Fact Check: ಕರಾವಳಿಯಲ್ಲಿ ಮುಸ್ಲಿಮರು ಹಿಂದೂ ದೇವಾಲಯವನ್ನ ಮಸೀದಿಯನ್ನಾಗಿ ಮಾಡಿದ್ದಾರೆ ಎಂಬುದು ನಿಜವಲ್ಲ

ಇತ್ತೀಚೆಗೆ ಭಾರತದ ಅನೇಕ ಪ್ರಮುಖ ಮಸೀದಿಗಳನ್ನು, ಪ್ರವಾಸಿ ತಾಣಗಳನ್ನು ಈ ಹಿಂದೆ ಇವು ದೇವಸ್ಥಾನ ಆಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ. ಜಗತ್‌ ಪ್ರಸಿದ್ದ ತಾಜ್‌ ಮಹಲ್, ಕುತುಬ್ ಮಿನಾರ್ ಸಹ ಶಿವನ ದೇವಾಲಯಗಳಾಗಿದ್ದವು ಎಂದು ಪ್ರತಿಪಾದಿಸಲಾಗುತ್ತಿದೆ.

ಅದೇ ರೀತಿ ಈಗ, “ಕರ್ನಾಟಕ ಕರಾವಳಿ ಪ್ರದೇಶದಲ್ಲಿ, ಮುಸ್ಲಿಮರು ಹಿಂದೂ ದೇವಾಲಯವನ್ನು ಆಕ್ರಮಿಸಿಕೊಂಡು ಮಸೀದಿಯನ್ನಾಗಿ ಮಾಡಿದ್ದಾರೆ. ಅಥವಾ ಯಾವುದೋ ಮಸೀದಿಯೊಳಗೆ ಒಂದು ಪುರಾತನ ದೇವಾಲಯ ಅಡಗಿಸಿಡಲಾಗಿದೆ. ಅಥವಾ ಸುಂದರ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯದ ಸುತ್ತ ಗೋಡೆಗಳನ್ನು ಕಟ್ಟಿ ದೇವಾಲಯ ಕಾಣದಂತೆ ಮಾಡಲಾಗಿದೆ. ಕನ್ನಡ ಸಂಘಟನೆಯವರು ಎಲ್ಲಿದ್ದಾರೆ?” ಎಂದು ಪ್ರತಿಪಾದಿಸಿದ ವಿಡಿಯೋ ಒಂದು ವಾಟ್ಸಾಪ್‌ನಲ್ಲಿ ಹಲವಾರು ದಿನಗಳಿಂದ ಹರಿದಾಡುತ್ತಿವೆ.

ಈ ವಿವಾದ ಮೊದಲು ಆರಂಭಗೊಂಡದ್ದು, ಮಸೀದಿ ನವೀಕರಣಕ್ಕಾಗಿ ಸಿದ್ದತೆ ನಡೆಸುತ್ತಿರುವಾಗ ಮಳಲಿಯ ಅಕ್ಕ-ಪಕ್ಕದ ಗ್ರಾಮಸ್ಥರು ಮತ್ತು ಬಜರಂಗದಳದ ಕಾರ್ಯತರ್ಕರು ಅದಕ್ಕೆ ಅಡ್ಡಿಪಡಿಸಿ ಇದು ದೇವಸ್ಥಾನ ಎಂದು ಆರೋಪಿಸಿದರು. ನಂತರ ಕನ್ನಡದ ಸುದ್ದಿ ಮಾಧ್ಯಮಗಳಾದ ಟಿವಿ9 ಕನ್ನಡಉದಯವಾಣಿನ್ಯೂಸ್‌18 ಕನ್ನಡಏಷ್ಯಾನೆಟ್‌ ಸುವರ್ಣನ್ಯೂಸ್‌ಪಬ್ಲಿಕ್ ಟಿವಿಹೊಸ ದಿಗಂತಒನ್‌ ಇಂಡಿಯಾ ಕನ್ನಡ ಮತ್ತು ಬಿಟಿವಿ ಸೇರಿದಂತೆ ಹಲವಾರು ಕನ್ನಡ ಮಾಧ್ಯಮಗಳು, “ದರ್ಗಾ ಕಟ್ಟಡ ಒಡೆದಾಗ ದೇವಸ್ಥಾನ ಪತ್ತೆಯಾಗಿದೆ” ಎಂದು ಬಜರಂಗದಳ ಹಬ್ಬಿಸಿರುವ ವಾದವನ್ನೇ ವಾಸ್ತವ ಎಂಬಂತೆ ಸುದ್ದಿ ಬಿತ್ತರಿಸಿವೆ. ಆಗಾದರೆ ಮಸೀದಿ ನಿಜಕ್ಕೂ ದೇವಸ್ಥಾನವೇ, ಮುಸ್ಲೀಮರು ಹಿಂದು ದೇವಾಲಯವನ್ನು ವಶಪಡಿಸಿಕೊಂಡಿದ್ದಾರೆಯೇ ಎಂದು ತಿಳಿಯೋಣ.

ಫ್ಯಾಕ್ಟ್‌ಚೆಕ್: ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ಬಳಿಯ ಮಳಲಿ ಪೇಟೆ ಎಂಬಲ್ಲಿ ಇರುವ ಈ ಮಸೀದಿ ಸುಮಾರು 900 ವರ್ಷಗಳಷ್ಟು ಇತಿಹಾಸವಿರುವ ಪ್ರಾಚೀನ ಮಸೀದಿಯಾಗಿದೆ. ಇದನ್ನು ಕೇರಳ ಮಾದರಿಯ ಇಂಡೋ-ಇಸ್ಲಾಮಿಕ್‌‌‌ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದ್ದು. ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ, “ವಿಡಿಯೊದಲ್ಲಿ ಇರುವ ಮಸೀದಿಯು ದ್ರಾವಿಡ ಶೈಲಿಯ ಒಂದು ಪ್ರಬೇಧವಾದ ಕೇರಳ ವಾಸ್ತುವನ್ನು ಬಳಸಿಕೊಂಡಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾದ್ದರಿಂದ, ಇಳಿಜಾರಾದ ಮಾಡು ಬಹಳ ಅಗತ್ಯ.‌ ಮಾಡನ್ನು ಮುಳಿ ಹುಲ್ಲು ಅಥವಾ ಹಂಚು ಬಳಸಿ ಕಟ್ಟಲಾಗಿದೆ. ಒಳಗಿನ ಕಂಬವು ವಿಜಯನಗರ ಕಾಲದ್ದು.‌ ಹೀಗಾಗಿ ಇದು ಸುಮಾರು 15-16ನೇ ಶತಮಾನದ್ದೆಂದು ಹೇಳಬಹುದು. ಹಿಂದೂ ಮುಸ್ಲಿಂ ಮೈತ್ರಿಯನ್ನು ಸಾರುವ ಇಂಥ ಕಟ್ಟಡಗಳು ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಹೇರಳವಾಗಿ ಕಂಡು ಬರುತ್ತವೆ” ಎಂದು ಹೇಳಿದ್ದಾರೆ.

ಕೆಲವು ಸ್ಥಳಿಯರು ಮತ್ತು ಭಜರಂಗದಳ ಸಂಘಟನೆಯ ಮುಖಂಡರು ಮಸೀದಿಯ ವಾಸ್ತ್ರುಶಿಲ್ಪ ದೇವಸ್ಥಾನದ ಶೈಲಿಯಲ್ಲಿರುವ ಕಾರಣಕ್ಕಾಗಿ ಇದು ಹಿಂದೆ ದೇವಾಲಯವಾಗಿತ್ತು ಎಂದು ಅನುಮಾನ ವ್ಯಕ್ತಪಡಿಸಿ ನ್ಯಾಯಲಯದ ಮೊರೆ ಹೋಗಿದ್ದಾರೆ. ಸಧ್ಯ ಈ ಪ್ರಕರಣ ನ್ಯಾಯಲಯದಲ್ಲಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ. ಎ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮಸೀದಿಯ ವಿವರಗಳ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದು “ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆಗೆ ಸಿದ್ದ ಇದ್ದೇವೆ. ಇದು ಇಂದು ನೆನ್ನೆ ನಿರ್ಮಾಣವಾದ ಮಸೀದಿ ಅಲ್ಲ ಪಹಣಿ ಪತ್ರ ಪದ್ದತಿ ಜಾರಿಯಾಗುವುದಕ್ಕಿಂತಲೂ ಮುಂಚೆ ಇದ್ದ ‘ಅಡಂಗಲ್” ಎಂಬ ಕಂದಾಯ ದಾಖಲೆಗಳಲ್ಲಿಯೇ ಮಸೀದಿಯ ಉಲ್ಲೇಖ ಇದೆ. ಸಂಶೋಧಕ ದಿ. ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ ‘ವಿದೇಶಿ ಪ್ರವಾಸಿ ಕಂಡ ಅಬ್ಬಕ್ಕ’ ಕೃತಿಯಲ್ಲಿ ಈ ಮಸೀದಿಯ ಕುರಿತ ಉಲ್ಲೇಖ ಇದೆ. ಈ ಮಸೀದಿಗೆ ರಾಜರ ಕಾಲದಿಂದಲೂ ತಸ್ತೀಕ್, ಎಣ್ಣೆ, ಆಣೆ, ಪೈಸೆ, ರೂಪಾಯಿ ಸಂದಾಯವಾಗುತ್ತಿದ್ದ ಬಗ್ಗೆಯೂ ನಮ್ಮಲ್ಲಿ ದಾಖಲೆಗಳಿವೆ’” ಎಂದಿದ್ದಾರೆ.

“ಮಳಲಿಯ ಈ ಮಸೀದಿಯಲ್ಲಿ ನಮಾಜ್ ಮಾಡಲು ಜಾಗ ಸಾಕಾಗದ ಕಾರಣ ನವೀಕರಣಕ್ಕಾಗಿ  2022 ನವೆಂಬರ್ 9ರಂದು ಕೆಡವಿದ್ದೆವು. ಅಲ್ಲಿದ್ದ ಕಾಷ್ಟಶಿಲ್ಪವನ್ನು ನೋಡಿ ಕೆಲವರು ಅಲ್ಲಿ ದೇವಸ್ಥಾನ ಇತ್ತೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂದೆ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಅನೇಕ ಮಸೀದಿಗಳಲ್ಲಿ ಇಲ್ಲಿನ ಸಾಂಪ್ರದಾಯಿಕ ಶೈಲಿಯ ಕಾಷ್ಟಶಿಲ್ಪಗಳಿವೆ. ಇದರಲ್ಲೇನು ವಿಶೇಷತೆ ಇಲ್ಲ. ಎಂದಿದ್ದಾರೆ.

ಇದೇ ರೀತಿ ಹಿಂದು ದೇವಸ್ಥಾನಗಳ ಶೈಲಿಯ ಮಸೀದಿಗಳು ಕೇರಳದಲ್ಲಿಯೂ ಇದ್ದು ಅವುಗಳನ್ನು ನೀವು ಇಲ್ಲಿ ನೋಡಬಹುದು.

ಆದ್ದರಿಂದ ಸಧ್ಯ ಈ ಕುರಿತು ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ, ಮುಸ್ಲೀಮರು ಹಿಂದು ದೇವಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ಸುಳ್ಳಾಗಿದೆ.


ಇದನ್ನು ಓದಿ: Fact Check: ಸೋನಮ್ ವಾಂಗ್ಚುಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *