾಹಿಂ ಅವರು ಅನೇಕ ಮಹಾನ್ ಪ್ರವಾದಿಗಳ ಪೂರ್ವಜರಾಗಿದ್ದರು ಮತ್ತು ಎಲ್ಲಾ ಪ್ರಮುಖ ಧರ್ಮಗಳಾದ ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂನಿಂದ ಹೆಚ್ಚಿನ ಗೌರವವನ್ನು ಹೊಂದಿದ್ದಾರೆ.

ಇಬ್ರಾಹಿಂ ಕುರಾನ್‌ನಲ್ಲಿ ಉಲ್ಲೇಖಿಸಲಾದ 25 ಪ್ರವಾದಿಗಳಿಗೆ ಸೇರಿದವರು. ಈ ಐದು ಪ್ರವಾದಿಗಳು ಪುಸ್ತಕಗಳು ಮತ್ತು ದೈವಿಕ ಧಾರ್ಮಿಕ ಕಾನೂನುಗಳನ್ನು ಹೊಂದಿರುವುದರಿಂದ ಅವರು ಉಲುಲ್ಅಜ್ಮ್ (ಆರ್ಚ್-ಪ್ರವಾದಿಗಳು) ನ ಐದು ಪ್ರವಾದಿಗಳಲ್ಲಿ ಒಬ್ಬರು. ಅಲ್ಲಾಹನ ಈ ಐದು ಪ್ರವಾದಿಗಳೆಂದರೆ ನೋಹ್ [ನುಹ್], ಅಬ್ರಹಾಂ [ಇಬ್ರಾಹಿಂ], ಮೋಸೆಸ್ [ಮೂಸಾ], ಜೀಸಸ್ [ಎಸಾ] ಮತ್ತು ಪ್ರವಾದಿ ಮೊಹಮ್ಮದ್.

ಇಬ್ರಾಹಿಂನ ವಯಸ್ಸಿನ ಬಗ್ಗೆ ವಿವಿಧ ಇಸ್ಲಾಮಿಕ್ ವಿದ್ವಾಂಸರಿಂದ ವಿಭಿನ್ನ ನಿರೂಪಣೆಗಳಿವೆ. ಆದರೆ ಎಲ್ಲರೂ ಹೇಳುವ ಪ್ರಕಾರ ಅವರು 150 ಕ್ಕೂ ಹೆಚ್ಚು ಕಾಲ ಬದುಕಿದ್ದರು ಎಂದು. ಇಬ್ರಾಹಿಂ ಅವರು ಇಸ್ಲಾಂ ಧರ್ಮಕ್ಕೆ ಮೂರ್ತಿ ಪೂಜೆಯನ್ನು ಇಲ್ಲದಂತೆ ಮಾಡಿದವರಲ್ಲಿ ಒಬ್ಬರು. ಯಾಕೆಂದರೆ ಅವರ ತಂದೆ ಮೂರ್ತಿ ಮಾಡುವ ವೃತ್ತಿಯನ್ನು ಮಾಡುತ್ತಿದ್ದರು. ಜನ ತನ್ನ ತಂದೆ ಮಾಡಿಕೊಟ್ಟ ಕಲ್ಲು ಮತ್ತು ಮರಗಳಿಂದ ಮಾಡಿದ ಮೂರ್ತಿಗೆ ಕೈ ಮುಗಿದು ತಮಗೆ ಬೇಕಾದದ್ದನ್ನು ಬೇಡಿದಾಗ ಈ ಕಲ್ಲು ಅಥವಾ ಮರದ ಮೂರ್ತಿಗಳು ಅವರಿಗೆ ಏನನ್ನಾದರೂ ಕೊಡಲು ಸಾಧ್ಯವೇ ಎಂದು ಚಿಂತಿಸಿ. ಮೂರ್ತಿ ಪೂಜೆಯ ನಿರರ್ಥಕತೆಯನ್ನು ಸಾರಿದರು.

ಜಮಾರಾತ್ ಎಂದರೇನು? 

ಜಮಾರಾತ್ ಮೂರು ಕಲ್ಲಿನ ಗೋಡೆಗಳಾಗಿದ್ದು, ಹಿಂದೆ ಕಂಬಗಳಾಗಿದ್ದು, ಪ್ರವಾದಿ ಇಬ್ರಾಹಿಂ ಅವರ ಕ್ರಿಯೆಗಳ ಅನುಕರಣೆಯಲ್ಲಿ ಹಜ್‌ನ ಕಡ್ಡಾಯ ವಿಧಿಯಂತೆ ನಡೆಸಲಾಗುದೆ. ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್ ಅನ್ನು ಬಲಿಕೊಡುವುದನ್ನು ತಡೆಯಲು ಪ್ರಯತ್ನಿಸಿದಾಗ ಶೈತಾನನನ್ನು (ಸೈತಾನ) ಕಲ್ಲುಗಳಿಂದ ಹೊಡೆದ ಮೂರು ಸ್ಥಳಗಳನ್ನು ಅವು ಪ್ರತಿನಿಧಿಸುತ್ತವೆ. ಕಂಬಗಳನ್ನು ‘ಜಮ್ರತ್-ಅಲ್-ಉಲಾ’, ‘ಜಮ್ರತ್-ಅಲ್-ವುಸ್ತಾ’ ಮತ್ತು ‘ಜಮ್ರತ್-ಅಲ್-ಕುಬ್ರಾ’ ಎಂದು ಕರೆಯಲಾಗುತ್ತದೆ.

ಆದ್ದರಿಂದ ಇದು ಸೈತಾನನಿಗೆ ಏಳು ಬಾರಿ ಬೀಸಿದ ಕಲ್ಲಿನ ನೆನಪಿನಾರ್ಥವಾಗಿ ನಡೆಸುವ ಆಚರಣೆಯೇ ಹೊರತು ಶಿವಲಿಂಗವಲ್ಲ. ಮತ್ತು ಕಾಬಾದ ಸುತ್ತಮುತ್ತ ದೇವಾಲಯಗಳಿದ್ದವು, ಕಾಬಾ ಸಹ ಶಿವಲಿಂಗವಾಗಿತ್ತು ಎಂಬುದು ಕಲ್ಪಿತ ಕಥೆಯಾಗಿದೆ. ಇಂತಹ ಯಾವುದೇ ಕಥೆಗಳನ್ನು ನಂಬುವ ಮೊದಲು ಸಣ್ಣ ಅಧ್ಯಯನ ನಡೆಸಿಕೊಳ್ಳಿ.


ಇದನ್ನು ಓದಿ: Fact Check: ಜನ ವಿಶ್ವಾಸ ಮಹಾರ್ಯಾಲಿಯಲ್ಲಿ ಸೇರಿದ ಜನಸಾಗರ ಎಂದು ಎಡಿಟೆಟ್ ಪೋಟೋಗಳ ಹಂಚಿಕೆ


ವಿಡಿಯೋ ನೊಡಿ: Fact Check | ವಾಟ್ಸಾಪ್‌ಗೆ ಸಂಬಂಧಿಸಿದಂತೆ ಹರಿದಾಡುತ್ತಿವೆ ಹಲವು ಸುಳ್ಳು ಸುದ್ದಿಗಳು..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *