Fact Check | ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರಸಲಾಗಿದೆ ಎಂಬುದು ಸುಳ್ಳು

“ಪಡಿತರ ಧಾನ್ಯ ವಿತರಣೆ ವ್ಯವಸ್ಥೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರೆಸಲಾಗಿದೆ. ಹಾಗಾಗಿ ಈ ಅಕ್ಕಿಗಳು ಸರಿಯಾಗಿ ಬೇಯುವುದಿಲ್ಲ, ಮತ್ತು  ಈ ಪಡಿತರ ಅಕ್ಕಿಯನ್ನು ನೀರಿನಲ್ಲಿ ತೊಳೆಯುವಾಗ ಪ್ಲಾಸ್ಟಿಕ್‌ ಅಕ್ಕಿಗಳು ನೀರಿನಲ್ಲಿ ತೇಲುತ್ತದೆ. ” ಎಂದು ಸಾಕಷ್ಟು ಮಂದಿ ದೂರಿದ್ದು, ಇದು ಪ್ಲಾಸ್ಟಿಕ್‌ ಅಕ್ಕಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ದೂರು ಕೂಡ ನೀಡಿದ್ದಾರೆ.

ವಾಸ್ತವದಲ್ಲಿ ಇದೇ ರೀತಿಯ ಅಕ್ಕಿಯ ಕುರಿತು ಹಲವು ವರ್ಷಗಳ ಹಿಂದೆ ವರದಿಯಾಗಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಇತ್ತೀಚೆಗಿನ ಸಾಮಾಜಿಕ ಜಾಲತಾಣದಲ್ಲಿ ಪ್ಲಾಸ್ಟಿಕ್‌ ಅಕ್ಕಿ ಯಾವುದು ಎಂಬುದನ್ನು ಕಂಡುಹಿಡಿಯಲು ಹಲವು ರೀತಿಯಾದ ಸೂಚನೆಗಳನ್ನು ನೀಡಲಾಗಿತ್ತು. ಇದೇ ವಿಡಿಯೋಗಳ ಆಧಾರದ ಮೇಲೆ ಸಾಕಷ್ಟು ಮಂದಿ ತಮಗೆ ಸಿಗುತ್ತಿರುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿಯನ್ನು ಬೆರೆಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ

ಫ್ಯಾಕ್ಟ್‌ಚೆಕ್‌

ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ ವಿಜಯವಾಣಿ ಪತ್ರಿಕೆಯ ವರದಿಯೊಂದು ಕಂಡು ಬಂದಿದೆ. ಅದರಲ್ಲಿ “ಆತಂಕಕ್ಕೆ ಕಾರಣವಾದ ಸಾರವರ್ಧಿತ ಅಕ್ಕಿ: ಮಾಹಿತಿ ಇಲ್ಲದೆ ಪ್ಲಾಸ್ಟಿಕ್‌ ಅಕ್ಕಿ ಎಂದು ತಿಳಿಯುತ್ತಿರುವ ಪಡಿತರ ಫಲಾನುಭವಿಗಳು” ಎಂಬ ಶಿರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದೆ. ಈ ವರದಿಯನ್ನೇ ಆಧಾರವಾಗಿ ಇಟ್ಟುಕೊಂಡು ಇನ್ನಷ್ಟು ಅಸಲಿ ಸಂಗತಿ ಬಹಿರಂಗಗೊಂಡಿದೆ.

ಕೇಂದ್ರ ಸರಕಾರದ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ 1 ಕೆ.ಜಿ ಅಕ್ಕಿಗೆ 10 ಗ್ರಾಂ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗುತ್ತಿದೆ. ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣದ ಅಂಶ, ಫೋಲಿಕ್‌ ಆಮ್ಲ, ಹಾಗೂ ಬಿ ವಿಟಮಿನ್‌ ಅಂಶಗಳಿವೆ. ಪ್ರತಿ ತಿಂಗಳು ಬಿಪಿಎಲ್‌ ಕಾರ್ಡ್‌ ಹೊಂದಿರುವ ಪ್ರತಿ ವ್ಯಕ್ತಿಗೆ ನೀಡುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಸಾರವರ್ಧಿತ ಮಿಶ್ರಿತ ಅಕ್ಕಿ ಹಾಗೂ 5 ಕೆ.ಜಿ ಸಾದಾ ಅಕ್ಕಿಯನ್ನು ನೀಡಲು ಸರಕಾರದ ಮಾರ್ಗಸೂಚಿ ಇದೆ ಎಂಬುದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ಸೂಚನೆಯ ಅನ್ವಯ ಪಡಿತರ ವಿತರಕರು ಫಲಾನುಭವಿಗಳಿಗೆ ಇದೇ ರೀತಿ ಸಾರವರ್ಧಿತ ಅಕ್ಕಿ ವಿತರಣೆಯನ್ನು  ಕೈಗೊಳ್ಳಬೇಕು. ಹಾಗಾಗಿ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಬೆರಸಲಾಗಿದೆ ಎಂಬುದು ಸುಳ್ಳಾಗಿದೆ. ಮತ್ತು ಇಂತಹ ಸಂದೇಶಗಳನ್ನು ನಂಬುವ ಮೊದಲು ಅಥವಾ ಯಾರಿಗಾದರು ಶೇರ್‌ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಳ್ಳಿ


ಇದನ್ನೂ ಓದಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ಈ ವಿಡಿಯೋ ನೋಡಿ : Fact Check: ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *