Fact Check | ಇದು ಮತೀಯ ಗೂಂಡಾಗಿರಿ ಘಟನೆ ಹೊರತು ಲವ್ ಜಿಹಾದ್ ಅಲ್ಲ

“ಈ ವಿಡಿಯೋ ನೋಡಿ ಬುರ್ಖಾ ಧರಿಸಿರುವ ಯುವತಿಯು ಹಿಂದೂ ಯುವತಿಗೆ ಬುರ್ಖಾ ಧರಿಸಲು ಹೇಳಿದ್ದಾಳೆ, ಬಳಿಕ ಮುಸ್ಲಿಂ ಯುವಕನೊಂದಿಗೆ ಲವ್‌ ಜಿಹಾದ್‌ಗೆ ತಳ್ಳಲು ಪ್ರಯತ್ನಿಸಿದ್ದಾಳೆ.. ಇದೀಗ ಈಕೆಗೆ ಹಿಂದೂ ಕಾರ್ಯಕರ್ತರು ಬುದ್ದಿ ಕಲಿಸಿದ್ದಾರೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅದರಲ್ಲಿಯೂ ಪ್ರಮುಖವಾಗಿ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯ  ಪ್ರತಿಪಾದಕರು ಈ ವಿಡಿಯೋವನ್ನು ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದು, ಇದೊಂದು ಲವ್‌ ಜಿಹಾದ್‌ ಎಂದು ಬಿಂಬಿಸುತ್ತಿದ್ದಾರೆ. ಇದನ್ನೇ ನಿಜವೆಂದು ನಂಬಿರುವ ಅನೇಕರು ವಿವಿಧ ರೀತಿಯಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌
ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸತ್ಯಶೋಧನೆ ನಡೆಸಲು ವಿಡಿಯೋದ ಕೆಲ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಸಿದ್ಧಿಕ್‌ ಶಾಮಾಜ್‌ ಎಂಬ ಖಾತೆಯೊಂದು ಕಾಣಿಸಿಕೊಂಡಿದೆ. ಈ ವಿಡಿಯೋವನ್ನು 19 ನವೆಂಬರ್‌ 2021ರಂದು ಹಂಚಿಕೊಳ್ಳಲಾಗಿದೆ.

ಇದರಲ್ಲಿ “ಸೋಮವಾರಪೇಟೆ (ಕೊಡಗು) ಈಗ ಸಂಘಪರಿವಾರದ ಭಯೋತ್ಪಾದಕ ಕೇಂದ್ರವಾಗಿ ಬದಲಾಗುತ್ತಿದೆ. ಇಂದು ನಡೆದ 3ನೇ ಘಟನೆ ಇದಾಗಿದ್ದು, ಹಿಂದೂ ಸ್ನೇಹಿತನಿಗೆ ಬುರ್ಖಾ ನೀಡಿದ್ದಕ್ಕೆ 2 ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಸಂಘಪರಿವಾರದ ಗೂಂಡಾಗಳು ವಿಡಿಯೋ ಮಾಡಿದ ನಂತರ ಹಲ್ಲೆ ನಡೆಸಿರುವುದು ಅತ್ಯಂತ ಭಯಾನಕವಾಗಿದೆ” ಎಂದು ವಿಡಿಯೊ ಜೊತೆಗೆ ಪೋಸ್ಟ್‌ ಮಾಡಲಾಗಿದೆ.

ಇನ್ನು ವಿಡಿಯೊದಲ್ಲಿ ದಾಳಿಗೊಳಗಾದ ಯುವತಿಯ ತಂದೆ ಮಾಹಿತಿ ನೀಡಿರುವ ಪ್ರಕಾರ  “ಮುಸ್ಲಿಂ ಯುವತಿ, ಕಾಲೇಜಿಗೆ ತೆರಳುವಾಗ ಬುರ್ಖಾ ತೆಗೆದು ತನ್ನ ಕ್ರೈಸ್ತ ಗೆಳತಿಗೆ ಕೊಟ್ಟು ಸಂಜೆಯ ವೇಳೆಗೆ ಮರಳಿಸುವಂತೆ ಕೇಳಿದ್ದಾಳೆ. ಆದರೆ ಅಂದು ಕ್ರೈಸ್ತ ವಿದ್ಯಾರ್ಥಿನಿ ಕಾಲೇಜಿಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆಯ ಸ್ನೇಹಿತೆ ಮುಸ್ಲಿಂ ಯುವತಿಗೆ ಬುರ್ಖಾ ಹಿಂದಿರುಗಿಸಲು ಕಾಯುತ್ತಿದ್ದ ವೇಳೆ ದಾಳಿ ನಡೆಸಿದ 40 ಕ್ಕೂ ಹೆಚ್ಚು ಬಲಪಂಥೀಯ ಗೂಂಡಾಗಳು ಆಕೆಯನ್ನು ಬೆದರಿಸಿ, ಹಲ್ಲೆ ನಡೆಸಿದ್ದಾರೆ.” ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ

ಈ ಕುರಿತು, ಕನ್ನಡ ಪ್ರಭ, ದ ನ್ಯೂಸ್‌ ಮಿನಿಟ್‌ ಸೇರಿದ ಹಾಗೆ ಹಲವು ಮಾಧ್ಯಮಗಳು ಕೂಡ ಈ ಕುರಿತು ವರದಿಯನ್ನು ಮಾಡಿವೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಪ್ರಜ್ವಲ್ ಮತ್ತು ಕೌಶಿಕ್ ಎಂಬುವರರನ್ನು ಬಂಧಿಸಿದ್ದರು. ಹಾಗಾಗಿ ಈ ಸಂಪೂರ್ಣ ಪ್ರಕರಣವನ್ನು ಪರಿಶೀಲನೆ ನಡೆಸಿದಾಗ ಇದು ಅನೈತಿಕ ಪೊಲೀಸ್‌ಗಿರಿ ವಿಚಾರಕ್ಕೆ ಸಂಬಂಧಿಸಿದ್ದಾಗಿದ್ದು, ಲವ್‌ ಜಿಹಾದ್‌ಗೆ ಸಂಬಂಧಿಸಿದ ಪ್ರಕರಣವಲ್ಲ..


ಇದನ್ನೂ ಓದಿ : Fact Check | ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ಈ ವಿಡಿಯೋ ನೋಡಿ : Fact Check | ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *