Fact Check: ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿಯಿಂದ ಕಾಂಗ್ರೆಸ್ 10 ಕೋಟಿ ಪಡೆದಿದೆ ಎಂದು ಸುಳ್ಳು ಹರಡಿದ ಟಿವಿ ವಿಕ್ರಮ

Pakistan

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳನ್ನು ಅಕ್ರಮ ಎಂದು ಕರೆದು ರದ್ದುಗೊಳಿಸಿದೆ. ಅಲ್ಲದೇ 2019ರಿಂದ 2024ರವರೆಗೆ ಖರೀದಿಯಾಗಿರುವ ಬಾಂಡ್‌ಗಳ ವಿವರ ಮತ್ತು ಅವುಗಳನ್ನು ನಗದಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳ ವಿವರವನ್ನು ಬಹಿರಂಗ ಪಡಿಸುವಂತೆ ಎಸ್‌ಬಿಐ(SBI)ಗೆ ತಾಕೀತು ಮಾಡಿತು. ಅದರಂತೆ ಎಸ್‌ಬಿಐ ನೀಡಿದ ಮಾಹಿತಿಯನ್ನು ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅದರಲ್ಲಿ ಪಾಕಿಸ್ತಾನ ಮೂಲದ ‘ಹಬ್ ಪವರ್ ಕಂಪನಿ’ ಪುಲ್ವಾಮ ದಾಳಿಯ ನಂತರ 10 ಕೋಟಿ ಮೊತ್ತದ ಬಾಂಡ್‌ಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ ಎಂದು ಫೇಕ್ ನ್ಯೂಸ್‌ಗೆ ಹೆಸರಾಗಿರುವ ವಿಕ್ರಮ ಟಿವಿ ವರದಿ ಮಾಡಿದೆ. ಇನ್ನು ಕೆಲವರು ಬಿಜೆಪಿ ಪಕ್ಷ ಈ ಹಣ ಪಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸೋಣ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ಛಂಡಿಗಢ ಸಹ ಇದೇ ಆರೋಪವನ್ನು ಬಿಜೆಪಿಯ ಮೇಲೆ ಮಾಡಿದೆ. “ಶಾಕಿಂಗ್. ಪಾಕಿಸ್ತಾನ ಮೂಲದ ಹಬ್ ಪವರ್ ಕಂಪನಿ, ಪುಲ್ವಾಮಾ ದಾಳಿ ನಡೆದ ವಾರಗಳ ನಂತರ ಎಲೆಕ್ಟೋರಲ್ ಬಾಂಡ್‌ಗಳನ್ನು ಕೊಡುಗೆಯಾಗಿ ನೀಡಿದೆ” ಎಂದು ಆರೋಪಿಸಿದ್ದಾರೆ.ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಹಬ್ ಪವರ್ ಕಂಪನಿಯು ಜಿಎಸ್‌ಟಿ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರುವುದು ಕಂಡು ಬಂದಿದೆ. 07BWNPM0985J1ZX ಇದು ಅದರ ಜಿಎಸ್‌ಟಿ ನಂಬರ್ ಆಗಿದೆ. ಅದರಲ್ಲಿ ಆ ಕಂಪನಿಯ ಮೂಲ ಭಾರತವಾಗಿದ್ದು ಅದರ ಕೇಂದ್ರ ಕಚೇರಿ ದೆಹಲಿಯಲ್ಲಿದೆ ಎಂದು ಉಲ್ಲೇಖಿಸಿದೆ.

ಹಬ್ ಪವರ್ ಕಂಪನಿಯು ರವಿ ಮೆಹ್ರಾ ಎಂಬ ವ್ಯಕ್ತಿಯ ಒಡೆತನದಲ್ಲಿದೆ. ಇದನ್ನು ನವೆಂಬರ್ 12, 2018 ರಂದು ನೋಂದಾಯಿಸಲಾಗಿದೆ. ಇದರ ಪ್ರಮುಖ ವ್ಯಾಪಾರ ಸ್ಥಳವು ನವದೆಹಲಿಯ ಗೀತಾ ಕಾಲೋನಿಯಲ್ಲಿರುವ ವಿಳಾಸವಾಗಿದೆ.

ಇನ್ನು ಪಾಕಿಸ್ತಾನದಲ್ಲಿಯೂ ಸಹ ಇದೇ ಹೆಸರಿನ ಕಂಪನಿಯೊಂದಿದೆ. ಆದರೆ ಭಾರತದಲ್ಲಿ ಈ ವಿವಾದ ಭುಗಿಲೆದ್ದ ನಂತರ ಅದು “ನಾವು ಈ ವಿಷಯದಲ್ಲಿ ಹೆಸರಿಸಲಾದ ಕಂಪನಿ ಅಥವಾ ಭಾರತ ಮೂಲದ ಯಾವುದೇ ಇತರ ಕಂಪನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ. ಚುನಾವಣಾ ಬಾಂಡ್‌ ಕುರಿತು HUBCO ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ” ಎಂದು ಟ್ವೀಟ್ ಮಾಡಿದೆ. ಈ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ಹಬ್ ಪವರ್ ಕಂಪನಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಈ ಕಂಪನಿ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದೆ ಎಂಬುದನ್ನು ಇನ್ನೂ ಎಸ್‌ಬಿಐ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಿಲ್ಲ. ನಿಯಮಗಳ ಪ್ರಕಾರ “ಚುನಾವಣಾ ಬಾಂಡ್‌ಗಳು ಕೇವಲ 15 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತವೆ, ಈ ಅವಧಿಯಲ್ಲಿ ಅದನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳಿಗೆ ಮಾತ್ರ ದೇಣಿಗೆ ನೀಡಲು ಬಳಸಬಹುದಾಗಿದೆ”. ಹಾಗಾಗಿ ಪಾಕಿಸ್ತಾನದ ಕಂಪನಿಯಿಂದ ಕಾಂಗ್ರೆಸ್ ಅಥವಾ ಬಿಜೆಪಿ ದೇಣಿಗೆ ಪಡೆದಿವೆ ಎಂಬುದು ಸುಳ್ಳು.


ಇದನ್ನು ಓದಿ: Fact Check | ಇದು ಮತೀಯ ಗೂಂಡಾಗಿರಿ ಘಟನೆ ಹೊರತು ಲವ್ ಜಿಹಾದ್ ಅಲ್ಲ


ವಿಡಿಯೋ ನೋಡಿ: ಗುಜರಾತ್‌ನಲ್ಲಿ ಹಿಂದೂ ದೇವಾಲಯವನ್ನು ಜಿಹಾದಿಗಳಿಂದ ತೆರವುಗೊಳಿಸಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *